ಶಿಕ್ಷಣ ವ್ಯವಸ್ಥೆಯು ಗುರುಕುಲ ಪದ್ಧತಿಯಿಂದ ಆರಂಭವಾಗಿ ಇಂದು ಕೃತಕ ಬುದ್ಧಿಮತ್ತೆ ವರೆಗೆ ಬಂದು ನಿಂತಿದೆ. ಶೈಕ್ಷಣಿಕ ಸಂಸ್ಥೆಗಳು ಕೌಶಲ್ಯಯುತ ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು.

ಧಾರವಾಡ:

ಶೈಕ್ಷಣಿಕ ಗುಣಮಟ್ಟ ಅಭಿವೃದ್ಧಿಪಡಿಸುವಲ್ಲಿ ಕೃತಕ ಬುದ್ಧಿಮತ್ತೆಯನ್ನು ಹೆಚ್ಚು ಬೆಳೆಸಿಕೊಳ್ಳಬೇಕೆಂದು ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ. ಎಸ್. ಆರ್. ನಿರಂಜನ ಹೇಳಿದರು.

ಕರ್ನಾಟಕ ವಿಶ್ವವಿದ್ಯಾಲಯದ ಗಣಕಯಂತ್ರ ವಿಜ್ಞಾನ ಅಧ್ಯಯನ ವಿಭಾಗವು ಇಲ್ಲಿಯ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡ "ರೆಸ್ಪಾನಿಸಿಬಲ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ " ಕುರಿತಾದ ಅಂತಾರಾಷ್ಟ್ರೀಯ ಸಮ್ಮೇಳನದ ಉದ್ಘಾಟನೆ ಮಾಡಿದ ಅವರು, ಶಿಕ್ಷಣ ವ್ಯವಸ್ಥೆಯು ಗುರುಕುಲ ಪದ್ಧತಿಯಿಂದ ಆರಂಭವಾಗಿ ಇಂದು ಕೃತಕ ಬುದ್ಧಿಮತ್ತೆ ವರೆಗೆ ಬಂದು ನಿಂತಿದೆ. ಶೈಕ್ಷಣಿಕ ಸಂಸ್ಥೆಗಳು ಕೌಶಲ್ಯಯುತ ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಎಂದರು.

ವಿದ್ಯಾರ್ಥಿಗಳು ತಮ್ಮ ಸ್ವ-ಅರಿವಿನಿಂದ ಜಾಗತಿಕ ವಲಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ತಮ್ಮ ವಿಷಯಗಳ ಅಧ್ಯಯನದ ಜತೆಗೆ ಉಳಿದೆಲ್ಲ ವಿಷಯಗಳ ತತ್ವವನ್ನು ತಿಳಿಯಬೇಕು. ಸ್ವಾತಂತ್ರ್ಯಾನಂತರ ಭಾರತಕ್ಕೆ ಸಂವಹನ, ಆಹಾರ ಹಾಗೂ ಬಡತನದ ಸಮಸ್ಯೆಯು ಸವಾಲಾಗಿದ್ದು, ತಂತ್ರಜ್ಞಾನದ ಅಳವಡಿಕೆ, ವಿವಿಧ ಕ್ಷೇತ್ರಗಳ ಕ್ರಾಂತಿಯ ಫಲದಿಂದ ಎಲ್ಲವನ್ನು ನಿವಾರಿಸಲು ಸಾಧ್ಯವಾಗಿದೆ. ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರದ ಬೆಳವಣಿಗೆಯಿಂದ ವಿಕಸಿತ ಭಾರತದ ಗುರಿ ತಲುಪಲು ಸಾಧ್ಯ. ವಿದ್ಯಾರ್ಥಿಗಳಿಗೆ ಸಮಾಜ ಹಾಗೂ ಸ್ವ-ಅರಿವು ಉತ್ತಮ ಶಿಕ್ಷಕನಾಗಿದ್ದು, ಎಲ್ಲ ಆಯಾಮಗಳಿಂದ ಜ್ಞಾನ ಗಳಿಸಬೇಕಿದೆ ಎಂದು ಹೇಳಿದರು.

ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಲ್. ಧರ್ಮ ಮಾತನಾಡಿ, ಮಾನವನ ಬೌದ್ಧಿಕ ಸಾಮರ್ಥ್ಯದ ಫಲವಾದ ಎಐ ಇಂದು ಎಲ್ಲ ಕ್ಷೇತ್ರಗಳಲ್ಲೂ ವಿಸ್ತರಿಸಿದೆ. ವಿಶ್ವ ವಿದ್ಯಾಲಯಗಳು ಪರಸ್ಪರ ಶೈಕ್ಷಣಿಕ ಸಂಬಂಧ ಬೆಳೆಸುವುದರೊಟ್ಟಿಗೆ ಶೈಕ್ಷಣಿಕ ಸಾಧನೆಗೆ ಶ್ರಮಿಸಬೇಕಾಗಿದೆ ಎಂದರು.

