ಕೊನೇ ಭಾಗದ ಜಮೀನುಗಳಿಗೆ ನೀರು ಪೂರೈಸಲು ತ್ವರಿತಗತಿಯಲ್ಲಿ ಕ್ರಮ: ಶಾಸಕ ಪಿ.ಎಂ.ನರೇಂದ್ರಸ್ವಾಮಿ

| Published : Aug 26 2024, 01:31 AM IST

ಕೊನೇ ಭಾಗದ ಜಮೀನುಗಳಿಗೆ ನೀರು ಪೂರೈಸಲು ತ್ವರಿತಗತಿಯಲ್ಲಿ ಕ್ರಮ: ಶಾಸಕ ಪಿ.ಎಂ.ನರೇಂದ್ರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಮಳವಳ್ಳಿ ತಾಲೂಕಿಗೆ ನೀರು ಪೂರೈಕೆಯಾಗುವ ಹೆಬ್ಬಕವಾಡಿ ಸುತ್ಕಟ್ಟೆ ಬಳಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಂದ ನೀರಿನ ಪ್ರಮಾಣದ ಬಗ್ಗೆ ಮಾಹಿತಿ ಪಡೆದುಕೊಂಡು ಅವರು ಮಧ್ಯರಾತ್ರಿಯಿಂದಲೇ ಹಿಂದಿನ ಪ್ರಮಾಣದಲ್ಲಿ ನೀರು ಹರಿಸುವಂತೆ ಅಧಿಕಾರಿಗಳಿಗೆ ತಾಕೀತು.

ಕನ್ನಡ ಪ್ರಭ ವಾರ್ತೆ ಮಳವಳ್ಳಿ

ಕೊನೆ ಭಾಗದ ರೈತರ ಜಮೀನುಗಳಿಗೆ ನಾಲೆಗಳ ಮೂಲಕ ಸಮರ್ಪಕ ನೀರು ಪೂರೈಕೆಯಾಗುವಂತೆ ತ್ವರಿತಗತಿಯಲ್ಲಿ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸೂಚನೆ ನೀಡಿದರು.

ತಾಲೂಕಿಗೆ ನೀರು ಪೂರೈಕೆಯಾಗುವ ಹೆಬ್ಬಕವಾಡಿ ಸುತ್ಕಟ್ಟೆ ಬಳಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಂದ ನೀರಿನ ಪ್ರಮಾಣದ ಬಗ್ಗೆ ಮಾಹಿತಿ ಪಡೆದುಕೊಂಡು ಅವರು ಮಧ್ಯರಾತ್ರಿಯಿಂದಲೇ ಹಿಂದಿನ ಪ್ರಮಾಣದಲ್ಲಿ ನೀರು ಹರಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕೆಆರ್‌ಎಸ್ ಜಲಾಶಯದಿಂದ ನೀರು ಸಾಕಷ್ಟು ನೀರು ಹರಿಯುತ್ತಿದ್ದರೂ ತಾಲೂಕಿನ ಕೃಷಿ ಚಟುವಟಿಕೆಗಳಿಗೆ ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಸುತ್ಕಟ್ಟೆ ಮುಖ್ಯ ನಾಲೆಯ ಮೂಲಕ ಹೆಬ್ಬಕವಾಡಿ ನಾಲೆಗೆ 450 ಕ್ಯುಸೆಕ್, ತುರುಗನೂರು ನಾಲೆಗೆ 420 ಕ್ಯುಸೆಕ್ ಹಾಗೂ ಮಾರ್ಕಾಲು ಮತ್ತಿತ್ತರ ಗ್ರಾಮಗಳ ಕೆರೆ ತುಂಬಿಸಲು 150 ಕ್ಯುಸೆಕ್ ನೀರು ಹರಿಸುವಂತೆ ಸೂಚನೆ ನೀಡಿದ ಅವರು ಕೊನೆ ಭಾಗಕ್ಕೆ ಹರಿಯಬೇಕಾಗಿದ್ದ ಸುಮಾರು 150 ಕ್ಯುಸೆಕ್ ನೀರನ್ನು ಕೆಲವರು ಅಕ್ರಮವಾಗಿ ಉಪಯೋಗಿಸಿಕೊಳ್ಳುತ್ತಿದ್ದು, ಕೂಡಲೇ ಅದನ್ನು ನಿಲ್ಲಿಸಲು ಕ್ರಮ ವಹಿಸುವಂತೆ ಸ್ಥಳದಲ್ಲಿದ್ದ ಹಿರಿಯ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಅಕ್ರಮ ನೀರು ಬಳಕೆಯನ್ನು ತಡೆಯಬೇಕು ಹಾಗೂ ನಮ್ಮ ರೈತರಿಗೆ ಸಿಗಬೇಕಾದ ನಿಗದಿತ ನೀರನ್ನು ಭಾನುವಾರ ಮಧ್ಯರಾತ್ರಿಯಿಂದಲೇ ಬಿಡಬೇಕು ಎಂದು ಹೇಳಿದರು.

ಕಾದುಕುಳಿತ ಶಾಸಕ:

ಹೆಬ್ಬಕವಾಡಿಯ ಸತ್ಕಟ್ಟೆ ಬಳಿ ತೆರಳಿದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಾಲೂಕಿನ ನಾಲೆಗಳಿಗೆ ಹರಿಯುತ್ತಿರುವ ನೀರಿನ ಪ್ರಮಾಣ ವೀಕ್ಷಿಸಿದರು‌. ಸ್ಥಳದಲ್ಲಿದ್ದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಂದ ಸಮರ್ಪಕ ಮಾಹಿತಿ ದೊರೆಯದ ಹಿನ್ನೆಲೆಯಲ್ಲಿ ಅಧೀಕ್ಷಕ ಎಂಜಿನಿಯರ್ ರಘುರಾಮ್ ಬರುವವರೆಗೆ ಸುಮಾರು 1 ಗಂಟೆ ಕಾಲ ಕಾದು ಕುಳಿತ ಅವರು ಅವರಿಂದ ಮಾಹಿತಿ ಪಡೆದು ಕೆಲ ಸಲಹೆ ಸೂಚನೆ ನೀಡಿದರು.

ಈ ವೇಳೆ ಎಂಜಿನಿಯರ್ ಗೋವರ್ಧನ್, ಭರತೇಶ್ ಕುಮಾರ್, ಅನಿಲ್ ಹಾಗೂ ಕಾಂಗ್ರೆಸ್ ಮುಖಂಡರು ಮತ್ತು ಗ್ರಾಮಸ್ಥರು ಇದ್ದರು.