ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಳಗಾಂವದಿಂದ ಹೆಬ್ಬಾರಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ಸುಮಾರು 5 ಕಿಮೀ ಉದ್ದದ ಮಣ್ಣಿನ ರಸ್ತೆ ಪ್ರತಿವರ್ಷ ಮಳೆಗಾಲದಲ್ಲಿ ಸಂಪೂರ್ಣ ಹದಗೆಡುತ್ತದೆ.

ಕಾರವಾರ: ಅಂಕೋಲಾ ತಾಲೂಕಿನ ಹೆಬ್ಬಾರಗುಡ್ಡ ಗ್ರಾಮದ ಜನರಿಗೆ ಸರ್ವಋತು ರಸ್ತೆ ಸಂಪರ್ಕ ಇಲ್ಲದೆ ಬಸವಳಿಯುವಂತಾಗಿದೆ. ಮಳೆಗಾಲ ಆರಂಭವಾದರೆ ಸಾಕು, ಗ್ರಾಮದ ಸಂಪರ್ಕವೇ ಕಡಿತಗೊಳ್ಳುತ್ತದೆ. ಹದಗೆಟ್ಟ ಮಣ್ಣಿನ ರಸ್ತೆಯಲ್ಲಿ ವಾಹನ ಸಂಚಾರ ದುಸ್ತರವಾಗಿದ್ದು, ಅನಾರೋಗ್ಯ ಪೀಡಿತರನ್ನು ಕಂಬಳಿಯಲ್ಲಿ ಹೊತ್ತು ಸಾಗಿಸುವ ದುಸ್ಥಿತಿ ಇಂದಿಗೂ ಮುಂದುವರಿದಿದೆ. ಶೀಘ್ರ ಸರ್ವಋತು ರಸ್ತೆ ನಿರ್ಮಿಸಿಕೊಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಳಗಾಂವದಿಂದ ಹೆಬ್ಬಾರಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ಸುಮಾರು 5 ಕಿಮೀ ಉದ್ದದ ಮಣ್ಣಿನ ರಸ್ತೆ ಪ್ರತಿವರ್ಷ ಮಳೆಗಾಲದಲ್ಲಿ ಸಂಪೂರ್ಣ ಹದಗೆಡುತ್ತದೆ. ಸಮರ್ಪಕ ಗಟಾರ ಹಾಗೂ ಮೋರಿಗಳ ವ್ಯವಸ್ಥೆ ಇಲ್ಲದ ಕಾರಣ ಮಳೆನೀರು ರಸ್ತೆಯ ಮೇಲೆಯೇ ಹರಿದು ಮಣ್ಣು ಕೊಚ್ಚಿಹೋಗುತ್ತದೆ.

ಪರಿಣಾಮ ರಸ್ತೆ ಹೊಂಡಮಯವಾಗಿ, ದ್ವಿಚಕ್ರ ವಾಹನಗಳ ಸಂಚಾರವೂ ಅಪಾಯಕಾರಿಯಾಗುತ್ತದೆ. ಜಾರುವ ರಸ್ತೆಯಲ್ಲಿ ಸ್ಥಳೀಯರು ಬಿದ್ದು ಗಾಯಗೊಂಡ ಘಟನೆಗಳೂ ನಡೆದಿವೆ. ನಾಲ್ಕು ಚಕ್ರದ ವಾಹನಗಳ ಸಂಚಾರವಂತೂ ಮಳೆಗಾಲದಲ್ಲಿ ಅಸಾಧ್ಯವಾಗಿದೆ.

ವಿಪರ್ಯಾಸವೆಂದರೆ, ಈ ರಸ್ತೆಯ ಅಭಿವೃದ್ಧಿಗೆ ಕಳೆದ ವರ್ಷ ಕೋಟ್ಯಂತರ ರು. ಅನುದಾನ ಮಂಜೂರಾಗಿ, ಲೋಕೋಪಯೋಗಿ ಇಲಾಖೆ ಮೂಲಕ ಕಾಮಗಾರಿಯೂ ಆರಂಭವಾಗಿತ್ತು. ಸಿಮೆಂಟ್, ಮರಳು, ಜಲ್ಲಿ ಸೇರಿದಂತೆ ನಿರ್ಮಾಣ ಸಾಮಗ್ರಿಗಳನ್ನು ಸ್ಥಳದಲ್ಲಿ ಸಂಗ್ರಹಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಗುತ್ತಿಗೆದಾರರು ಕಾಮಗಾರಿ ಸ್ಥಗಿತಗೊಳಿಸಿದ್ದಾರೆ.

ಬಳಿಕ ಮಳೆನೀರಿನ ರಭಸಕ್ಕೆ ಸಂಗ್ರಹಿಸಿದ್ದ ಸಾಮಗ್ರಿಗಳೂ ಕೊಚ್ಚಿಹೋಗಿವೆ. ಅನಿವಾರ್ಯವಾಗಿ ಗ್ರಾಮಸ್ಥರೇ ದ್ವಿಚಕ್ರ ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ತಾತ್ಕಾಲಿಕವಾಗಿ ರಸ್ತೆ ಸರಿಪಡಿಸಿಕೊಂಡಿದ್ದರು. ಆದರೆ ಅದೂ ಈಗ ಹದಗೆಟ್ಟಿದೆ. ಕಾಮಗಾರಿ ಪುನರಾರಂಭಿಸುವ ನಿಟ್ಟಿನಲ್ಲಿ ಅಧಿಕಾರಿಗಳಾಗಲಿ, ಗುತ್ತಿಗೆದಾರರಾಗಲಿ ಇತ್ತ ಗಮನಹರಿಸದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಮೂಲ ಸೌಕರ್ಯಗಳಿಂದ ವಂಚಿತ ಗ್ರಾಮ: ಚುನಾವಣೆಯ ಸಂದರ್ಭದಲ್ಲಿ ಮಾತ್ರ ರಾಜಕೀಯ ಮುಖಂಡರಿಗೆ ನೆನಪಾಗುವ ಹೆಬ್ಬಾರಗುಡ್ಡ, ನಂತರ ನಿರ್ಲಕ್ಷ್ಯಕ್ಕೆ ಒಳಗಾಗುತ್ತದೆ ಎಂಬುದು ಗ್ರಾಮಸ್ಥರ ಅಳಲು. ಸಿದ್ದಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಈ ಗ್ರಾಮಕ್ಕೆ ಇಂದಿಗೂ ಶಾಸಕರು ಹಾಗೂ ಸಚಿವರು ಭೇಟಿ ನೀಡಿಲ್ಲ ಎಂಬ ಆರೋಪವೂ ಇದೆ. ರಸ್ತೆ ಮಾತ್ರವಲ್ಲದೆ, ಹಲವು ಮೂಲ ಸೌಕರ್ಯಗಳ ಕೊರತೆಯಿಂದ ಗ್ರಾಮಸ್ಥರು ಸಂಕಷ್ಟ ಎದುರಿಸುತ್ತಿದ್ದಾರೆ.

ಮಳೆಗಾಲದಲ್ಲಿ ತುರ್ತು ವೈದ್ಯಕೀಯ ಸೇವೆ ಅಗತ್ಯವಿರುವವರನ್ನು ನಾಲ್ಕಾರು ಜನರು ಸೇರಿ ಕಂಬಳಿಯಲ್ಲಿ ಹೊತ್ತು ಸಾಗಿಸಬೇಕಾದ ಪರಿಸ್ಥಿತಿ ಇದೆ. ಮಕ್ಕಳು ಶಿಕ್ಷಣಕ್ಕೂ ಪರದಾಡುವಂತಾಗಿದೆ.

ಚುನಾವಣೆ ಬಹಿಷ್ಕಾರದ ಎಚ್ಚರಿಕೆ: ಮುಂಬರುವ ವಿಧಾನಸಭೆ ಚುನಾವಣೆಯೊಳಗೆ ರಸ್ತೆ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸದಿದ್ದರೆ ಚುನಾವಣೆ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ. ಗ್ರಾಮಕ್ಕೆ ಸರ್ವಋತು ರಸ್ತೆ ಕಲ್ಪಿಸುವ ಮೂಲಕ ವರ್ಷವಿಡೀ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಕೇವಲ ಚುನಾವಣೆಯ ಸಂದರ್ಭದಲ್ಲಿ ಭರವಸೆ ನೀಡುವ ಬದಲು ಜನರ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬುದು ಹೆಬ್ಬಾರಗುಡ್ಡ ಗ್ರಾಮಸ್ಥರ ಒಕ್ಕೊರಲ ಆಗ್ರಹವಾಗಿದೆ.

ಅನುಕೂಲ ಮಾಡಿಕೊಡಿ: ಶೀಘ್ರ ಸರ್ವಋತು ರಸ್ತೆ ನಿರ್ಮಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಇಲ್ಲವಾದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯನ್ನು ಬಹಿಷ್ಕರಿಸಿ ತಕ್ಕ ಉತ್ತರ ನೀಡುತ್ತೇವೆ ಎಂದು ಗ್ರಾಮದ ಹಿರಿಯರಾದ ಕೃಷ್ಣ ತಿಮ್ಮಣ್ಣ ಗಾಂವ್ಕರ ತಿಳಿಸಿದರು.

ಪ್ರತಿಭಟನೆ ಎಚ್ಚರಿಕೆ: ಪ್ರತಿದಿನ 10- 12 ಕಿಮೀ ದ್ವಿಚಕ್ರ ವಾಹನದಲ್ಲಿ ಸಂಚರಿಸಿ ಮಕ್ಕಳಿಗೆ ವಿದ್ಯಾಭ್ಯಾಸ ಒದಗಿಸುತ್ತಿದ್ದೇನೆ. ಮಳೆಗಾಲಕ್ಕೂ ಮುನ್ನ ಸರ್ವಋತು ರಸ್ತೆ ನಿರ್ಮಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಹಾಗೂ ಲೋಕೋಪಯೋಗಿ ಇಲಾಖೆ ಎದುರು ಉಗ್ರ ಪ್ರತಿಭಟನೆ ನಡೆಸುತ್ತೇವೆ ಎಂದು ಸ್ಥಳೀಯರಾದ ನಾಗರಾಜ ಕೇಶವ ಬಾಂದಿ ತಿಳಿಸಿದರು.