ದಾವಣಗೆರೆ ವಿವಿ ಕುಲಪತಿ ಪ್ರೊ. ಬಿ.ಡಿ. ಕುಂಬಾರ ಮಾತನಾಡಿ, ವಿದ್ಯಾರ್ಥಿಗಳು ಎಐನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಬೇಕು. ಅತಿಯಾದ ಬಳಕೆಯು ಮನುಷ್ಯನ ಆಲೋಚನಾ ಸಾಮರ್ಥ್ಯವನ್ನು ಕ್ಷೀಣಿಸುತ್ತದೆ. ಎಲ್ಲರೂ ತಮ್ಮ ಸ್ವಂತ ಕ್ರಿಯಾಶೀಲತೆಯಿಂದ ಅಧ್ಯಯನ ನಡೆಸಬೇಕು ಎಂದು ತಿಳಿಸಿದರು.

ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ (ಐಐಐಟಿ) ನಿರ್ದೇಶಕ ಪ್ರೊ. ಎಸ್.ಆರ್. ಮಹದೇವ ಪ್ರಸನ್ನ ಮಾತನಾಡಿ, ಪ್ರಸ್ತುತ ಎಲ್ಲ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಬಳಕೆ ಇದೆ. ಈ ತಂತ್ರಜ್ಞಾನದಿಂದ ಉದ್ಯಮದ ಸ್ವರೂಪದಲ್ಲಿ ಬದಲಾವಣೆ ಆಗುತ್ತಿದೆ. ಇಂದಿನ ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕನ ಪಾತ್ರವನ್ನೂ ಪುನರ್ ವ್ಯಾಖ್ಯಾನಿಸಲಾಗುತ್ತಿದೆ. ಸಂಶೋಧನಾ ‌ಕ್ಷೇತ್ರದಲ್ಲಿ ಎಐ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದ್ದು, ಹೊಸ ರೀತಿಯ ಕಲಿಕೆಯ ಅನುಭವವನ್ನು ಎಐ ನೀಡುತ್ತಿದೆ. ಎಐ ಬಳಕೆ ಮಾಡುವಾಗ ಜವಾಬ್ದಾರಿಯುತ ನೈತಿಕತೆಯನ್ನು ಪಾಲಿಸುವುದು ಇಂದಿನ ಅಗತ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಕವಿವಿ ಕುಲಪತಿ ಪ್ರೊ. ಎ. ಎಂ. ಖಾನ್, ಆರೋಗ್ಯಯುತ ಸಮಾಜ ನಿರ್ಮಾಣಕ್ಕಾಗಿ ಕೃತಕ ಬುದ್ಧಿಮತ್ತೆ ಸರಿಯಾದ ಕ್ರಮದಲ್ಲಿ ಬಳಕೆಯಾಗಲಿ. ಶೈಕ್ಷಣಿಕ ಸಾಧನೆಗಾಗಿ ತಂತ್ರಜ್ಞಾನ ಬಳಕೆಯಾಗಬೇಕು ಎಂದರು.

ಧಾರವಾಡ ಐಐಟಿ ನಿರ್ದೇಶಕ ಪ್ರೊ. ಎಸ್.ಆರ್. ಮಹಾದೇವ ಪ್ರಸನ್ನ, ಕಾರ್ಡಿಯನ್ ಮೆಟ್ರೊಪಾಲಿಟಿಯನ್ ಯುನಿವರ್ಸಿಟಿ ಪ್ರಾಧ್ಯಾಪಕ ಪ್ರೊ. ಅಘ್ನೇಶ್ ಅನುಪಮ್, ಕವಿವಿ ಕುಲಸಚಿವ ಪ್ರೊ. ಎನ್.ವೈ. ಮಟ್ಟಿಹಾಳ, ಪ್ರೊ. ಶ್ರೀದೇವಿ, ಪ್ರೊ. ವಿಜಯಕುಮಾರ ಗುರಾನಿ ಇದ್ದರು. ಪ್ರೊ. ಈಶ್ವರ ಬೈದಾರಿ ಸ್ವಾಗತಿಸಿದರು. ಪ್ರೊ. ಶಿವಶಂಕರ ಎಸ್. ವಂದಿಸಿದರು. ಸಂಶೋಧನಾ ವಿದ್ಯಾರ್ಥಿನಿ ಅಪೂರ್ವ ನಿರೂಪಿಸಿದರು.