ಭೂಮಿ ಸಂರಕ್ಷಣೆಯ ತುರ್ತಿದೆ: ಸುರೇಶ್‌ ಹೆಬ್ಳೀಕರ್‌

| Published : Feb 24 2024, 02:35 AM IST

ಸಾರಾಂಶ

ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಜಾಗತಿಕ ಭಾಷಾ ಕೇಂದ್ರವು 2 ದಿನಗಳ ಅಂತಾರಾಷ್ಟ್ರೀಯ ಭಾಷಾ ಮೇಳ ಆಯೋಜಿಸಿತ್ತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಜಾಗತಿಕ ತಾಪಮಾನ ಏರಿಕೆ ಮತ್ತು ಪರಿಸರ ನಾಶದ ಅಪಾಯದಿಂದ ಪೃಥ್ವಿಯನ್ನು ಸಂರಕ್ಷಿಸುವ ಮುಖಾಂತರ ಭವಿಷ್ಯದ ಪೀಳಿಗೆಯ ಬದುಕನ್ನು ಸುರಕ್ಷಿತಗೊಳಿಸುವ ತುರ್ತು ಎದುರಾಗಿದೆ ಎಂದು ಹಿರಿಯ ಚಿತ್ರನಟರಾದ ಪರಿಸರವಾದಿ ಸುರೇಶ್ ಹೆಬ್ಳೀಕರ್ ಹೇಳಿದ್ದಾರೆ.

ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಜಾಗತಿಕ ಭಾಷಾ ಕೇಂದ್ರ ಆಯೋಜಿಸಿದ ಎರಡು ದಿನಗಳ ಅಂತಾರಾಷ್ಟ್ರೀಯ ಭಾಷಾ ಮೇಳದಲ್ಲಿ ‘ಪರಿಸರದ ಮೇಲೆ ಆರ್ಥಿಕ ಬೆಳವಣಿಗೆ ಮತ್ತು ನಗರೀಕರಣದ ಪರಿಣಾಮ’ ಎಂಬ ವಿಷಯ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.

ಹೆದ್ದಾರಿಗಳ ನಿರ್ಮಾಣ ಮತ್ತು ಅಪಾರ ನೀರಿನ ಅಗತ್ಯವಿರುವ ಕಬ್ಬು ಮುಂತಾದ ಬೆಳೆಗಳಿಗೆ ಆದ್ಯತೆ ನೀಡುತ್ತಿರುವುದರಿಂದ ಪರಿಸರ ಅಸಮತೋಲನಕ್ಕೆ ಕಾರಣವಾಗುತ್ತಿದೆ. ಬೆಂಗಳೂರು- ಮ್ಯೆಸೂರು ಎಕ್ಸ್ ಪ್ರೆಸ್ ವೇ ನಿರ್ಮಾಣ ಆ ಮಾರ್ಗದ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದರು.

ಅನಿರ್ಬಂಧಿತ ನಗರೀಕರಣ ಗಂಭೀರ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಸೃಷ್ಟಿಸಿದ್ದು ಬೆಂಗಳೂರು ಮಹಾನಗರ ಅಂತರ್ಜಲ ಕುಸಿತದಿಂದಾಗಿ ಅಪಾಯದ ಅಂಚಿಗೆ ದೂಡಲ್ಪಟ್ಟಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಖ್ಯಾತ ಕಲಾ ಚರಿತ್ರಕಾರಾದ ಡಾ. ಚೂಡಾಮಣಿ ಮಾತನಾಡಿ, ಭಾಷೆಗಳು ಕಲೆ, ಸಾಹಿತ್ಯ, ಸಂಸ್ಕೃತಿಯ ಅಭಿವ್ಯಕ್ತಿಯ ಮಾಧ್ಯಮವಾಗಿದ್ದು, ಪ್ರಕೃತಿ ಮತ್ತು ಮಾನವನ ಅವಿನಾಭಾವ ಸಂಬಂಧಕ್ಕೆ ಪ್ರೇರಕವಾಗಿವೆ ಎಂದರು.

ಫ್ರಾನ್ಸ್‌ ಕನ್ಸುಲ್ ಜನರಲ್ ಥಿಯೆರ್ರಿ ಬರ್ತೆಲೊಟ್, ಇಟಲಿ ಕನ್ಸುಲ್ ಜನರಲ್ ಆಲಫೋನ್ಸೋ ತಗ್ಲಿಯಾಫೆರ್ರಿ, ವಿಶ್ವವಿದ್ಯಾಲಯದ ಕುಲಸಚಿವ ಟಿ.ಜವರೇಗೌಡ ಮತ್ತು ಡಾ.ಸಿ.ಎಸ್. ಆನಂದ ಕುಮಾರ್, ಜಾಗತಿಕ ಭಾಷಾ ಕೇಂದ್ರ ದ ಅಧ್ಯಕ್ಷರಾದ ಡಾ.ಜ್ಯೋತಿ ವೆಂಕಟೇಶ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಲಪತಿ ಪ್ರೊ.ಲಿಂಗರಾಜ ಗಾಂಧಿ ವಹಿಸಿದ್ದರು.