ಸಾರಾಂಶ
ಕಾರವಾರ: ಅಂಕೋಲಾ ಮತ್ತು ಕುಮಟಾ ತಾಲೂಕಿನ ನಡುವಿನ ಸಂಪರ್ಕ ಸೇತುವೆಯಾಗಿರುವ ಮಂಜುಗುಣಿ ಗಂಗಾವಳಿ ಸೇತುವೆಯ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿ ಜಯಕರ್ನಾಟಕ ಜನಪರ ವೇದಿಕೆ ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.
ಜಿಲ್ಲೆಯ ಕುಮಟಾ ಮತ್ತು ಅಂಕೋಲಾ ತಾಲೂಕಿನ ನಡುವಿನ ಸಂಪರ್ಕ ಸೇತುವೆಯಾಗಿರುವ ಮಂಜಗುಣಿ ಗಂಗಾವಳಿ ಸೇತುವೆ ಕಾಮಗಾರಿಯು ಬಹುಕೋಟಿ ವೆಚ್ಚದಲ್ಲಿ ಆರಂಭಗೊಂಡು 6 ವರ್ಷಗಳು ಕಳೆದಿವೆ. ಈ ಕಾಮಗಾರಿಯ ಕಾರಣದಿಂದಾಗಿ ಎರಡು ವರ್ಷ ಗಂಗಾವಳಿ ನದಿಯ ಪ್ರವಾಹದಿಂದ ಕೃತಕವಾಗಿ ನೆರೆ ಉಲ್ಬಣವಾಗಲು ಕಾರಣವಾಗಿತ್ತು.ಇದು ದೇಶದ ಪ್ರಸಿದ್ಧ ಪ್ರವಾಸಿ ಸ್ಥಳವಾಗಿರುವ ಗೋಕರ್ಣವನ್ನು ಸಂಪರ್ಕಿಸುವ ಸೇತುವೆಯು ಆಗಲಿದೆ. ನಿತ್ಯವೂ ಸಾವಿರಾರು ಜನರು ಶಾಲಾ- ಕಾಲೇಜು ಉದ್ಯೋಗ ಮತ್ತು ಇತರ ಕಾರಣಗಳಿಂದ ಈ ಸೇತುವೆಯ ಸಂಪರ್ಕವನ್ನೇ ಆಶ್ರಯಿಸಿದ್ದಾರೆ. ಸ್ಥಳೀಯರು ಮತ್ತು ವಿವಿಧ ಸಂಘಟನೆಗಳ ಹೋರಾಟದ ಫಲವಾಗಿ ಸೇತುವೆಯ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ.
ಸೇತುವೆಯ ಎರಡು ಭಾಗಗಳಲ್ಲಿ ರಸ್ತೆ ಸಂಪರ್ಕಗೊಂಡಿಲ್ಲ. ಮಣ್ಣು ಭರಾವು ಮಾಡಿ ತಾತ್ಕಾಲಿಕ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದ ಸಂಚಾರವು ಸಮರ್ಪಕವಾಗಿಲ್ಲ ಮತ್ತು ಪಾದಚಾರಿಗಳಿಗೂ ಸಾರ್ವಜನಿಕರಿಗೂ ಅಡಚಣೆ ಉಂಟಾಗುತ್ತಿದೆ.ಈ ಹಿನ್ನೆಲೆ ತುರ್ತಾಗಿ ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು. ಮುಂದಿನ ಒಂದು ತಿಂಗಳ ಒಳಗೆ ಸೇತುವೆಯ ಕಾಮಗಾರಿ ಪೂರ್ಣಗೊಳಿಸಬೇಕು ಇಲ್ಲವೇ ಜಿಲ್ಲಾಡಳಿತ ಅಥವಾ ಸಂಬಂಧಿಸಿದ ಜನಪ್ರತಿನಿಧಿಗಳು ಅಧಿಕಾರಿಗಳು ಕಾಮಗಾರಿ ಅಪೂರ್ಣವಾಗಲು ಇರುವ ತೊಡಕುಗಳು ಮತ್ತು ಕಾರಣವನ್ನು ಬಹಿರಂಗಪಡಿಸಬೇಕು. ಇಲ್ಲವಾದಲ್ಲಿ ಸ್ಥಳೀಯ ಗ್ರಾಮಸ್ಥರ ಸಹಕಾರದಿಂದ ಉಗ್ರ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಜಯಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ದಿಲೀಪ್ ಜಿ. ಅರ್ಗೇಕರ್. ಜಿಲ್ಲಾ ಕಾರ್ಯಾಧ್ಯಕ್ಷ ರೋಶನ್ ಹರಿಕಂತ್ರ, ಜಿಲ್ಲಾ ಕಾರ್ಯದರ್ಶಿ ಸುದೇಶ್ ನಾಯ್ಕ್. ಜಿಲ್ಲಾ ಸಂಚಾಲಕ ಸುನಿಲ್ ತಾಂಡೇಲ್, ತಾಲೂಕು ಅಧ್ಯಕ್ಷ ಮೋಹನ್ ಉಳ್ವೇಕರ್, ಸಂಘಟನೆಯ ಪ್ರಮುಖರಾದ ನಂದೀಶ್ ಮಾಜಾಳಿಕರ, ಗಣರಾಜ್ ಟಾಕೇಕರ್ ಇದ್ದರು.ಬಾಡ ಕಾಂಚಿಕಾಂಬೆಗೆ ಪುಷ್ಪರಥ ಸಮರ್ಪಣೆಕುಮಟಾ: ತಾಲೂಕಿನ ಬಾಡದ ಕಾಂಚಿಕಾ ಪರಮೇಶ್ವರಿ ದೇವಾಲಯದಲ್ಲಿ ನೂತನ ನಿರ್ಮಿತ ಪುಷ್ಪರಥ ಲೋಕಾರ್ಪಣೆ ಹಾಗೂ ಉತ್ಸವ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.ವೇ. ವಿನಾಯಕ ಭಟ್ಟ ನೇತೃತ್ವದಲ್ಲಿ ಎರಡು ದಿನಗಳ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಬಳಿಕ ಧನುರ್ಲಗ್ನದ ಶುಭ ಮುಹೂರ್ತದಲ್ಲಿ ಉದ್ಯಮಿ ದಿನೇಶ ಆರ್. ನಾಯಕ ದಂಪತಿ ಪುಷ್ಪರಥದಲ್ಲಿ ವಿರಾಜಮಾನರಾದ ಕಾಂಚಿಕಾ ಪರಮೇಶ್ವರಿ ರಜತ ಮೂರ್ತಿಯನ್ನು ಪೂಜಿಸಿದರು.
ಬಳಿಕ ನೆರೆದ ಅಪಾರ ಸಂಖ್ಯೆಯ ಭಕ್ತರ ಜಯಘೋಷದ ನಡುವೆ ದೇವಸ್ಥಾನದ ಪ್ರಾಕಾರದಲ್ಲಿ ವೇದಘೋಷ, ಪಂಚವಾದ್ಯದೊಂದಿಗೆ ಪುಷ್ಪರಥದಲ್ಲಿ ಉತ್ಸವ ಸಾಂಗವಾಗಿ ನೆರವೇರಿತು.ಈ ವೇಳೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ಎಸ್.ಎಸ್. ಹೆಗಡೆ ಹಾಗೂ ಎಲ್ಲ ಸದಸ್ಯರು, ಲಕ್ಷ ದೀಪೋತ್ಸವ ಸಮಿತಿಯ ಅಧ್ಯಕ್ಷ ಆರ್.ಜಿ. ನಾಯ್ಕ, ಎಂ.ಎಂ. ಹೆಗಡೆ, ಜಗನ್ನಾಥ ನಾಯ್ಕ, ರತ್ನಾಕರ ನಾಯ್ಕ ಇತರರು ಇದ್ದರು. ಮುಂದಿನ ದಿನದಲ್ಲಿ ಪುಷ್ಪರಥವನ್ನು ಸುಮಾರು ಒಂದು ಕೋಟಿ ರು.ಗೂ ಹೆಚ್ಚು ವೆಚ್ಚದಲ್ಲಿ ಸಂಪೂರ್ಣವಾಗಿ ರಜತ ಆಚ್ಛಾದನೆ ಮಾಡುವ ಸಂಕಲ್ಪ ಮಾಡಲಾಗಿದೆ ಎಂದು ಅಧ್ಯಕ್ಷ ಡಾ. ಎಸ್.ಎಸ್. ಹೆಗಡೆ ತಿಳಿಸಿದ್ದಾರೆ.