ಗಂಗಾವಳಿ-ಮಂಜಗುಣಿ ರಸ್ತೆ ಸರಿಪಡಿಸಲು ಆಗ್ರಹ

| Published : Oct 20 2025, 01:04 AM IST

ಸಾರಾಂಶ

ಗಂಗಾವಳಿ ನದಿ ಅಡ್ಡಲಾಗಿ ನಿರ್ಮಿಸಿದ ಗಂಗಾವಳಿ -ಮಂಜುಗುಣಿ ಸಂಪರ್ಕ ಕಲ್ಪಿಸುವ ಸೇತುವೆ ಪೂರ್ಣಗೊಂಡು ವಾಹನಗಳ ಓಡಾಟ ಜೋರಾಗಿದೆ.

ರಸ್ತೆ ಅಂಚು ಸರಿಪಡಿಸದಿದ್ದರೆ ವಾಹನ ಸವಾರರಿಗೆ ಅಪಾಯ

ಕನ್ನಡಪ್ರಭ ವಾರ್ತೆ ಗೋಕರ್ಣ

ಗಂಗಾವಳಿ ನದಿ ಅಡ್ಡಲಾಗಿ ನಿರ್ಮಿಸಿದ ಗಂಗಾವಳಿ -ಮಂಜುಗುಣಿ ಸಂಪರ್ಕ ಕಲ್ಪಿಸುವ ಸೇತುವೆ ಪೂರ್ಣಗೊಂಡು ವಾಹನಗಳ ಓಡಾಟ ಜೋರಾಗಿದೆ. ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಖಾಸಗಿ ವಾಹನಗಳು ಸಂಚರಿಸುತ್ತಿದ್ದು, ಸೇತುವೆಯ ನಂತರ ಮಂಜುಗುಣಿ ಭಾಗದ ರಸ್ತೆಯ ಅಂಚನ್ನು ಸರಿಪಡಿಸದೆ ಬಿಟ್ಟಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

ಅಂಕೋಲಾ ಕೇಣಿ ಹಾಗೂ ತದಡಿ ಬಂದರು ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಇದಾಗಿದ್ದು, ಒಂದೆಡೆ ಹೊಂಡ ಬಿದ್ದಿದ್ದರೆ, ಸೇತುವೆ ದಾಟಿದ ಬಳಿಕ ರಸ್ತೆ ಅಂಚು ಕೊರಕಲು ಬಿದ್ದು ಹಾಳಾಗಿದೆ. ಶರವೇಗದಲ್ಲಿ ಬರುವ ವಾಹನ ಸವಾರರು ಸ್ವಲ್ಪ ಯಾಮಾರಿದರೂ ಅವಘಡ ಸಂಭವಿಸುವ ಆತಂಕ ಎದುರಾಗಿದೆ.

ಗಂಗಾವಳಿಯಲ್ಲಿ ನಡೆದ ಗಂಗಾಷ್ಟಮಿ ಜಾತ್ರೆಗೆ ಇದೇ ಮಾರ್ಗದಲ್ಲಿ ತೆರಳಿದ ಜನರು ತೀವ್ರ ತೊಂದರೆ ಅನುಭಿಸಿದ್ದು, ರಸ್ತೆ ಅಂಚನ್ನು ಸರಿಪಡಿಸುವ ಜತೆ ಇಕ್ಕಟ್ಟಾದ ಕಡೆಯಲ್ಲಿ ಸೂಚನಾ ಫಲಕ ಅಳವಡಿಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ದೀಪಾವಳಿ ಹಬ್ಬ ಹತ್ತಿರ ಬರುತ್ತಿದ್ದು, ಈ ವೇಳೆ ಸಾಲು, ಸಾಲು ರಜೆಯಿರುವುದರಿಂದ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಇದೇ ಮಾರ್ಗದಲ್ಲಿ ಸಂಚರಿಸುವುದರಿಂದ ಅಷ್ಟರೊಳಗೆ ಸಂಬಂಧಿಸಿದ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ.

ಗಂಗಾವಳಿ ಸೇತುವೆ ಪೂರ್ಣಗೊಂಡಿದ್ದರಿಂದ ಕಾರವಾರ, ಹುಬ್ಬಳ್ಳಿ ಭಾಗದಿಂದ ಪ್ರವಾಸಿತಾಣ ಪುಣ್ಯಕ್ಷೇತ್ರ ಗೋಕರ್ಣಕ್ಕೆ ಬರುವ ಪ್ರವಾಸಿಗರಿಗೆ ಈ ಮಾರ್ಗ ಹತ್ತಿರವಾಗಿದ್ದು, ನಿತ್ಯ ವಾಹನ ಸಂಚಾರ ಹೆಚ್ಚಾಗುತ್ತಿದೆ. ಇದನ್ನು ಪರಿಗಣಿಸಿ ರಸ್ತೆ ಹಾಗೂ ರಸ್ತೆ ಇಕ್ಕೆಲಗಳನ್ನು ಸಮತಟ್ಟುಗೊಳಿಸಿ ಸರಿಪಡಿಸಬೇಕು. ಇನ್ನೆರಡು ತಿಂಗಳಲ್ಲಿ ಪ್ರವಾಸಿಗರು ಮತ್ತಷ್ಟು ಭೇಟಿ ಕೊಡುವ ಕಾಲವಾಗಿದ್ದು, ಅಷ್ಟರೊಳಗೆ ಸಂಬಂಧಿಸಿದ ಇಲಾಖೆ ತ್ವರಿತವಾಗಿ ಕೆಲಸ ಪ್ರಾರಂಭಿಸಿ ಜನರಿಗೆ ಅನುಕೂಲತೆ ಒದಗಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.