ಸಾರಾಂಶ
ಜಿಲ್ಲಾ ಮಟ್ಟದ ಸಿರಿಧಾನ್ಯ ಹಾಗೂ ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ
ಕನ್ನಡಪ್ರಭ ವಾರ್ತೆ ಕೊಪ್ಪಳಸರ್ಕಾರದಿಂದ ನಡೆಯುವ ಸಭೆ, ಸಮಾರಂಭಗಳಲ್ಲಿ ಸಿರಿಧಾನ್ಯ ಖಾದ್ಯಗಳನ್ನು ಬಳಕೆ ಮಾಡುವಂತೆ ಜಿಪಂ ಮುಖ್ಯ ಕಾರ್ಯನಿವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ ಹೇಳಿದರು.
ಬುಧವಾರ ನಗರದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಕೃಷಿ ಇಲಾಖೆ ಹಾಗೂ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಕೊಪ್ಪಳ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಸಿರಿಧಾನ್ಯ ಹಾಗೂ ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಿರಿಧಾನ್ಯದ ಉತ್ಪನ್ನಗಳನ್ನು ಅಂಗನವಾಡಿ ಮತ್ತು ಶಾಲೆಗಳ ಆಹಾರದ ಮೆನುಗಳಲ್ಲಿ ಸೇರಿಸಬೇಕು. ಸಿರಿಧಾನ್ಯ ಬಳಕೆಯಿಂದ ಮಕ್ಕಳಿಗೆ ಮತ್ತು ತಾಯಂದಿರ ಆರೋಗ್ಯ ವೃದ್ಧಿಯಾಗುತ್ತದೆ. ಸಿರಿಧಾನ್ಯಗಳು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಹೃದಯ ಆರೋಗ್ಯ, ಮೆದುಮೇಹ ನಿಯಂತ್ರಣ ಮತ್ತು ತೂಕ ಸಮತೋಲನಕ್ಕೆ ಸಹಾಯ ಮಾಡುತ್ತವೆ. ಈ ಆಹಾರಗಳ ಉಪಯುಕ್ತತೆ ಬಗ್ಗೆ ರೀತಿಯ ಸ್ಪರ್ಧೆಗಳು ನಮ್ಮ ಪಾರಂಪರಿಕ ಆಹಾರ ಪದ್ಧತಿಗಳನ್ನು ಮತ್ತೆ ಜನಪ್ರಿಯಗೊಳಿಸಲು ಸಹಾಯ ಮಾಡುತ್ತವೆ. ಈ ಕಾರ್ಯಕ್ರಮದಿಂದ ಜನರು ತಮ್ಮ ದಿನನಿತ್ಯದ ಆಹಾರ ಪದ್ಧತಿಯಲ್ಲಿ ಸಿರಿಧಾನ್ಯಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹವಾಗುತ್ತದೆ. ಈ ಆಹಾರಗಳ ಉಪಯುಕ್ತತೆ ಬಗ್ಗೆ ಸಾರ್ವಜನಿಕರಿಗೆ ತಿಳಿಸುವುದು ಅತೀ ಅವಶ್ಯಕವಾಗಿದೆ ಎಂದು ತಿಳಿಸಿದರು.
ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್., ಸಿರಿಧಾನ್ಯಗಳ ಸಂಸ್ಕರಣೆ, ಬ್ರಾಂಡಿಂಗ್, ಪ್ಯಾಕಿಂಗ್‌ಗಳನ್ನು ಎಸ್.ಎಚ್.ಜಿ ಹಾಗೂ ಎಫ್.ಪಿ.ಓ.ಗಳ ಮೂಲಕ ಬೆಳೆಸುವುದು ಮತ್ತು ಮಾಡಿಸುವುದರ ಬಗ್ಗೆ ತಿಳಿಸಿದರು.ಸ್ಪರ್ಧೆಯಲ್ಲಿ ಕೊಪ್ಪಳ, ಕುಷ್ಟಗಿ, ಯಲಬುರ್ಗಾ, ಕಾರಟಗಿ ಹಾಗೂ ಗಂಗಾವತಿಯ ವಿವಿಧ ಗ್ರಾಮಗಳಿಂದ ಒಟ್ಟು 50 ಜನ ಮಹಿಳೆಯರು ಭಾಗವಹಿಸಿ ನವಣೆ, ಸಜ್ಜೆ, ಹಾರಕ, ಬರಗು, ಸಾಮೆ, ಕುಸುಬೆ, ಅಗಸೆ ಮುಂತಾದ ಧಾನ್ಯಗಳಿಂದ ಒಟ್ಟು 106 ತರಹದ ಖಾದ್ಯಗಳನ್ನು ಪ್ರದರ್ಶಿಸಿದರು. ಸಿರಿಧಾನ್ಯ ಹಾಗೂ ಮರೆತುಹೋದ ಖಾದ್ಯಗಳ ತಿನಿಸುಗಳ ತೀರ್ಪುಗಾರರಾಗಿ ಡಾ. ಕವಿತಾ, ಡಾ. ರಾಧಾ, ಡಾ. ರೇವತಿ, ಡಾ. ರಾಘವೇಂದ್ರ ಎಲಿಗಾರ ಭಾಗವಹಿಸಿದ್ದರು.
ಫಲಿತಾಂಶ:ಸಿರಿಧಾನ್ಯ ಖಾರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಸುಖಿರಾಣಿ ಕೊಪ್ಪಳ, ದ್ವಿತೀಯ ಸ್ಥಾನವನ್ನು ಸಹನಾ ಮೇವುಂಡಿ, ತೃತೀಯ ಸ್ಥಾನವನ್ನು ಹುಲಿಗೆಮ್ಮ ಕಾಂಬಳೆ ಮುನಿರಾಬಾದ್ ಪಡೆದರು. ಸಿರಿಧಾನ್ಯ ಸಿಹಿ ವಿಭಾಗದಲ್ಲಿ ಸೌಮ್ಯ ಪಾಟೀಲ್ ಯತ್ನಟ್ಟಿ ಪ್ರಥಮ, ಕೊಟ್ರಮ್ಮ ಹಿಡಿಕಿಮಠ ಮೈನಳ್ಳಿ ದ್ವಿತೀಯ ಹಾಗೂ ಜಯಶ್ರೀ ಶಶಿಮಠ ಸಿದ್ದಾಪೂರ ತೃತೀಯ ಸ್ಥಾನ ಪಡೆದರು. ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಯ ವಿಭಾಗದಲ್ಲಿ ಸುಮಂಗಲಾ ಬಂಡಿ ಹೊಸಲಿಂಗಪುರ ಪ್ರಥಮ, ವಿಜಯಲಕ್ಷ್ಮೀ ಮುದುಗಲ್ ಕೊಪ್ಪಳ ದ್ವಿತೀಯ ಹಾಗೂ ಶಿವಲಿಲಾ ಹುರಕಡ್ಲಿ ಕಾರಟಗಿ ತೃತೀಯ ಸ್ಥಾನ ಪಡೆದುಕೊಂಡರು.ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕಿ ಶಶಿಕಲಾ, ಸಹಾಯಕ ಕೃಷಿ ನಿರ್ದೇಶಕ ಜೀವನಸಾಬ ಹಾಗೂ ಅಜ್ಮೀರ ಅಲಿ, ಎಇಸಿ ವಾಮನಮೂರ್ತಿ, ಕೃಷಿ ಅಧಿಕಾರಿಗಳಾದ ಯೋಗೇಶ, ಪ್ರಕಾಶ ಚವಡಿ, ಎಂ.ಎಂ. ಹಸನ್, ಮೊಹ್ಮದ್ ಗೇಸುದರಾಜ, ಸ್ಮಿತಾ ಹಾಗೂ ಜ್ಯೋತಿ ಸೇರಿದಂತೆ ಇಲಾಖೆ ಸಿಬ್ಬಂದಿ ಮತ್ತಿತರರಿದ್ದರು.