ಕುಡಿವ ನೀರು ಪೂರೈಕೆಗೆ ತುರ್ತುಕ್ರಮ

| Published : Mar 22 2024, 01:04 AM IST

ಸಾರಾಂಶ

ಬಾಗಲಕೋಟೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವಲ್ಲಿ 24 ಗಂಟೆಯೊಳಗಾಗಿ ತುರ್ತು ಕ್ರಮಕೈಗೊಂಡು ನೀರು ಪೂರೈಸುವ ಕಾರ್ಯವಾಗಬೇಕೆಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವಲ್ಲಿ 24 ಗಂಟೆಯೊಳಗಾಗಿ ತುರ್ತು ಕ್ರಮಕೈಗೊಂಡು ನೀರು ಪೂರೈಸುವ ಕಾರ್ಯವಾಗಬೇಕೆಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ಬರ ನಿರ್ವಹಣೆ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಸ್ಯಾತ್ಮಕ ಗ್ರಾಮಗಳಲ್ಲಿ ಈಗಾಗಲೇ ತಾಲೂಕುವಾರು, ಮಾಹೆವಾರು ಕ್ರಿಯಾ ಯೋಜನೆ ತಯಾರಿಸಿ ಸಮಸ್ಯೆ ಕಂಡು ಬಂದ ಗ್ರಾಮಗಳಲ್ಲಿ ತುರ್ತಾಗಿ ಕ್ರಮವಹಿಸಬೇಕು. ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ಎಲ್ಲ ತಾಲೂಕುಗಳಲ್ಲಿ ಒಟ್ಟು 1044 ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಲಾಗಿದೆ. ಅದರಲ್ಲಿ 1016 ಕೊಳವೆಭಾವಿ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಸಮಸ್ಯೆ ಕಂಡುಬಂದಲ್ಲಿ ಕ್ರಮಜರುಗಿಸಲು ಸೂಚಿಸಿದರು.

ಗ್ರಾಮ ಮತ್ತು ನಗರ ಪ್ರದೇಶಗಳಲ್ಲಿ ಪ್ರತಿ ವಾರ್ಡ್‌, ಏರಿಯಾಗಳಲ್ಲಿ ನೀರು ಪೂರೈಕೆಯಾಗುತ್ತಿರುವ ಬಗ್ಗೆ ಗಮನಹರಿಸಬೇಕು. ಹೆಚ್ಚಾಗಿ ಕೆಲವೊಂದು ಏರಿಯಾಗಳಲ್ಲಿ ನೀರು ಪೂರೈಕೆಯಾಗದೇ ಸಮಸ್ಯೆ ಉಂಟಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಗ್ರಾಮೀಣ ಭಾಗದಲ್ಲಿ ಗ್ರಾಮೀಣ ಕುಡಿಯುವ ನೀರು ಯೋಜನೆಯ ಅಧಿಕಾರಿಗಳು ಹಾಗೂ ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ಕ್ರಮವಹಿಸಬೇಕು. ಜೂನ್ ಮಾಹೆಯವರೆಗೆ ಕ್ರೀಯಾ ಯೋಜನೆ ರೂಪಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.

ಬಾದಾಮಿ ತಾಲೂಕಿನ ಕೈನಕಟ್ಟಿ, ಡಾಣಕಶಿರೂರ, ಮಂಗಳೂರ ಹಾಗೂ ಇಲಕಲ್ಲ ತಾಲೂಕಿನ ಮುರಟಗೇರಿ, ಮುರಡಿ, ಸಂಕಲಾಪೂರ ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಅವಶ್ಯಕತೆ ಬಂದ ಕಡೆ ಮೋಟಾರ್ ಹಾಗೂ ಪೈಪಲೈನ್ ಅಳವಡಿಸಲು 84 ಕಾಮಗಾರಿಗಳಿಗೆ ₹2.25 ಕೋಟಿ ಅನುದಾನ ಸಹ ಬಿಡುಗಡೆ ಮಾಡಲಾಗಿದೆ. ಅಲ್ಲದೇ 74 ಹೊಸ ಕೊಳವೆಬಾವಿ ಕೊರೆಯಲು ₹1.80 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಕೊಳವೆ ಬಾವಿಗಳ ಪ್ಲಶಿಂಗ್ ಮತ್ತು ರೀಡ್ರಿಲ್ಲಿಂಗ್ ಮಾಡಲು 192 ಕಾಮಗಾರಿ ಕೈಗೊಂಡಿದ್ದು, ಅದಕ್ಕಾಗಿ ₹154.75 ಲಕ್ಷ ಅನುದಾನ ನೀಡಲಾಗಿದೆ ಎಂದರು.

