ಸಾರಾಂಶ
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಎಸ್.ವೀರೇಂದ್ರ ಕುಮಾರ್ ವಾಲಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಶಿಕಾರಿಪುರ
ಕನ್ನಡ ಉಳಿಸುವುದಕ್ಕೆ ನಾವು ಹೋರಾಟ ಮಾಡುವ ಅಗತ್ಯವಿಲ್ಲ. ನಿತ್ಯಜೀವನದಲ್ಲಿ ಕನ್ನಡ ಉಸಿರಾಗಿಸಿಕೊಂಡು ಬಳಸಲು ಆರಂಭಿಸಬೇಕು ಎಂದು ಶಿಕ್ಷಕ ಶಿವಲಿಂಗಪ್ಪ ಸಲಹೆ ನೀಡಿದರು.ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆಯಲ್ಲಿ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ, ಗ್ರಂಥಾಲಯ ಸಲಹಾ ಸಮಿತಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ಪುಸ್ತಕ ಓದು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮೈಸೂರು ರಾಜರ ಆಳ್ವಿಕೆಗೆ ಒಳಪಟ್ಟಿದ್ದ ಕನ್ನಡ ನಾಡನ್ನು 1976 ರಲ್ಲಿ ಸರ್ದಾರ್ ವಲ್ಲಭಬಾಯ್ ಪಟೇಲ್ ಕರೆಯ ಮೇರೆಗೆ ಹೈದ್ರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ, ಮೈಸೂರು ಈ ಮೂರು ಭಾಗದಲ್ಲಿ ಹರಿದು ಹಂಚಿ ಹೋಗಿದ್ದ ಪ್ರದೇಶವನ್ನು ಒಗ್ಗೂಡಿಸಿ ಕರ್ನಾಟಕ ಎಂದು ನಾಮಕರಣ ಮಾಡಲಾಯಿತು. ಅದಕ್ಕಾಗಿ ಗೋಕಾಕ್ ಚಳುವಳಿ, ಕನ್ನಡ ವಿದ್ಯಾವರ್ಧಕ ಸಂಘ ಸೇರಿ ಹಲವು ಕನ್ನಡಪರ ಸಂಘಟನೆಗಳು ಹೋರಾಟ ಮಾಡಬೇಕಾಯಿತು ಎಂದು ತಿಳಿಸಿದರು.ಪ್ರತಿಯೊಬ್ಬರೂ ಪುಸ್ತಕಗಳ ಬಗ್ಗೆ ಪ್ರೀತಿ ಹೊಂದಬೇಕು. ಕನ್ನಡವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಉಳಿಯುವುದರ ಜೊತೆಗೆ ಬೆಳೆಯುತ್ತದೆ ಎಂದರು.
ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ ಪ್ರಾಧ್ಯಾಪಕ ಎಸ್.ವೀರೇಂದ್ರ ಕುಮಾರ್ ವಾಲಿ ಮಾತನಾಡಿ, ಕನ್ನಡ ಎರಡು ಸಾವಿರ ವರ್ಷ ಇತಿಹಾಸ ಹೊಂದಿರುವ ಭಾಷೆಯಾಗಿದೆ. ಅದು ಇನ್ನಷ್ಟು ಶ್ರೀಮಂತಗೊಳ್ಳಲು ನಾವೆಲ್ಲರೂ ಮೊಬೈಲ್ ಬಿಟ್ಟು ಕನ್ನಡ ಪುಸ್ತಕ ಓದುವ ಯಾರ್ಯದಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಈ ವೇಳೆ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮುಖ್ಯಶಿಕ್ಷಕ ರಾಜಶೇಖರ್, ಗ್ರಂಥಾಲಯ ಸಲಹಾ ಸಮಿತಿ ಸದಸ್ಯ ಜಿ.ವಿಶ್ವನಾಥ್, ಶಿಕ್ಷಕರಾದ ಸುರೇಶ್, ಮೀನಾಕ್ಷಿ, ಪ್ರಶಿಕ್ಷಣಾರ್ಥಿಗಳಾದ ಚೈತ್ರಾ, ಗುರುಸಿದ್ಧಪ್ಪ ಬಣಕಾರ್, ಪ್ರಿಯಾಂಕ, ಸಿದ್ಧರಾಜು, ವಿದ್ಯಾರ್ಥಿಗಳು ಸೇರಿ ಇತರರು ಉಪಸ್ಥಿತರಿದ್ದರು.