ಸಿ- ವ್ಹಿಜಿಲ್‌ ಆ್ಯಪ್‌ ಬಳಸಿ: ದೂರು ದಾಖಲಿಸಿ: ಚುನಾವಣಾಧಿಕಾರಿ ದಿವ್ಯಪ್ರಭು

| Published : Mar 24 2024, 01:32 AM IST

ಸಾರಾಂಶ

ಸಿ- ವ್ಹಿಜಿಲ್ ಆ್ಯಪ್ ಮೂಲಕ ಜನರು ಯಾವುದೇ ರೀತಿಯ ಚುನಾವಣಾ ಅವ್ಯವಹಾರಗಳನ್ನು ವರದಿ ಮಾಡಬಹುದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಧಾರವಾಡ

ಸಿ- ವ್ಹಿಜಿಲ್‌ (CVIGIL) ಎಂಬುದು ನಾಗರಿಕರಿಗೆ ಮಾದರಿ ನೀತಿ ಸಂಹಿತೆ ಮತ್ತು ಚುನಾವಣೆಯ ಸಮಯದಲ್ಲಿ ಉಲ್ಲಂಘನೆಯನ್ನು ವರದಿ ಮಾಡಲು ಒಂದು ನವನವೀನ ಮೊಬೈಲ್ ಅಪ್ಲಿಕೇಶನ್ ಆಗಿದೆ. ಸಿ-ವ್ಹಿಜಿಲ್ ಎಂದರೆ ವಿಜಿಲೆಂಟ್ ಸಿಟಿಜನ್ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಿ-ವ್ಹಿಜಿಲ್ ಎಂಬುದು ಚುನಾವಣೆಗಳಲ್ಲಿ ಪಾರದರ್ಶಕತೆ ಮತ್ತು ಮುಕ್ತತೆ ಕಾಪಾಡಲು ನಾಗರಿಕರು ವಹಿಸಬಹುದಾದ ಪೂರ್ವಭಾವಿ ಮತ್ತು ಜವಾಬ್ದಾರಿಯುತ ಪಾತ್ರವನ್ನು ಒತ್ತಿಹೇಳುತ್ತದೆ.

ಕ್ಯಾಮರಾ, ಉತ್ತಮ ಇಂಟರನೆಟ್‌ ಸಂಪರ್ಕ ಮತ್ತು ಜಿಪಿಎಸ್ ಪ್ರವೇಶವನ್ನು ಹೊಂದಿರುವ ಯಾವುದೇ ಅಂಡ್ರಾಯ್ಡ್, ಜಿಎಪಿಎಸ್ ಸ್ಮಾರ್ಟ್ ಫೋನ್‌ಗಳಲ್ಲಿ ಅಪ್ಲಿಕೇಶನ್ ಅನ್ನು ಸ್ಥಾಪಿಸಬಹುದು ಮತ್ತು ಬಳಸಬಹುದು, ನಿಯಮ ಉಲ್ಲಂಘಿಸುವ ಚಟುವಟಿಕೆಯ ಚಿತ್ರ ಅಥವಾ 2 ನಿಮಿಷಗಳ ವೀಡಿಯೊವನ್ನು ಕ್ಲಿಕ್ ಮಾಡಿ ಮತ್ತು ದೂರನ್ನು ನೋಂದಾಯಿಸಬಹುದು.

ದೂರಿನೊಂದಿಗೆ ಸೆರೆಹಿಡಿಯಲಾದ ಜಿಎಫ್‌ ಮಾಹಿತಿಯನ್ನು ಸಂಬಂಧಪಟ್ಟ ಜಿಲ್ಲಾ ನಿಯಂತ್ರಣ ಕೊಠಡಿಗೆ ಸ್ವಯಂಚಾಲಿತವಾಗಿ ಫ್ಲಾಗ್ ಮಾಡುತ್ತದೆ. ಫ್ಲೈಯಿಂಗ್ ಸ್ಕ್ವಾಡ್‌ಗಳನ್ನು ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ರವಾನಿಸಲು ಅನುವು ಮಾಡಿಕೊಡುತ್ತದೆ. ಸಿ- ವ್ಹಿಜಿಲ್ ಆ್ಯಪ್ ಮೂಲಕ ಜನರು ಯಾವುದೇ ರೀತಿಯ ಚುನಾವಣಾ ಅವ್ಯವಹಾರಗಳನ್ನು ವರದಿ ಮಾಡಬಹುದು. ಜನರು ನೀಡುವ ಪ್ರತಿ ದೂರಿಗೂ 100 ನಿಮಿಷಗಳ ಒಳಗೆ ಕ್ರಮ ಕೈಗೊಳ್ಳಲಾಗುವುದು. ಸಿ- ವ್ಹಿಜಿಲ್ ಆ್ಯಪ್‌ನಲ್ಲಿ ದೂರು ಕೊಡುವಾಗ ಜನರು ತಮ್ಮ ಹೆಸರನ್ನು ಬಹಿರಂಗಗೊಳಿಸಬಹುದು ಅಥವಾ ಅನಾಮಧೇಯವಾಗಿಯೂ ಇಡಬಹುದಾಗಿದೆ.

ಜಿಲ್ಲೆಯಲ್ಲಿ ಈಗಾಗಲೇ ಕಂಟ್ರೋಲ್ ರೂಮ್ ಸ್ಥಾಪಿಸಿದ್ದು ಸಿ-ವ್ಹಿಜಿಲ್ ತಂಡ ಕಾರ್ಯಗತವಾಗಿದೆ. ಇಂದಿನ ವರೆಗೆ (ಮಾ. 23) ಧಾರವಾಡ ಜಿಲ್ಲೆಯ 629 ದೂರು ಸಿ-ವ್ಹಿಜಿಲ್ ಮುಖಾಂತರ ದಾಖಲಾಗಿದ್ದು ನಿವಾರಣೆ ಮಾಡಲಾಗಿದೆ.

ಸಿ-ವ್ಹಿಜಿಲ್ ಕಾರ್ಯವನ್ನು ಕೆ.ಆರ್.ಆರ್.ಡಿ.ಎ. ಧಾರವಾಡ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅನೀಸ್ ನಾಯಕ್ ಅವರು ಮತ್ತು ಜಿಲ್ಲಾಧಿಕಾರಿಗಳ ಕಚೇರಿಯ ಸಿಬ್ಬಂದಿ ರುದ್ರೇಶ ಮತ್ತು ಪ್ರಜ್ವಲ ಅವರ ತಾಂತ್ರಿಕ ಸಹಾಯದಲ್ಲಿ ನಿರ್ವಹಿಸಲಾಗುತ್ತಿದೆ.

ಸಿ-ವ್ಹಿಜಿಲ್ ಕಾರ್ಯವನ್ನು ಇಬ್ಬರು ಅಧಿಕಾರಿಗಳು, ಮೂರು ಶಿಫ್ಟ್‌ದಲ್ಲಿ ಮಾಡುತ್ತಿದ್ದಾರೆ. ಈ ತಂಡದ ಸದಸ್ಯರಿಂದ ದಿನದ 24 ಗಂಟೆ ನಿರಂತರ ನಿಗಾವಹಿಸಿ, ಮಾದರಿ ನೀತಿ ಸಂಹಿತೆ ಮತ್ತು ಚುನಾವಣಾ ನಿಯಮಗಳ ಉಲ್ಲಂಘನೆ ಆಗದಂತೆ ಎಚ್ಚರವಹಿಸಲಾಗಿದೆ ಎಂದು ತಿಳಿಸಿದ್ದಾರೆ.