ಸರ್ಕಾರದ ಎಲ್ಲ ಸವಲತ್ತುಗಳ ಬಳಸಿಕೊಳ್ಳಿ: ನ್ಯಾಯಾಧೀಶ ಪ್ರಕಾಶ್ ನಾಯಕ್

| Published : May 18 2024, 12:33 AM IST

ಸಾರಾಂಶ

ಕಾರ್ಮಿಕರು ತಮ್ಮ ಕಾಯಕದೊಂದಿಗೆ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ, ಸಿವಿಲ್ ನ್ಯಾಯಾಧೀಶ ಪ್ರಕಾಶ್ ನಾಯಕ್ ಹೇಳಿದರು. ಬೇಲೂರಲ್ಲಿ ಹಮ್ಮಿಕೊಂಡ ಅಂತಾರಾಷ್ಟ್ರೀಯ ಕಾರ್ಮಿಕರ ದಿನದ ಅಂಗವಾಗಿ ಉಚಿತ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಮಿಕರಿಗೆ ಸಲಹೆಬೇಲೂರು: ಕಾರ್ಮಿಕರು ತಮ್ಮ ಕಾಯಕದೊಂದಿಗೆ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ, ಸಿವಿಲ್ ನ್ಯಾಯಾಧೀಶ ಪ್ರಕಾಶ್ ನಾಯಕ್ ಹೇಳಿದರು.

ತಾಲೂಕಿನ ಬಿಕ್ಕೋಡು ಎಸ್ಟೇಟಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಅಂತಾರಾಷ್ಟ್ರೀಯ ಕಾರ್ಮಿಕರ ದಿನದ ಅಂಗವಾಗಿ ಉಚಿತ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮದಲ್ಲಿ ಮಾತನಾಡಿ, ಕಾರ್ಮಿಕರ ದಿನಾಚರಣೆಯನ್ನು ವಿಶ್ವದೆಲ್ಲೆಡೆ ಮೇ ಒಂದರಂದು ಆಚರಿಸಲಾಗುತ್ತದೆ. ಆದರೆ ನ್ಯಾಯಾಲಯದಲ್ಲಿ ಬೇಸಿಗೆ ರಜೆ ಇದ್ದ ಕಾರಣ ಈ ದಿನ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

ಕಾರ್ಮಿಕರ ಶ್ರಮವನ್ನು ಗುರುತಿಸಿ ಅವರಿಗೂ ಒಂದು ಸ್ಥಾನ ಮಾನ ಇದೆ ಎಂಬುವುದನ್ನು ಸಮಾಜಕ್ಕೆ ತೋರಿಸಲು ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಮನೆಯ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಅಥವಾ ಇನ್ನಿತರ ಹಲವು ಕಾರಣಾಂತರಗಳಿಂದ ವಿದ್ಯಾಭ್ಯಾಸ ಪಡೆಯದೆ ಕಾರ್ಮಿಕರಾಗಿ ಉಳಿದಿರಬಹುದು. ಆದರೆ ಮಕ್ಕಳನ್ನು ಕಾರ್ಮಿಕರನ್ನಾಗಿ ಮಾಡದೆ ಹೆಚ್ಚಿನ ವಿದ್ಯಾಭ್ಯಾಸ ನೀಡಿ ಉತ್ತಮ ಸರ್ಕಾರಿ ಅಥವಾ ಇತರೆ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ, ಸಿವಿಲ್ ನ್ಯಾಯಾಧೀಶ ಪ್ರಸನ್ನ ಕುಮಾರ್.ಸಿ, ಕಾರ್ಮಿಕರು ಈ ದೇಶದ ನಿಜವಾದ ಸಂಪತ್ತು. ಹಾಗಾಗಿ ಅವರ ರಕ್ಷಣೆ ಹಾಗೂ ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ಅವಶ್ಯಕವಾಗಿದೆ. ಅವರ ಹಕ್ಕುಗಳು ಅವರಿಗೆ ನಿಜವಾಗಿ ತಲುಪಬೇಕು ಎಂದು ಹೇಳಿದರು.

ತಾಲೂಕು ಹಿರಿಯ ಕಾರ್ಮಿಕ ನಿರೀಕ್ಷಕ ವಿಜಯ ಕುಮಾರ್ ಎಸ್. ಕಾರ್ಮಿಕ ಮಂಡಳಿಯಿಂದ ದೊರಕುವ ವಿವಿಧ ಸೌಲಭ್ಯಗಳ ಕುರಿತು ವಿವರಣೆ ನೀಡಿದರು.

ಸಹಾಯಕ ಸರ್ಕಾರಿ ಅಭಿಯೋಜಕರಾದ ಶಶಿಕಲಾ, ಗೀತಾಮನಿ, ಅರೇಹಳ್ಳಿ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರಾದ ಲಿಂಗರಾಜು ಸಿ.ಎಂ., ಲಿಂಗಾಪುರ ಎಸ್ಟೇಟಿನ ಮ್ಯಾನೇಜರ್ ಸುಂದರ್ ಸಿಂಗ್, ಶರೀಫ್ ಇದ್ದರು.