ಸಾರಾಂಶ
ನಮ್ಮ ಕ್ಷೇತ್ರದ ರೈತರಿಗೆ ಸರ್ಕಾರದಿಂದ ಸಿಗುವ ಎಲ್ಲ ಸವಲತ್ತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ದೊರೆಯುವಂತೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರುಕೃಷಿ ಕ್ಷೇತ್ರದಲ್ಲಿ ಆಧುನಿಕ ಪದ್ಧತಿ ಬಳಸಿ ಉತ್ತಮ ಇಳುವರಿ ಪಡೆಯಬೇಕೆಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಇಲ್ಲಿಯ ಎಪಿಎಂಸಿ ಆವರಣದಲ್ಲಿ ಕೃಷಿ ಇಲಾಖೆಯಿಂದ ರೈತರಿಗೆ ಕೃಷಿ ಉಪಕರಣಗಳನ್ನು ವಿತರಿಸಿ ಮಾತನಾಡಿದ ಅವರು, ರೈತರು ಹೆಚ್ಚು ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಬೇಸಾಯ ಮಾಡುವುದರಿಂದ ಹೆಚ್ಚು ಫಸಲು ಪಡೆಯಲು ಸಾಧ್ಯ. ನಮ್ಮ ಕ್ಷೇತ್ರದ ರೈತರಿಗೆ ಸರ್ಕಾರದಿಂದ ಸಿಗುವ ಎಲ್ಲ ಸವಲತ್ತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ದೊರೆಯುವಂತೆ ಮಾಡುತ್ತೇನೆ ಎಂದು ಭರವಸೆ ನೀಡಿದರು.ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ ಮಾತನಾಡಿ, ರೈತರು ಭೂಮಿಯ ಫಲವತ್ತತೆ ಕಾಪಾಡುವುದು ಮುಖ್ಯವಾಗಿದೆ. ನೀರನ್ನು ಸರಿಯಾದ ಪ್ರಮಾಣದಲ್ಲಿ ಬಳಕೆ ಮಾಡಿ, ಹೆಚ್ಚು ನೀರು ಬಳಕೆ ಮಾಡಿದರೆ ಹೆಚ್ಚು ಇಳುವರಿ ಬರುವುದಿಲ್ಲ. ಅತಿಯಾದ ನೀರಿನಿಂದ ಭೂಮಿಯ ಫಲವತ್ತತೆ ಕಳೆದುಕೊಳ್ಳುತ್ತದೆ. ನಾವು ಮುಂದಿನ ಪೀಳಿಗೆಗೆ ಉತ್ತಮವಾದ ಭೂಮಿ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಸಲಹೆ ನೀಡಿದರು.
180 ರೈತರಿಗೆ ಸಬ್ಸಿಡಿ ಕೃಷಿ ಸಲಕರಣೆಗಳನ್ನು ವಿತರಿಸಿದರು. ಬೆಳಗಾವಿ ವಿಭಾಗದ ಕೃಷಿ ಉಪ ನಿರ್ದೇಶಕ ಎಸ್ ಬಿ ಕೊಂಗವಾಡ, ಗುರುರಾಜ ಕುಲಕರ್ಣಿ, ಸುನಿಲ ಘಿವಾರಿ ಸಂಗನಗೌಡ ಪಾಟೀಲ, ಅಶ್ಪಾಕ್ ಹವಾಲ್ದಾರ್, ಮುದುಕಪ್ಪ ಮರಡಿ, ಪರಮಗೌಡ ಪಾಟೀಲ, ರಂಗನಾಥ ಇನಾಮದಾರ ಇತರರು ಉಪಸ್ಥಿತರಿದ್ದರು. ಸಹಾಯಕ ನಿರ್ದೇಶಕ ಬಸವರಾಜ ದಳವಾಯಿ ಸ್ವಾಗತಿಸಿದರು. ಕೃಷಿ ಅಧಿಕಾರಿ ಮಂಜುನಾಥ ಕೆಂಚನವರ ನಿರೂಪಿಸಿದರು.