ಕನ್ನಡಪ್ರಭ ವಾರ್ತೆ ಅಥಣಿ

ಬೆಳೆಗಳಿಗೆ ರೈತರು ಅತಿಯಾದ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಬಳಸುತ್ತಿರುವುದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಉತ್ತಮ ಆರೋಗ್ಯಕ್ಕಾಗಿ ಉತ್ತಮ ಆಹಾರಗಳನ್ನು ಬೆಳೆಯುವುದು ಇಂದಿನ ಅಗತ್ಯವಾಗಿದ್ದು, ಸಾವಯುವ ಕೃಷಿಯತ್ತ ರೈತರು ಮುಂದಾಗಬೇಕು ಎಂದು ಧಾರವಾಡದ ತಜ್ಞ ವೈದ್ಯ ಡಾ.ಸಂಜೀವ ಕುಲಕರ್ಣಿ ಹೇಳಿದರು.

ಇಲ್ಲಿನ ಗಾಂಧಿ ಗ್ರಾಮೀಣ ಗುರುಕುಲದಲ್ಲಿ ಅಡುಗೆ ಮನೆ ಪೌಷ್ಟಿಕ ಕೈತೋಟ ನಿರ್ಮಾಣ ಮತ್ತು ನಿರ್ವಹಣೆ ತರಬೇತಿ ಒಂದು ದಿನದ ಕಾರ್ಯಗಾರದಲ್ಲಿ ಉಪನ್ಯಾಸ ನೀಡಿದರು. ನಾವು ಸೇವಿಸುವ ಆಹಾರ ಕಲುಷಿತವಾಗಿದೆ. ರಾಸಾಯನಿಕ ಮತ್ತು ಕೀಟನಾಶಕಗಳ ಬಳಕೆಯಿಂದ ಭೂಮಿ ಬರಡಾಗುತ್ತಿದೆ. ಮನೆಗೆ ಅವಶ್ಯವಿರುವ ತರಕಾರಿ, ಹಣ್ಣುಗಳನ್ನು ಮನೆಯ ಸುತ್ತಮುತ್ತ ಬೆಳೆಯಬೇಕು. ಉತ್ತಮ ಆಹಾರ ಸೇವನೆಯಿಂದ ಆರೋಗ್ಯ ವೃದ್ಧಿಯಾಗುತ್ತದೆ. ರಾಸಾಯನಿಕ ಬಳಕೆಯಿಂದ ಇಂದು ಕ್ಯಾನ್ಸರ್, ಮಧುಮೇಹ, ಬಿಪಿ, ಹೃದಯಾಘಾತದಂತಹ ಕಾಯಿಲೆಗಳು ಹೆಚ್ಚಾಗುತ್ತಿವೆ. ಆದ್ದರಿಂದ ನಮ್ಮ ಸುತ್ತಮುತ್ತಲಿನ ಅಂದರೆ ಮನೆಯ ಸುತ್ತಮುತ್ತಲು ಕೈತೋಟಗಳನ್ನ ನಿರ್ಮಿಸಿಕೊಂಡು ಸಾವಯುವ ತರಕಾರಿಗಳನ್ನು ಬೆಳೆಯಬೇಕು ಎಂದು ಕಿವಿಮಾತು ಹೇಳಿದರು.ತುಕ್ಕಾನಟ್ಟಿ ಕೃಷಿ ವಿಜ್ಞಾನ ಕೇಂದ್ರ, ಬರ್ಡ್ಸ್ ಸಂಸ್ಥೆಯ ಕೃಷಿ ವಿಜ್ಞಾನಿ ಡಾ.ರೇಖಾ ಕಾರಬಾರಿ ಮಾತನಾಡಿ, ಅಡುಗೆ ಮನೆಯಲ್ಲಿ ಎಲ್ಲರ ಆರೋಗ್ಯವಿದೆ. ಗೃಹಿಣಿಯೇ ಇಲ್ಲಿ ವೈದ್ಯಳಾಗಿ ಉತ್ತಮ ಮತ್ತು ಆರೋಗ್ಯಪೂರ್ಣ ಆಹಾರಗಳನ್ನು ತಯಾರಿಸಬೇಕು. ಇಂದು ಮಾರುಕಟ್ಟೆಯಲ್ಲಿ ತರುವ ತರಕಾರಿ ಮತ್ತು ಹಣ್ಣು ಹಂಪಲುಗಳು ರಾಸಾಯನಿಕಯುಕ್ತವಾಗಿವೆ. ಅವುಗಳನ್ನು ಸೇವಿಸುವ ಬದಲು ರೈತರು ತಮ್ಮ ಮನೆಯ ಮುಂಭಾಗದಲ್ಲಿ ಸ್ವಲ್ಪ ಕೈತೋಟವನ್ನು ಮಾಡಿ ಬೇಕಾದ ತರಕಾರಿಗಳನ್ನು ಬೆಳೆದುಕೊಳ್ಳಬೇಕು. ಪಟ್ಟಣ ಪ್ರದೇಶದಲ್ಲಿ ವಾಸಿಸುವ ನಿವಾಸಿಗಳು ಗಾರ್ಡನ್‌ಗಳಲ್ಲಿ ಮತ್ತು ಪಾಟ್‌ಗಳಲ್ಲಿ ತರಕಾರಿ ಮತ್ತು ಸೊಪ್ಪುಗಳನ್ನು ಬೆಳೆಯಬಹುದು. ಇದಕ್ಕೆ ತರಬೇತಿ ಮತ್ತು ಮಾರ್ಗದರ್ಶನ ಅಗತ್ಯ ಎಂದರು. ನಿವೃತ್ತ ಸೈನಿಕನೋರ್ವ ತಮ್ಮ ತೋಟದಲ್ಲಿ ಸಾವಯವ ಕೃಷಿ ಮಾಡುವುದರ ಜೊತೆಗೆ ಪಟ್ಟಣದ ತಮ್ಮ ಮನೆಯ ಮೇಲೆ ತರಕಾರಿ ಮತ್ತು ಹಣ್ಣುಗಳನ್ನು ಬೆಳೆದು ಮಾದರಿಯಾಗಿರುವ ಶಂಕರ ಹಾಗೂ ಕಮಲಾ ಘಟನಟ್ಟಿ ಅವರನ್ನು ಸನ್ಮಾನಿಸಲಾಯಿತು. ನಂತರ ಶಂಕರ ಘಟನಟ್ಟಿ ಮನೆಯ ಸುತ್ತಲೂ ಮತ್ತು ಮೇಲ್ಚಾವಣಿಗಳಲ್ಲಿ ತರಕಾರಿ ಮತ್ತು ಹಣ್ಣುಗಳನ್ನು ಹೇಗೆ ಬೆಳೆಯಬೇಕು ಎಂಬ ಕುರಿತು ಪ್ರಾತ್ಯಕ್ಷಿಕೆ ನೀಡಿದರು.

