ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಪೊಲೀಸ್ ಇಲಾಖೆಯ ಸಿಬ್ಬಂದಿ ದಿನದ ೨೪ ಗಂಟೆಗಳು ಸಾರ್ವಜನಿಕರ ಸಮಾಜ ಸೇವೆಗೆ ಮುಡುಪಾಗಿಡುವರು ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಸಲ್ಲದು, ವೃತ್ತಿಯಲ್ಲಿ ಇತಿಮಿತಿ ಇರುವುದು, ಅದರಡಿಯಲ್ಲಿ ಜವಾಬ್ದಾರಿಯಿಂದ ಸಂವಿಧಾನ ಬದ್ದವಾಗಿ ನಡೆದುಕೊಳ್ಳಬೇಕು, ಪೊಲೀಸ್ ಇಲಾಖೆಯ ಸಾಧಕ-ಬಾಧಕಗಳನ್ನು ಅರಿತು ಮಾತನಾಡಬೇಕೆಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅಭಿಪ್ರಾಯಪಟ್ಟರು.ನಗರದ ಮೆಕ್ಕೆ ವೃತ್ತದ ಸಮೀಪದ ಪೊಲೀಸ್ ಸಮುದಾಯದ ಭವನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ನಾಗರಿಕ ಬಂದೂಕು ತರಬೇತಿ ಶಿಬಿರ-೨೦೨೫ರ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ತರಬೇತಿಯಲ್ಲಿ ವಕೀಲರು, ವೈದ್ಯರು, ವ್ಯಾಪಾರಿಗಳು, ಯುವಕರು ಮುಂತಾದವರು ಪಡೆದಿರುವುದು ಕಂಡು ಬಂದಿದೆ. ಕೋಲಾರ ಸಶಸ್ತ್ರ ಮೀಸಲು ಪೊಲೀಸ್ ವಿಭಾಗದವರು ಆಯೋಜಿಸಿದ್ದ ನಾಗರಿಕರ ಬಂದೂಕು ತರಬೇತಿಯಲ್ಲಿ ೧೬೭ ಮಂದಿ ತರಬೇತಿ ಪಡೆದಿರುವುದು ಶ್ಲಾಘನೀಯ, ಹಲವಾರು ಮಂದಿ ಚಲನಚಿತ್ರಗಳಲ್ಲಿ ಬಂದೂಕುಗಳನ್ನು ನೋಡಿರುವುದು ಹೊರತುಪಡಿಸಿ ನಿಜವಾದ ಬಂದೂಕನ್ನು ಬಹಳಷ್ಟು ಜನ ನೋಡಿರುವುದಿಲ್ಲ, ಬಂದೂಕನ್ನು ಪಡೆಯುವುದು ಯಾರಿಗೆ ಅವಶ್ಯಕವಿದೆ ಅವರು ಮಾತ್ರ ಇಲಾಖೆಯಿಂದ ನಿಯಮಾನುಸಾರ ಅರ್ಜಿ ಸಲ್ಲಿಸಿ ಪಡೆಯಬೇಕಾಗುತ್ತದೆ. ವಿನಾಕಾರಣ ಬಂದೂಕನ್ನು ಪಡೆದು ದುರ್ಬಳಿಸಿಕೊಳ್ಳುವುದು ಕಾನೂನು ಬಾಹಿರ, ಶಿಕ್ಷೆಗೂ ಅರ್ಹರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.