ಸಾರಾಂಶ
ಶಿವಮೊಗ್ಗ : ಡಿಜಿಟಲ್ ತಂತ್ರಜ್ಞಾನ ಬಳಸಿ ಮಹಿಳಾ ಉದ್ಯಮಿಗಳು ಉನ್ನತ ಸಾಧನೆ ಮಾಡಬೇಕು ಎಂದು ಜಿಲ್ಲಾ ವಾಣಿಜ್ಯ ಹಾಗೂ ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು.
ನಗರದ ಮಥುರಾ ಪ್ಯಾರಾಡೈಸ್‌ನಲ್ಲಿ ಉಬುಂಟು ಒಕ್ಕೂಟ, ಸ್ವೇದ ಮಹಿಳಾ ಉದ್ಯಮಿಗಳ ಸಂಘ, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಹಾಗೂ ಕೈಗಾರಿಕಾ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಮಹಿಳಾ ಉದ್ಯಮಿಗಳ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಉದ್ಯಮದಲ್ಲಿ ಯಶಸ್ಸು ಸಾಧಿಸಲು ತಂತ್ರಜ್ಞಾನ ತುಂಬಾ ಅವಶ್ಯವಾಗಿದ್ದು, ಮಹಿಳೆಯರು ಇಂತಹ ಕಾರ್ಯಾಗಾರಗಳಲ್ಲಿ ಭಾಗವಹಿಸಿ ದೊರೆತ ತರಬೇತಿಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸ್ವೇದ ಮಹಿಳಾ ಉದ್ಯಮಿಗಳ ಸಂಘದ ಅಧ್ಯಕ್ಷೆ ಡಾ.ಬಿ.ವಿ.ಲಕ್ಷ್ಮೀದೇವಿ ಮಾತನಾಡಿ, ನಮ್ಮ ಸಂಘವು ಮಹಿಳಾ ಉದ್ಯಮಿಗಳ ಅಭಿವೃದ್ಧಿಗಾಗಿ ಹಲವು ಕಾರ್ಯಕ್ರಮಗಳನ್ನು ಮಾಡುತ್ತಿವೆ. ಮಹಿಳಾ ಉದ್ಯಮಿಗಳು ಹಾಗೂ ಆಸಕ್ತರು ಬೆಳವಣಿಗೆ ಹಾದಿಯಲ್ಲಿ ಸಾಗಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗಣೇಶ್ ಸರ್ಕಾರದ ಯೋಜನೆಗಳ ಬಗ್ಗೆ ಸುದೀರ್ಘ ಮಾಹಿತಿ ನೀಡಿದರು.
ಸಿಡ್ಬಿ ಬ್ಯಾಂಕ್ ಶಾಖಾ ನಿರ್ವಾಹಕ ಶಿವಕುಮಾರ್ ಬಿಲ್ಲು ಅವರು ಹಣಕಾಸಿನ ದೊರೆಯುವಿಕೆ ಬಗ್ಗೆ ಮಾಹಿತಿ ನೀಡಿದರು. ತರಬೇತುದಾರ ಹನುಮಂತಪ್ಪ ಜೆಡ್,ಎಫ್‌ಎಸ್‌ಎಸ್‌ಎಐ ಪ್ರಮಾಣ ಪತ್ರದ ಬಗ್ಗೆ ಹಾಗೂ ಲೀನ್ ಮ್ಯಾನುಫ್ಯಾಕ್ಚರಿಂಗ್ ಯೋಜನೆಯ ಕುರಿತು ಮಾಹಿತಿ ನೀಡಿದರು. ತರಬೇತುದಾರರಾದ ರಚನಾ ಮಹೇಶ್ ಡಿಜಿಟಲ್ ತಂತ್ರಜ್ಞಾನದ ಬಳಕೆಯ ಕುರಿತು ತರಬೇತಿ ನೀಡಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನಿಕಟಪೂರ್ವ ಅಧ್ಯಕ್ಷ ಎನ್.ಗೋಪಿನಾಥ, ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಸುರೇಶ್, ಖಜಾಂಚಿ ಮನೋಹರ್, ಸಹನಾ ಸುಭಾಷ್, ಸ್ವೇದ ಸಂಸ್ಥೆ ಕಾರ್ಯದರ್ಶಿ ಶಿಲ್ಪಾ ಗೋಪಿನಾಥ್, ಖಜಾಂಚಿ ಸಹನಾ ಚೇತನ್ ಉಪಸ್ಥಿತರಿದ್ದರು.