ಸುಂಟಿಕೊಪ್ಪ: ಕೆದಕಲ್ ಗ್ರಾ.ಪಂ. ವ್ಯಾಪ್ತಿಯಲ್ಲಿ ಮಾನವ- ವನ್ಯಜೀವಿಗಳ ಸಂಘರ್ಷ ತಡೆಗಟ್ಟಲು ತುರ್ತು ಕ್ರಮ ಕೈಗೊಳ್ಳುವ ಕುರಿತು ಮಂಗಳವಾರ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಕೆದಕಲ್ ಗ್ರಾಪಂ ಸಭಾಂಗಣದಲ್ಲಿ ಸಭೆ ನಡೆಯಿತು.
ಡಾ. ಮಂತರ್ ಗೌಡ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಹೊರೂರು, ಮೊದ್ದರೂ, ಕೆದಕಲ್ ನೇಗಾದಳ್, ಹಾಲೇರಿ, ಈರಳೆ ಓಳಮುಡಿ ಮತ್ತು ಅತ್ತೂರು ನಲ್ಲೂರು ಸೇರಿದಂತೆ ಸುತ್ತ ಮುತ್ತಲಿನ ಪ್ರದೇಶಗಳ ರೈತರು ಮತ್ತು ಬೆಳೆಗಾರರು ಹಾಗೂ ಸಾರ್ವಜನಿಕರು ಇತ್ತೀಚಿನ ದಿನಗಳಲ್ಲಿ ಕಾಡಾನೆ, ಕಾಡಾಮ್ಮೆ ಸೇರಿದಂತೆ ವನ್ಯ ಜೀವಿಗಳ ಹಾವಳಿ ಕುರಿತು ಜೀವ ಭಯ ಹಾಗೂ ಕೃಷಿ ಬೆಳೆಗಳಿಗೆ ಅಪಾರ ಹಾನಿಯಾಗುತ್ತಿದ್ದು, ಶಾಶ್ವತ ಹಾಗೂ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ಅಹವಾಲು ಮಂಡಿಸಿದರು. ಲಿಖಿತ ಮನವಿ ಓದಿದ ಗ್ರಾಪಂ ಮಾಜಿ ಸದಸ್ಯ ವೆಂಕಪ್ಪ ಕೋಟ್ಯಾನ್, ಆನೆಕಾಡು ಮತ್ತು ಮೀನುಕೊಲ್ಲಿ ಅರಣ್ಯ ವಲಯಗಳಲ್ಲಿ ಜಂಟಿ ಕೂಂಬಿಂಗ್ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆಯ ವಿವಿಧ ವಿಭಾಗಗಳ ಸಮನ್ವ ಯತೆಯಿಂದ ಕೈಗೊಳ್ಳಬೇಕು. ಈಗಾಗಲೇ ಸಾಕಷ್ಟು ಭಾರಿ ಬೇಡಿಕೆ ಸಲ್ಲಿಸಿರುವಂತೆ ಚೆಟ್ಟಳ್ಳಿ ಪಾರಂ ಬಳಿ ಇರುವ ಆನೆ ಗೇಟ್‌ನ್ನು ಶಾಶ್ವತವಾಗಿ ಮುಚ್ಚಬೇಕು. ಆನೆ ಕಾರ್ಯಾಚರಣೆ ಪಡೆಯನ್ನು ಪೂರ್ಣ ಪ್ರಮಾಣದಲ್ಲಿ ರಚಿಸಿ ಅವರಿಗೆ ಸಂಪೂರ್ಣ ತರಬೇತಿ ಮತ್ತು ಅಗತ್ಯವಾದ ಸುರಕ್ಷಿತ ಉಪಕರಣಗಳನ್ನು ಒದಗಿಸಿ ಕಾರ್ಯಕ್ಷಮತೆಯನ್ನು ಹೆಚ್ಚಿಸಬೇಕು. ಕೆದಕಲ್ ಗ್ರಾ ಪಂ ವ್ಯಾಪ್ತಿಯಲ್ಲಿ ದಿನದ ೨೪ ಗಂಟೆಯನ್ನು ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿ ಆನೆ ಓಡಿಸುವ ಸಂದರ್ಭ ಜೀವ ರಕ್ಷಕ ವಾಹನ ಬೆಂಗಾವಲು ಹಾಗೂ ಕೆದಕಲ್ ಗ್ರಾಪಂ ವ್ಯಾಪ್ತಿಯಲ್ಲಿ ತುರ್ತು ೧೦೮ ಆಂಬ್ಯುಲೆನ್ಸ್ ಸೇವೆಯನ್ನು ನಿಯೋಜಿಸುವಂತೆ ಕೋರಿದರು. ಶಾಸಕರು ಅರಣ್ಯ ಇಲಾಖೆಯ ಮಡಿಕೇರಿ ಉಪ ವಿಭಾಗದ ಕುಶಾಲನಗರ ವಲಯ ಅಧಿಕಾರಿಗಳಲ್ಲಿ ವಿವರ ಮತ್ತು ವಾಸ್ತವ ವಿಚಾರಗಳನ್ನು ಪ್ರಶ್ನಿಸುತ್ತಾ ಹೋದಂತೆ ಇಲಾಖೆಯೊಳಗೆ ಆಂತರಿಕವಾಗಿ ಸಮನ್ವಯತೆ ಇಲ್ಲದಿರುವುದು, ಜನರ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸದೆ ಇರುವುದು ಹಾಗೂ ಪರಿಹಾರ ಕೋರಿ ಅರ್ಜಿ ಸಲ್ಲಿಸಿದಾಗ ನಿಧಾನಗತಿಯಲ್ಲಿ ಅತ್ಯಲ್ಪ ಪರಿಹಾರವನ್ನು ನೀಡುವ ಹಿನ್ನೆಲೆಯಲ್ಲಿ ಮಾನವ ವನ್ಯ ಜೀವಿಗಳಿಂದ ಆತಂಕ, ಅರಣ್ಯ ಇಲಾಖೆ ಕಾರ್ಯವೈಖರಿ ಬಗ್ಗೆ ಬೇಸರ ಹೊಂದಿದ್ದಾರೆ ಎಂದು ಹೇಳಿದರು.ಆನೆ ಓಡಿಸುವ ಕಾರ್ಯಾಚರಣೆಯು ಶೂನ್ಯ ಫಲಿತಾಂಶವನ್ನು ಹೊಂದಿದ್ದು, ಕೆದಕಲ್ ವ್ಯಾಪ್ತಿಯು ತನ್ನ ಸುತ್ತಲ್ಲೂ ವಿವಿಧ ವಲಯಗಳಿಗೆ ಸೇರಿದ ಅರಣ್ಯ ವ್ಯಾಪ್ತಿಯನ್ನು ಹೊಂದಿದ್ದು, ಇಲಾಖೆಯಲ್ಲಿ ಸಮನ್ವಯತೆಯ ಕೊರತೆ ಇದೆ. ಆನೆ ಕಂದಕ ಸೋಲಾರ್ ಬೇಲಿ ರೇಲ್ವೆ ಬ್ಯಾರಿಕೇಡ್ ಅಳವಡಿಕೆ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಕಂಡಿಲ್ಲ ಎಂದು ಹೇಳಿದ ಅವರು, ಕುಶಾಲನಗರ ವಲಯ ಅರಣ್ಯಾಧಿಕಾರಿ ನೀಡಿದ ೭ ಕೋಟಿ ರು. ವೆಚ್ಚದ ಯೋಜನೆ ಬಗ್ಗೆ ಪ್ರತಿಕ್ರಿಯಿಸಿ, ಸರ್ಕಾರದಿಂದ ಮಂಜೂರು ಮಾಡಿಸುವ ಜವಾಬ್ಧಾರಿ ತಮ್ಮದಾಗಿದ್ದು, ಯೋಜನೆಯ ಯಶಸ್ವಿನ ಖಾತರಿಯನ್ನು ನೀಡಬಲ್ಲಿರಾ ಎಂದು ಅಧಿಕಾರಿಯನ್ನು ಪ್ರಶ್ನಿಸಿದರು. ಈ ಕುರಿತು ಸಮಜಾಯಿಷಿ ನೀಡಿದ ಮಡಿಕೇರಿ ಉಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಅವರು ಮಾಹಿತಿ ನೀಡಿ, ಆನೆ ಮಾನವ ಮತ್ತು ಇತರ ವನ್ಯ ಜೀವಿಗಳ ಉಪಟಳವನ್ನು ತಪ್ಪಿಸುವ ನಿಟ್ಟಿನಲ್ಲಿ ರಾಜ್ಯ ಮಟ್ಟದಲ್ಲೇ ಒಂದು ಸಮಗ್ರ ಯೋಜನೆಯನ್ನು ತಯಾರಿಸಲಾಗುತ್ತಿದ್ದು, ಪರಿಣಾಮಕಾರಿ ಮತ್ತು ಶಾಶ್ವತ ಪರಿಹಾರದ ನಿಟ್ಟಿನಲ್ಲಿ ೩ ರಿಂದ ೪ ವರ್ಷಗಳು ಬೇಕೆಂದು ಮಾಹಿತಿ ನೀಡಿದರು. ಕಾಡುಕೋಣಗಳ ಉಪಟಳ ಬಗ್ಗೆ ಮಾತನಾಡಿದ ಅವರು, ಕಾಡುಕೋಣಗಳನ್ನು ಹಿಡಿದು ಸ್ಥಳಾಂತರಿಸುವ ಪ್ರಯೋಗಗಳು ಈಗಷ್ಟೇ ಆರಂಭವಾಗಿದ್ದು, ಇಲ್ಲಿ ಕೂಡ ವೈಜ್ಞಾನಿಕ ರೀತಿಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಮಾಹಿತಿ ನೀಡಿದರು.