ಬಂದೂಕು ಬಳಿಸುವುದು ಆತ್ಮರಕ್ಷಣೆಗೆ, ದೇಶ ರಕ್ಷಣೆಗೆ ಮಾತ್ರವಾಗಿದೆ, ಪ್ರಾಣಿಗಳಿಂದ ರಕ್ಷಣೆ ಪಡೆಯಲು, ನಕ್ಸಲ್‌ರಿಂದ ರಕ್ಷಣೆ ಪಡೆಯಲು, ಒಂಟಿ ಮನೆಗಳಲ್ಲಿರುವ ಶ್ರೀಮಂತರು, ಗುಡ್ಡಗಾಡು ಪ್ರದೇಶಗಳಲ್ಲಿರುವರು. ಮುಂತಾದವರು ಹೆಚ್ಚಾಗಿ ಕೊಡಗು ಜಿಲ್ಲೆಯಲ್ಲಿ ಪಡೆದಿದ್ದಾರೆ. ಕೋಲಾರ ಜಿಲ್ಲೆಯಲ್ಲೂ ಸಹ ಹೆಚ್ಚಾಗಿ ಅರ್ಜಿಗಳು ಬಹುತೇಕ ರಿಯಲ್ ಎಸ್ಟೇಟ್ ಮಾಡುವವರು ಸಲ್ಲಿಸಿರುವುದು ಕಂಡು ಬಂದಿದೆ. ಆದರೆ ಬಂದೂಕುಗಳನ್ನು ಸಣ್ಣಪುಟ್ಟ ಘಟನೆಗಳಿಗೆ ಬಳಸಿ, ದುರದ್ದೇಶಗಳಿಗೆ ಬಳಸಿ ಬೆದರಿಕೆ ಹಾಕುವುದು ತಪ್ಪಾಗುತ್ತದೆ ಎಂದರು. ಅರ್ಜಿ ಸಲ್ಲಿಸಿದವರಿಗೆಲ್ಲಾ ಪರವಾನಗಿ ನೀಡಲಾಗುವುದಿಲ್ಲ. ಅರ್ಜಿದಾರನ ಪೂರ್ವಾಪರ ಮಾಹಿತಿಗಳು ಪಡೆದು ಅವಶ್ಯವಿರುವವರಿಗೆ ಮಾತ್ರ ಪರವಾನಗಿ ನೀಡಲಾಗುವುದು. ತರಬೇತಿ ಪಡೆದವರು ಎಲ್ಲರೂ ಬಂದೊಕು ಪಡೆಯಬೇಕೆಂದು ಇಲ್ಲ. ಕೆಲವರು ಬಂದೂಕು ಹೊಂದಿದ್ದು ಪರವಾನಗಿ ಇರುವುದಿಲ್ಲ. ಇನ್ನೂ ಕೆಲವರು ಪರವಾನಗಿ ಹೊಂದಿರುವುದಿಲ್ಲ ಆದರೆ ಬಂದೂಕು ಹೊಂದಿರುತ್ತಾರೆ. ಬಂದೂಕು, ಗನ್‌ಗಳು ಬಳಕೆ ಜಾಗೃತಿಯ ಅರಿವು ಇರಬೇಕಾಗುತ್ತದೆ. ಮಾನಸಿಕವಾಗಿ ಸೀಮಿತವಾಗಿರಬೇಕು, ಸಹನೆ ಕಳೆದುಕೊಳ್ಳಬಾರದು. ಮಾನಸಿಕವಾದ ಒತ್ತಡಗಳನ್ನು ನಿಯಂತ್ರಿಸಿಕೊಳ್ಳಲಾಗದೆ, ಆವೇಶ, ಉದ್ವಿಗ್ನತೆಯಿಂದ ದುರ್‍ಬಳಕೆ ಮಾಡಿದರೆ ಅಪರಾಧವಾಗುತ್ತದೆ ಎಂದು ಕಿವಿಮಾತು ಹೇಳಿದರು.
ಬಂದೂಕು ತರಬೇತಿಯಲ್ಲಿ ಅತ್ಯತ್ತಮ ಗುರಿ ಹೊಂದಿರುವಂತ ಚಂದ್ರಿಕಾ ಪ್ರಥಮ ಬಹುಮಾನ ಪಡೆದರು. ಉಳಿದಂತೆ ಇತರರು ತರಬೇತಿಯ ಪ್ರಮಾಣ ಪತ್ರದೊಂದಿಗೆ ನೆನಪಿನ ಕಾಣಿಕೆ ನೀಡಲಾಯಿತು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ, ಮೀಸಲು ಪಡೆಯ ಡಿವೈಎಸ್ಪಿ ಮಂಜುನಾಥ್, ಮೀಸಲು ಪಡೆಯ ಸಿಬ್ಬಂದಿ ರಮೇಶ್, ಪುನೀತ್, ವೆಂಕಟೇಶ್, ಸುಬ್ರಮಣ್ಯ, ರಾಜೇಂದ್ರ, ಕುಮಾರ್ ಸುಜೀತ್, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್, ಶಿವಶಂಕರ್, ಗಲ್ಪೇಟೆ ಸಿಪಿಐ ಲೋಕೇಶ್, ಡಿಆರ್‌ಪಿಎಸ್ಐ ಸತೀಶ್ ಇದ್ದರು. ಸುಶ್ಮೀತ ತಂಡದಿಂದ ಪ್ರಾರ್ಥನೆ, ಲಕ್ಷ್ಮೀ ನಿರೂಪಿಸಿದರು.