ದೇಶದ ಆರ್ಥಿಕ ಸದೃಢತೆಗಾಗಿ ದೇಶಿಯ ವಸ್ತುಗಳನ್ನೇ ಬಳಸಿ; ಶಾಸಕ ಸಿಮೆಂಟ್ ಮಂಜು

| Published : Nov 09 2025, 02:00 AM IST

ಸಾರಾಂಶ

ಈ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ದೇಶದ ಸಂಪತ್ತಾಗಿ ಬೆಳೆಯಬೇಕು. ಖಾಸಗಿ ಶಾಲೆ ವ್ಯಾಮೋಹದಿಂದ ಹೊರಬಂದು ಸರ್ಕಾರಿ ಶಾಲೆ, ಕಾಲೇಜುಗಳನ್ನು ಉಳಿಸಲು ಪೋಷಕರು, ವಿದ್ಯಾರ್ಥಿಗಳು ಮುಂದಾಗಬೇಕು .

ಕನ್ನಡಪ್ರಭ ವಾರ್ತೆ ಆಲೂರು

ಪ್ರತಿಯೊಬ್ಬರೂ ದೇಶಿಯ ಉತ್ಪನ್ನಗಳನ್ನು ಖರೀದಿಸಿ, ಬಳಸುವ ಮೂಲಕ ಸ್ವಾವಲಂಬಿ ಮತ್ತು ಆರ್ಥಿಕವಾಗಿ ಸದೃಢ ದೇಶವನ್ನಾಗಿ ಮಾಡಲು ಶ್ರಮಿಸಬೇಕು ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.

ಪಟ್ಟಣದ ಸರ್ಕಾರಿ ಕಾಲೇಜಿನಲ್ಲಿ ೨೦೨೫- ೨೬ನೇ ಶೈಕ್ಷಣಿಕ ಸಾಲಿನ ವಿವಿಧ ಸಮಿತಿಗಳನ್ನು ಉದ್ಘಾಟಿಸಿ ಮಾತನಾಡಿ, ನಮ್ಮ ಅಕ್ಕಪಕ್ಕದ ದೇಶಗಳ ಸ್ಥಿತಿಯನ್ನು ಒಮ್ಮೆ ಗಮನಿಸಿದಾಗ, ಅಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿ ಆರ್ಥಿಕ ಮತ್ತು ರಾಜಕೀಯ ಪ್ರಗತಿಯಲ್ಲಿ ಹಿನ್ನಡೆಯಾಗಿದೆ. ಅಮೆರಿಕವು ನಮ್ಮ ದೇಶದ ಉತ್ಪನ್ನಗಳ ಮೇಲೆ ಶೇ. ೫೦ರಷ್ಟು ಸುಂಕ ವಿಧಿಸಲು ಮುಂದಾಗಿದೆ. ಆದರೆ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂತಹ ಬೆದರಿಕೆಗೆ ಬಗ್ಗದೆ, ಸ್ವದೇಶಿ ಉತ್ಪನ್ನಗಳನ್ನು ಕೊಂಡು ಬಳಸಲು ಮನವಿ ಮಾಡಿದ್ದಾರೆ.

ಪ್ರಪಂಚದಲ್ಲೇ ಅತ್ಯುತ್ತಮ ಸಂವಿಧಾನ ರಚಿಸಿರುವ ಡಾ. ಬಿ. ಆರ್. ಅಂಬೇಡ್ಕರ್ ಎಂತಹ ಸಂದರ್ಭ ಎದುರಾದರೂ ಸಂವಿಧಾನದಲ್ಲಿ ರಾಜಕೀಯ ಅಸ್ಥಿರತೆಗೆ ಅವಕಾಶ ಕೊಟ್ಟಿಲ್ಲ. ಇಂದು ನಮ್ಮ ದೇಶ ಪ್ರಪಂಚದ ಮೂರನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮಿದೆ. ನಾವು ಸ್ವಾವಂಬಿಗಳಾಗದಿದ್ದರೆ ದೇಶದಲ್ಲಿ ಅಸ್ಥಿರತೆ ಉಂಟಾಗಿ ಹೊರ ದೇಶಗಳು ನಮ್ಮ ದೇಶವನ್ನು ನಾಶ ಮಾಡುವ ಸಂಚು ಹೂಡುತ್ತಾರೆ. ಪ್ರಪಂಚದಲ್ಲೇ ಭಾರತ ದೇಶ ಪುನ: ಹಳೆ ವೈಭವವನ್ನು ಮೆರೆಯುವಂತೆ ಮಾಡುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ. ಎಲ್ಲರೂ ಕೈ ಜೋಡಿಸಿದರೆ ಮುಂದಿನ ೧೦ ವರ್ಷಗಳಲ್ಲಿ ದೇಶ ಸಂಪದ್ಭರಿತ ದೇಶವಾಗುತ್ತದೆ ಎಂದು ಹೇಳಿದರು.

ಈ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ದೇಶದ ಸಂಪತ್ತಾಗಿ ಬೆಳೆಯಬೇಕು. ಖಾಸಗಿ ಶಾಲೆ ವ್ಯಾಮೋಹದಿಂದ ಹೊರಬಂದು ಸರ್ಕಾರಿ ಶಾಲೆ, ಕಾಲೇಜುಗಳನ್ನು ಉಳಿಸಲು ಪೋಷಕರು, ವಿದ್ಯಾರ್ಥಿಗಳು ಮುಂದಾಗಬೇಕು ಎಂದರು.

ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಹಾಸನ ಜಿಲ್ಲಾ ಘಟಕದ ಅಧ್ಯಕ್ಷ ಎಚ್. ಪಿ. ಮೋಹನ್ ರವರು, ವಿದ್ಯಾರ್ಥಿಗಳು ಪಠ್ಯ ಮತ್ತು ಸಹ ಪಠ್ಯ ಚಟುವಟಿಕೆಗಳಿಗೆ ಸಮಾನ ಆಧ್ಯತೆ ನೀಡಬೇಕು. ಇಂದು ಸ್ಪರ್ಧಾತ್ಮಕ ಪ್ರಪಂಚವಾಗಿದ್ದು, ತಂತ್ರಜ್ಞಾನದ ಬದಲಾವಣೆಗೆ ತಕ್ಕಂತೆ ನಾವೂ ಬದಲಾಗಬೇಕು ಎಂದರು.ಹಾಸನ ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ. ಎಸ್. ಮಂಜೇಗೌಡ ರವರು, ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳು ಸರ್ಕಾರದಿಂದ ದೊರಕುವ ಉಚಿತ ಸವಲತ್ತುಗಳನ್ನು ಬಳಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದುಕಬೇಕು ಎಂದು ಸಲಹೆ ನೀಡಿದರು.

ಪ್ರಾಂಶುಪಾಲ ಟಿ. ಪಿ. ಪುಟ್ಟರಾಜು ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಎನ್. ಎಸ್. ಶಂಕರಲಿಂಗೇಗೌಡ, ಎಂ. ಬಾಲಕೃಷ್ಣ, ಎಂ. ಪಿ. ಹರೀಶ್, ಪ್ರಾಧ್ಯಾಪಕರಾದ ಕೆ. ಎನ್. ರಮೇಶ್, ಜಿ. ಪುರುಷೋತ್ತಮ, ಆರ್. ವಿ. ಮನು, ಕಚೇರಿ ಅಧೀಕ್ಷಕ ಕೆ. ವಿ. ರವಿಪ್ರಕಾಶ್, ರವಿ ಮಾವನೂರು, ನಂಜುಂಡಪ್ಪ ಉಪಸ್ಥಿತರಿದ್ದರು.