ಆಯುಷ್ಮಾನ್‌ ಭಾರತ್‌ ಯೋಜನೆಯ ಸದುಪಯೋಗಪಡಿಸಿಕೊಳ್ಳಿ

| Published : Oct 27 2023, 12:30 AM IST

ಆಯುಷ್ಮಾನ್‌ ಭಾರತ್‌ ಯೋಜನೆಯ ಸದುಪಯೋಗಪಡಿಸಿಕೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಆಯುಷ್ಮಾನ್ ಭಾರತ್‌ ಯೋಜನೆಯಡಿ ಜರಗುವ ಆರೋಗ್ಯ ಮೇಳದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಶಿವಶಂಕರ್ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು, ಸದಾಕಾಲ ವ್ಯವಸಾಯದ ಬಗ್ಗೆ ಚಿಂತಿಸುತ್ತಾ, ಆರೋಗ್ಯ ರಕ್ಷಣೆಗೆ ಕಾಳಜಿ ತೋರದ ರೈತಾಪಿ ವರ್ಗದ ಜನರ ಉತ್ತಮ ಆರೋಗ್ಯ ಮತ್ತು ಅವರ ಕ್ಷೇಮಕ್ಕಾಗಿ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ "ಆಯುಷ್ಮಾನ್ ಭಾರತ್‌ " ಯೋಜನೆಯಡಿ ಜರಗುವ ಆರೋಗ್ಯ ಮೇಳದ ಸದುಪಯೋಗ ಪಡಿಸಿಕೊಳ್ಳಬೇಕು ಮತ್ತು ರೈತರು ತಮ್ಮ ಆರೋಗ್ಯದ ಹಿತದೃಷ್ಠಿಯಿಂದ ತಪಾಸಣೆಗೆ ಒಳಗಾಗುವುದು ಅತ್ಯಗತ್ಯವೆಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಶಿವಶಂಕರ್ ಸಲಹೆ ನೀಡಿದರು. ತಾಲೂಕಿನ ದೊಡ್ಡಕುಂಚೆ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗುರುವಾರ ಆಯುಷ್ಮಾನ್ ಭಾರತ್ ಯೋಜನೆಯಡಿ ಆಯೋಜನೆ ಮಾಡಿದ್ದ ಆರೋಗ್ಯ ಮೇಳದಲ್ಲಿ ಭಾಗವಹಿಸಿ, ಮಾತನಾಡಿದರು. ಸರ್ಕಾರ ಖರ್ಚು ಮಾಡುವ ಹಣ ವ್ಯರ್ಥವಾಗದೇ ಸದುಪಯೋಗ ಆಗಬೇಕಾದರೆ ಯೋಜನೆಯ ಉಪಯೋಗವನ್ನು ಗ್ರಾಮೀಣ ಜನರು ಪಡೆದು ನೆಮ್ಮದಿಯ ಜೀವನ ನಡೆಸಿದಾಗ ಮಾತ್ರ ಯಶಸ್ವಿಯಾಗುತ್ತದೆ ಎಂದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಹರೀಶ್ ಮಾತನಾಡಿ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಬಿಪಿಎಲ್ ಕಾರ್ಡ್ ಹೊಂದಿರುವ ವ್ಯಕ್ತಿಗೆ ಅಗತ್ಯ ಸಮಯದಲ್ಲಿ ಚಿಕಿತ್ಸೆಗೆ ಎಂದು ೫ ಲಕ್ಷ ರು. ತನಕ ಧನ ಸಹಾಯ ದೊರೆಯಲಿದ್ದು, ಈ ಯೋಜನೆಯ ಉಪಯೋಗವನ್ನು ಪಡೆಯಬೇಕಾದರೇ ಚಿಕಿತ್ಸೆಗೆ ತೆರಳುವ ಸಂದರ್ಭದಲ್ಲಿ ಬಿಪಿಎಲ್ ಕಾರ್ಡ್ ಜತೆಗೆ ಆಧಾರ್ ಕಾರ್ಡ್ ತೆಗೆದುಕೊಂಡು ಹೋದರೆ ಸಾಕು ಎಂದು ಸಲಹೆ ನೀಡಿದರು. ಜಿಲ್ಲಾ ವಿಬಿಡಿ ನಿಯಂತ್ರಣ ಅಧಿಕಾರಿ ಡಾ. ನಾಗಪ್ಪವನರು ಡೆಂಘೀ ಕುರಿತಂತೆ ಮಾಹಿತಿ ನೀಡಿ, ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳು ಮತ್ತು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಸಲಹೆ ಜತೆಗೆ ಎಚ್ಚರಿಕೆಯ ಮಾತುಗಳ ಜತೆಗೆ ತೀವ್ರತೆಯ ಬಗ್ಗೆ ವಿವರಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಮಂಜುಳ ಹಾಗೂ ಅರುಂಧತಿ ಅವರು ಅಂಗಾಂಗ ದಾನಗಳ ಬಗ್ಗೆ ತಿಳಿಸುವ ಜತೆಗೆ ಅದರ ಮಹತ್ವವನ್ನು ಸವಿಸ್ತಾರವಾಗಿ ವಿವರಿಸಿದರು. ದೊಡ್ಡಕುಂಚೆ ಗ್ರಾ.ಪಂ. ಅಧ್ಯಕ್ಷೆ ಸಾವಿತ್ರಿ ಅವರು ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಹಾಸನದ ಹಿಮ್ಸ್ ಆಸ್ಪತ್ರೆಯ ವಿವಿಧ ವಿಭಾಗಗಳ ತಜ್ಞ ವೈದ್ಯರು ಆರೋಗ್ಯ ಮೇಳದಲ್ಲಿ ಉಪಸ್ಥಿತರಿದ್ದು, ಆರೋಗ್ಯ ತಪಾಸಣೆ ನಡೆಸಿದರು. ಒಟ್ಟು ೩೨೮ ಜನರ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಸಲಹೆ ಹಾಗೂ ಸೂಚನೆಗಳನ್ನು ನೀಡಲಾಯಿತು. ತುರ್ತಾಗಿ ಚಿಕಿತ್ಸೆಯ ಅಗತ್ಯವಿದ್ದ ಇಬ್ಬರನ್ನು ತುರ್ತು ಚಿಕಿತ್ಸಾ ವಾಹನದಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿ ಕೊಡಲಾಯಿತು. ದೊಡ್ಡಕುಂಚೆ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ನಾಗೇಶ್ ಆರಾಧ್ಯ, ಅರವಳಿಕೆ ತಜ್ಞ ಡಾ. ರವಿಶಂಕರ್ ಬಿ.ಎಂ., ಜಿಲ್ಲಾ ಆಶಾ ಮೆಂಟರ್ ಸುಧಾ, ಗ್ರಾ.ಪಂ. ಆರೋಗ್ಯ ಸಂಯೋಜಕಾ ರಮೇಶ್ ಐ.ಕೆ., ಆಸ್ಪತ್ರೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಇದ್ದರು.