ಸಾರಾಂಶ
ಬ್ಯಾಂಕ್ ಆಫ್ ಬರೋಡಾದ ಚಿಕ್ಕೋಡಿ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಗಾಯತ್ರಿ. ಆರ್ ಅಭಿಮತ ವ್ಯಕ್ತಪಡಿಸಿದ್ದು, ಜೀವನೋಪಾಯಕ್ಕಾಗಿ ಬ್ಯಾಂಕಿಂಗ್ ವ್ಯವಸ್ಥೆ ಬಳಸುವಂತೆ ಹೇಳಿದರು.
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಹಳ್ಳಿ ಹಳ್ಳಿಗಳಲ್ಲಿ ರಾಷ್ಟ್ರೀಯ ಬ್ಯಾಂಕುಗಳು ಕಾಲಿಡುತ್ತಿವೆ. ಬ್ಯಾಂಕಿಂಗ್ ವ್ಯವಸ್ಥೆಯನ್ನು ಜನರು ತಮ್ಮ ಜೀವನೋಪಾಯಕ್ಕಾಗಿ ಬಳಸಿಕೊಳ್ಳಬೇಕು ಎಂದು ಬ್ಯಾಂಕ್ ಆಫ್ ಬರೋಡಾದ ಮಂಗಳೂರು ವಲಯದ ಮುಖ್ಯಸ್ಥೆ ಗಾಯತ್ರಿ. ಆರ್ ಹೇಳಿದರು.ಅವರು ಪಟ್ಟಣದಲ್ಲಿ ಹೊಸದಾಗಿ ಸ್ಥಳಾಂತರಗೊಂಡ ಬ್ಯಾಂಕ್ ಆಫ್ ಬರೋಡಾದ ಚಿಕ್ಕೋಡಿ ಶಾಖೆಯ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಮಾತನಾಡಿ, ಇಷ್ಟು ದಿನಗಳ ಕಾಲ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಕೇಂದ್ರಿಕೃತವಾಗಿದ್ದ ರಾಷ್ಟ್ರೀಕೃತ ಬ್ಯಾಂಕುಗಳು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಲೋಚನೆಯಿಂದ ಗ್ರಾಮೀಣ ಭಾಗದ ಜನರಿಗೆ ತಮ್ಮ ಸೇವೆಯನ್ನು ಒದಗಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಸಹಕಾರಿ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಜಗದೀಶ ಕವಟಗಿಮಠ ಮಾತನಾಡಿದರು.ಸಾನ್ನಿಧ್ಯ ವಹಿಸಿದ್ದ ಚಿಕ್ಕೋಡಿಯ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ ಮಾತನಾಡಿ, ಬ್ಯಾಂಕ್ ಸೇರಿದಂತೆ ಯಾವುದೇ ಕ್ಷೇತ್ರಗಳಲ್ಲಿಯೇ ಆಗಲಿ ಕೆಲಸ ಮಾಡುವವರ ತಲೆ, ಹೃದಯ ಹಾಗೂ ಕೈ ಚೆನ್ನಾಗಿದ್ದರೆ ನಿರಾತಂಕವಾಗಿ ಆ ಕ್ಷೇತ್ರದಲ್ಲಿ ಮುನ್ನಡೆಯಲು ಸಾಧ್ಯ ಎಂದರು.
ಗ್ರಾಹಕರಿಗೆ ಸಾಲ ಮಂಜೂರಾತಿ ಪತ್ರಗಳನ್ನು ನೀಡಲಾಯಿತು. ಸಿಬಿ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ, ಹುಬ್ಬಳ್ಳಿಯ ಪ್ರಾದೇಶಿಕ ವ್ಯವಸ್ಥಾಪಕ ವಡ್ಡೆ ಶ್ರೀ ಹರಿ, ದೇವೇಂದ್ರ ಕರೋಶಿ ಉಪಸ್ಥಿತರಿದ್ದರು. ಚಿಕ್ಕೋಡಿ ಶಾಖೆಯ ಬ್ಯಾಂಕ್ ಮ್ಯಾನೇಜರ್ ಈರಣ್ಣ ಜವಳಿ ಸ್ವಾಗತಿಸಿದರು. ವಿನಾಯಕ ಖೋತ ನಿರೂಪಿಸಿದರು. ಉಪ ಪ್ರಾದೇಶಿಕ ವ್ಯವಸ್ಥಾಪಕ ಪ್ರಶಾಂತ ಕಡಾಲೆ ವಂದಿಸಿದರು.