ಮಾರ್ಚ್‌ ತಿಂಗಳಿನಿಂದ ಜುಲೈ ವರೆಗೆ ನೀರಿನ ಸಮಸ್ಯೆ ಕಂಡು ಬರುವ ಗ್ರಾಮಗಳನ್ನು ಗುರುತಿಸಲಾಗಿದೆ. ಜಿಲ್ಲೆಯಲ್ಲಿ 780 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಅದರಲ್ಲಿ 723 ಕಾರ್ಯನಿರ್ವಹಿಸುತ್ತಿವೆ. ಉಳಿದ ಘಟಕಗಳನ್ನು ದುರಸ್ತಿಗೆ ಕ್ರಮವಹಿಸಲಾಗುತ್ತಿದೆ. ಸರ್ಕಾರಿ ಸಂಸ್ಥೆಗಳಲ್ಲಿ ಇರುವ 380 ಕೊಳವೆಬಾವಿಗಳನ್ನು ಅವಶ್ಯಕತೆಗೆ ಅನುಗುಣವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ನಗರ ಪ್ರದೇಶದಲ್ಲೂ 2129 ಕೊಳವೆಬಾವಿಗಳಿದ್ದು, 1940 ಚಾಲ್ತಿಯಲ್ಲಿವೆ. 146 ಖಾಸಗಿ ಕೊಳವೆಬಾವಿ ಗುರುತಿಸಿದ್ದು, ಅವಶ್ಯಕತೆಗೆ ಇದ್ದಲ್ಲಿ ಬಾಡಿಗೆ ಆಧಾರದ ಮೇಲೆ ಪಡೆದು ನೀರು ಪೂರೈಸಲು ಕ್ರಮವಹಿಸಲಾಗುವುದೆಂದು ತಿಳಿಸಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿಗಳಾದ ಸಂತೋಷ ಜಗಲಾಸರ, ಸಂತೋಷ ಕಾಮಗೌಡ, ನೋಡಲ್ ಅಧಿಕಾರಿಗಳಾದ ಲಕ್ಷ್ಮಣ ಕಳ್ಳೇನ್ನವರ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರವೀಂದ್ರ ಹಕಾಟೆ, ಪಶು ಇಲಾಖೆಯ ಉಪನಿರ್ದೇಶಕ ಎಸ್.ಎಚ್.ಕಳ್ಳಿಗುಡ್ಡ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯ ನೆಕ್ಕಳಕಿ, ಸಹಕಾರ ಸಂಘದ ಉಪನಿಬಂಧಕ ಎಂ.ಬಿ.ಪೂಜಾರ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಗುರುಪಾದ ಡೂಗನವರ ಸೇರಿದಂತೆ ಇತರರು ಇದ್ದರು. ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿನ ವರದಿಗಳಿಗೂ ಸಹ ತುರ್ತಾಗಿ ಸ್ಪಂದಿಸಿ ಸಮಸ್ಯೆ ನಿವಾರಿಸಲಾಗಿದೆ. ಇಲಕಲ್ಲ ತಾಲೂಕಿನ ನಂದವಾಡಗಿ ಗ್ರಾಮದ ಒಂದು ಪ್ರದೇಶದಲ್ಲಿ ಮಾತ್ರ ಹೆಸ್ಕಾಂ ಇಲಾಖೆಯ ವ್ಯತ್ಯಯದಿಂದ ನೀರು ಪೂರೈಕೆ ಸ್ಥಗಿತಗೊಂಡಿತ್ತು. ಅದನ್ನು ಸರಿಪಡಿಸಿ ಆ ಭಾಗದಲ್ಲಿ ನೀರು ಪೂರೈಕೆಗೆ ಕ್ರಮವಹಿಸಲಾಗಿದೆ. ಬಾಗಲಕೋಟೆ ತಾಲೂಕಿನ ಮುರನಾಳ ಮತ್ತು ರಬಕವಿ-ಬನಹಟ್ಟಿ ತಾಲೂಕಿನ ಯಲ್ಲಟ್ಟಿ ಗ್ರಾಮದಲ್ಲಿ ಉಂಟಾದ ಸಮಸ್ಯೆಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಕೊಳವೆ ಬಾವಿಯಲ್ಲಿನ ನೀರು ಕಡಿಮೆಯಾದ ಕಾರಣ ಹೊಸ ಬೋರವೆಲ್ ಕೊರೆಯಲು ಕ್ರಮವಹಿಸಲಾಗಿದೆ.

- ಜಾನಕಿ ಕೆ.ಎಂ, ಜಿಲ್ಲಾಧಿಕಾರಿ.