ಸಾರಾಂಶ
ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಕರ ಹಾಜರಾತಿ ಮೇಲೆ ನಿಗಾ ಮತ್ತು ಬಯೋಮೆಟ್ರಿಕ್ ಅಳವಡಿಕೆ ಕಾರ್ಯವನ್ನು ಚುರುಕುಗೊಳಿಸಿ, ಕೊಡೇಕಲ್ ಗ್ರಾಮದಲ್ಲಿ ಬಾಲಕಿಯರ ಪ್ರೌಢಶಾಲೆ ಮಂಜೂರು ಮಾಡುವಂತೆ ಆಗ್ರಹಿಸಿ ಕರವೇ (ಪ್ರವೀಣಶೆಟ್ಟಿ ಬಣ) ಸದಸ್ಯರು ಶಿಕ್ಷಣ ಇಲಾಖೆ ಅಪರ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಹುಣಸಗಿ
ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಕರ ಹಾಜರಾತಿ ಮೇಲೆ ನಿಗಾ ಮತ್ತು ಬಯೋಮೆಟ್ರಿಕ್ ಅಳವಡಿಕೆ ಕಾರ್ಯವನ್ನು ಚುರುಕುಗೊಳಿಸಿ, ಕೊಡೇಕಲ್ ಗ್ರಾಮದಲ್ಲಿ ಬಾಲಕಿಯರ ಪ್ರೌಢಶಾಲೆ ಮಂಜೂರು ಮಾಡುವಂತೆ ಆಗ್ರಹಿಸಿ ಕರವೇ (ಪ್ರವೀಣಶೆಟ್ಟಿ ಬಣ) ಸದಸ್ಯರು ಶಿಕ್ಷಣ ಇಲಾಖೆ ಅಪರ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಕರವೇ ತಾಲೂಕಾಧ್ಯಕ್ಷ ರಮೇಶ ಬಿರಾದಾರ್ ಮಾತನಾಡಿ, ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆಗಳಲ್ಲಿ ಶಿಕ್ಷಕರ ಹಾಜರಾತಿಗೆ ಬಯೋ ಮೆಟ್ರಿಕ್ ವ್ಯವಸ್ಥೆ ಕಲ್ಪಿಸಬೇಕು. ಆಗ ಮಾತ್ರ ಶಿಕ್ಷಕರು ಶಾಲೆಗೆ ಸರಿಯಾದ ಸಮಯಕ್ಕೆ ಹಾಜರಾಗುತ್ತಾರೆ. ಈ ಒಂದು ವ್ಯವಸ್ಥೆ ಇಲ್ಲದ್ದರಿಂದ ಮಕ್ಕಳ ಭವಿಷ್ಯ ಹಾಗೂ ಶಿಕ್ಷಣ ಕುಂಠಿತವಾಗುತ್ತಿದೆ. ಇದನ್ನು ತಪ್ಪಿಸಲು ಹಾಗೂ ಶಿಕ್ಷಕರು ಸರಿಯಾದ ಸಮಯಕ್ಕೆ ಶಾಲೆಗಳಿಗೆ ಹಾಜರಾಗಲು ಬಯೋ ಮೆಟ್ರಿಕ್ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಕೊಡೇಕಲ್ ಗ್ರಾಮವು ಒಂದು ಹೋಬಳಿ ಕೇಂದ್ರವಾಗಿದ್ದು, ಹೋಬಳಿ ಕೇಂದ್ರದ ಸುತ್ತ 20 ರಿಂದ 25 ಹಳ್ಳಿಗಳು ಬರುತ್ತವೆ. ಈ ಹಳ್ಳಿಗಳಲ್ಲಿ ಒಂದು ಪ್ರೌಢಶಾಲೆ ಇಲ್ಲದೇ ಇರುವುದರಿಂದ ಎಲ್ಲಾ ಗ್ರಾಮದ ಮಕ್ಕಳು ಕೊಡೇಕಲ್ ಗ್ರಾಮದ ಪ್ರೌಢ ಶಾಲೆಯತ್ತ ಮುಖ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಪ್ರೌಢ ಶಾಲೆಯಲ್ಲಿ ಸರಿ ಸುಮಾರು 600 ರಿಂದ 750 ವಿದ್ಯಾರ್ಥಿಗಳ ಪೈಕಿ 400ಕ್ಕೂ ಹೆಚ್ಚು ಹೆಣ್ಣು ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಅದ್ದರಿಂದ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಬಾಲಕಿಯರ ಪ್ರೌಢ ಶಾಲೆ ಆರಂಭಿಸಬೇಕು. ಇದರ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಮಾರ್ಚ್ 2023ರಲ್ಲಿ ಮನವಿ ಸಲ್ಲಿಸಲಾಯಿತು.ಮನವಿಗೆ ಸ್ಪಂದಿಸಿದ ಯಾದಗಿರಿ ಸಾರ್ವಜಿಕ ಶಿಕ್ಷಣ ಇಲಾಖೆ ನವೆಂಬರ್ 2023 ರಂದು ಸುರಪುರ ಮತಕ್ಷೇತ್ರದ ವ್ಯಾಪ್ತಿಯ ಗ್ರಾಮಗಳಾದ ಪೇಠ ಅಮ್ಮಾಪುರ, ಮಾರನಾಳ, ಮಾಳನೂರ ಹಾಗೂ ಕೊಡೇಕಲ್ ಗ್ರಾಮಗಳಿಗೆ ಪ್ರೌಢ ಶಾಲೆಯನ್ನು ಮಂಜೂರು ಮಾಡಲಾಗಿತ್ತು. ಅದಾಗ್ಯೂ ಮಂಜೂರಾತಿ ಕಾರ್ಯ ರೂಪಕ್ಕೆ ಬಂದಿಲ್ಲ. ಈ ಮಂಜೂರಾದ ಶಾಲೆಗಳ ಬಗ್ಗೆ ಪುನರ್ ಪರಿಶೀಲನೆ ಮಾಡಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಶಿವರಾಜ ಹೊಕ್ರಾಣಿ, ಅಮರೇಶ ನುಲಿ, ರಮೇಶ ಪೂಜಾರಿ ಸೇರಿದಂತೆ ಇತರರಿದ್ದರು.