ಸಾರಾಂಶ
ಇಂದಿನ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹಾಸುಹೊಕ್ಕಾಗಿರುವ ಕೃತಕ ಬುದ್ಧಿಮತ್ತೆ (ಎಐ)ಯನ್ನು ಸೀಮಿತವಾಗಿ ಬಳಸಿಕೊಂಡು ನಾವು ಅಭಿವೃದ್ಧಿ ಹೊಂದಬೇಕು ಎಂದು ಕಲಮಂಗಿ ಪ್ರೌಢಶಾಲೆಯ ಆಂಗ್ಲ ಭಾಷಾ ಶಿಕ್ಷಕ ವೀರೇಶ ಗೋನವಾರ ಹೇಳಿದರು.
ಉಪನ್ಯಾಸ ಸಮಾರಂಭ । ಕಲಮಂಗಿಯಲ್ಲಿ ಎಐ ವಿಷಯದ ಬಗ್ಗೆ ವಿಶೇಷ ಮಾಹಿತಿ । ವಿಜ್ಞಾನ ವಸ್ತುಪ್ರದರ್ಶನ
ಕನ್ನಡಪ್ರಭ ವಾರ್ತೆ ಸಿಂಧನೂರುಇಂದಿನ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹಾಸುಹೊಕ್ಕಾಗಿರುವ ಕೃತಕ ಬುದ್ಧಿಮತ್ತೆ (ಎಐ)ಯನ್ನು ಸೀಮಿತವಾಗಿ ಬಳಸಿಕೊಂಡು ನಾವು ಅಭಿವೃದ್ಧಿ ಹೊಂದಬೇಕು ಎಂದು ಕಲಮಂಗಿ ಪ್ರೌಢಶಾಲೆಯ ಆಂಗ್ಲ ಭಾಷಾ ಶಿಕ್ಷಕ ವೀರೇಶ ಗೋನವಾರ ಹೇಳಿದರು.
ತಾಲೂಕಿನ ಕಲಮಂಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ರಾಯಚೂರು ಉಪಪ್ರಾದೇಶಿಕ ವಿಜ್ಞಾನ ಕೇಂದ್ರ ಹಾಗೂ ಶಾಲಾ ಶಿಕ್ಷಣ ಸಹಯೋಗದಲ್ಲಿ ಸರ್ಕಾರಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ‘ಕೃತಕ ಬುದ್ಧಿಮತ್ತೆ ವಿಷಯದ’ ಕುರಿತು ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.ನಾವು ಪ್ರತಿಯೊಂದಕ್ಕೂ ಎಐ ಗೆ ಅವಲಂಬಿತರಾಗಿದ್ದೇವೆ. ಆದ್ದರಿಂದ ನಾವುಗಳು ಕೃತಕ ಬುದ್ಧಿಮತ್ತೆಗೆ ಹೆಚ್ಚು ಅವಲಂಭಿತರಾಗದೇ ಮಾನವನಿಗೆ ಲಭಿಸಿರುವ ಅಗಾಧವಾದ ಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ಅಭಿವೃದ್ಧಿಹೊಂದಬೇಕು ಎಂದು ಹೇಳುತ್ತಾ ಕೃತಕ ಬುದ್ಧಿಮತ್ತೆಯ ವಿಧಗಳು, ಮಹತ್ವ ಮತ್ತು ಭವಿಷ್ಯದಲ್ಲಿ ಕೃತಕ ಬುದ್ಧಿಮತ್ತೆಯ ಕುರಿತು ಉಪನ್ಯಾಸವನ್ನು ನೀಡಿದರು.
ಶಾಲಾ ಮುಖ್ಯಗುರುಗಳಾದ ಮಲ್ಲಪ್ಪ ಬಾದರ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಸರ್ಕಾರ, ನಮ್ಮ ಇಲಾಖೆ ಹಾಗೂ ವಿವಿಧ ಇಲಾಖೆಗಳು ಜಾರಿಗೆ ತರುತ್ತಿರುವ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಬಳಸಿಕೊಂಡು ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದು ಹೇಳುತ್ತ, ಶಾಲೆಯ ವಿದ್ಯಾರ್ಥಿಗಳು ತಾಜ್ಯ ವಸ್ತುಗಳಿಂದ ಅತ್ಯಂತ ಆಕರ್ಷಕ ಮಾದರಿಗಳನ್ನು ಮಾಡಿದ್ದಾರೆ. ಈ ದಿನ ಕೃತಕ ಬುದ್ಧಿಮತ್ತೆಯ ಕುರಿತು ಶಿಕ್ಷಕರಾದ ವೀರೇಶ ಗೋನವಾರ ಮನಮುಟ್ಟುವಂತೆ ಉಪನ್ಯಾಸ ನೀಡಿದರು ಎಂದರು.ಪ್ರದರ್ಶನ:
ಶಾಲೆಯ 8,9 ಮತ್ತು 10ನೇ ತರಗತಿ ವಿದ್ಯಾರ್ಥಿಗಳು ತಾಜ್ಯ ವಸ್ತುಗಳಿಂದ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ವಿವಿಧ ಆಕರ್ಷಕ ಮಾದರಿಗಳನ್ನು ತಯಾರಿಸಿ ಪ್ರದರ್ಶಿಸಿದರು. ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮಾದರಿಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.ಬಹುಮಾನ:
ಮಾದರಿಗಳಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳನ್ನು ಪಡೆದ ಶಾಂತಮ್ಮ, ಕೌಶಲ್ಯ, ಮನು ಇವರಿಗೆ ಪ್ರಶಸ್ತಿಪತ್ರ ಮತ್ತು ನಗದು ಬಹುಮಾನಗಳನ್ನು ವಿತರಿಸಲಾಯಿತು.ವೇದಿಕೆಯ ಮೇಲೆ ಶಾಲಾ ಶಿಕ್ಷಕರಾದ ಸುಭಾಷಚಂದ್ರ ಪತ್ತಾರ, ರವಿಚಂದ್ರ, ಎಂ.ಮಾರುತಿ. ಬಸವರಾಜ, ವಿಜ್ಞಾನ ಶಿಕ್ಷಕರಾದ ರೂಪಾ ಪ್ರಾಸ್ತಾವಿಕವಾಗಿ ಮಾತನಾಡಿದರು.