ಈ ಸಂದರ್ಭದಲ್ಲಿ ಮುಂಬೈ ವೈದ್ಯ ಡಾ.ಕಾಮಾಕ್ಷಿ ಭಾಟೆ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟ‌ರ್, ಡಾ.ಭಾರತಿ ಬಿಜಾಪುರ, ಅನುಪಮಾ ಬುರ್ಲಿ, ಕಮಲಾ ಘಟನಟ್ಟಿ, ಅರುಣ ಯಲಗುದ್ರಿ, ನಚಿಕೇತ ಕಾಥವಟೆ, ಸುಹಾಸ ದಾತಾರ, ಸತೀಶ ಕುಲಕರ್ಣಿ, ಮುತ್ತಣ್ಣ ಗಂಗಪ್ಪನವರ, ಆದಿತ್ಯ ದಾತಾರ, ಎಸ್.ಎಸ್.ಹೂಟಿ ಮಂದಾರ ಕಾಥವಟೆ ಇತರರು ಇದ್ದರು. ಫೋಟೋ: ಅಥಣಿ ಹೊರವಲಯದಲ್ಲಿರುವ ಗಾಂಧಿ ಗ್ರಾಮೀಣ ಗುರುಕುಲದಲ್ಲಿ ಅಡುಗೆ ಮನೆ ಪೌಷ್ಟಿಕ ಕೈತೋಟ ನಿರ್ಮಾಣ ಮತ್ತು ನಿರ್ವಹಣೆ ತರಬೇತಿ " ಕಾರ್ಯಕ್ರಮಕ್ಕೆ ಚಾಲನೆ ನೀಡಿ ಡಾ.ಸತೀಶ ಕುಲಕರ್ಣಿ ಮಾತನಾಡಿದರು.

ಮನೆಯ ಮೇಲ್ಚಾವಣಿಯಲ್ಲಿ ಕೈತೋಟ ಮಾಡಿ ಯಶಸ್ವಿಯಾದ ಮಾಜಿ ಸೈನಿಕ ಶಂಕರ ಘಟನಟ್ಟಿ ದಂಪತಿಗಳಿಗೆ ಸನ್ಮಾನಿಸಲಾಯಿತು.