ಜಿಪಂ ಮಾಜಿ ಸದಸ್ಯ ಪಿ.ಎಂ. ಲತೀಫ್ ಮಾತನಾಡಿ, ಇತ್ತೀಚೆಗೆ ತಮ್ಮ ತೋಟದಲ್ಲಿ ಕಾಡು ಕೋಣ ದಾಳಿ ಮಾಡಿದ ಹಿನ್ನೆಲೆಯಲ್ಲಿ ತೋಟದ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದು, ಕೇವಲ ಒಂದು ವಾರದ ಚಿಕಿತ್ಸೆಗೆ ೪.೪೨ ಲಕ್ಷ ರು. ವೆಚ್ಚ ದಾಟಿರುವ ಬಗ್ಗೆ ಮಾಹಿತಿ ನೀಡಿ, ವನ್ಯ ಜೀವಿಗಳ ದಾಳಿಗೆ ಸಾವು ಸಂಭವಿಸಿದಾಗ ೨೦ ಲಕ್ಷ ನೀಡುವ ಇಲಾಖೆ ಗಾಯಗೊಂಡವರ ಬಗ್ಗೆ ಪರಿಹಾರ ಅಥವಾ ಚಿಕಿತ್ಸಾ ವೆಚ್ಚದ ಬಗ್ಗೆ ತಾತ್ಸಾರ ತಾಳುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಮಾತನಾಡಿದ ಡಿಸಿಎಫ್ ಅಭಿಷೇಕ್, ಗಾಯಾಳುಗಳ ಚಿಕಿತ್ಸಾ ವೆಚ್ಚದ ವಿವರ ನೀಡಿದರೆ ಭರಿಸಲಾಗುವುದು ಎಂದರು.ಪುಲ್ಲೇರ ವಸಂತ್ ಮಾತನಾಡಿ, ಸರಿ ಸುಮಾರು ೭೦ ಕಾಡುಕೋಣಗಳ ಗುಂಪು ೫ ರಿಂದ ೬ ತಂಡಗಳಾಗಿದ್ದು, ಇವುಗಳೊಂದಿಗೆ ಕಾಡು ದನಗಳು ಸೇರಿಕೊಂಡಿದ್ದು, ಬದುಕು ಮತ್ತು ಕೃಷಿ ದುಸ್ತರವಾಗಿದೆ ಎಂದರು. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅದ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಜಿಪಂ ಮಾಜಿ ಸದಸ್ಯೆ ಕೆ.ಪಿ. ಚಂದ್ರಕಲಾ, ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನವೀನ್ ಕುಮಾರ್, ಸೋಮವಾರಪೇಟೆ ತಹಸೀಲ್ಧಾರ್ ಕೃಷ್ಣಮೂರ್ತಿ, ವಲಯ ಸಂರಕ್ಷಣಾಧಿಕಾರಿ ರಕ್ಷಿತ್, ಮಡಿಕೇರಿ ವಲಯ ಸಂರಕ್ಷಣಾಧಿಕಾರಿ ಶಿವಕುಮಾರ್, ಸಹಾಯಕ ವಲಯ ಸಂರಕ್ಷಣಾಧಿಕಾರಿ ಮಧುಕುಮಾರ್, ಕೆದಕಲ್ ಗ್ರಾಪಂ ಆಡಳಿತಾಧಿಕಾರಿ ಹರೀಶ್, ಕಾರ್ಯದರ್ಶಿ ಮೋಹನ್, ಸುಂಟಿಕೊಪ್ಪ ಚೆಸ್ಕಾಂ ಅಭಿಯಂತರ ಲವ, ಗ್ರಾಪಂ ಮಾಜಿ ಉಪಾಧ್ಯಕ್ಷ ಸಂಜು ಪೊನ್ನಪ್ಪ, ಮಾಜಿ ಸದಸ್ಯರಾದ ದೇವಿ ಪ್ರಸಾದ್, ಶಿವಶಂಕರ್, ಬಾಲಕೃಷ್ಣ ರೈ, ಚೆಪ್ಪುಡಿರ ಸತೀಶ್, ಯಂಕನ ಗೋಪಿನಾಥ್ ಮತ್ತಿತರರು ಇದ್ದರು.