ಹರಳು ಗೊಬ್ಬರ ಬದಲು ನ್ಯಾನೋ ಯೂರಿಯಾ ಬಳಸಿ: ಎಸ್.ನಟರಾಜ್

| Published : Jul 31 2025, 12:45 AM IST

ಸಾರಾಂಶ

ಹರಳು ಯೂರಿಯಾ ರಸಗೊಬ್ಬರ ಪರ್ಯಾಯವಾಗಿ ನ್ಯಾನೋ ಯೂರಿಯಾ ಬಳಕೆಯನ್ನು ಹೆಚ್ಚಾಗಿ ಮಾಡಬೇಕೆಂದು ಮತ್ತು ಇದರ ಉಪಯೋಗದಿಂದ ಹೆಚ್ಚು ಲಾಭ ಹೊಂದಿ ಎಂದು ಸಹಾಯಕ ಕೃಷಿ ನಿರ್ದೇಶಕ ಎಸ್.ನಟರಾಜ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹರಿಹರ

ಹರಳು ಯೂರಿಯಾ ರಸಗೊಬ್ಬರ ಪರ್ಯಾಯವಾಗಿ ನ್ಯಾನೋ ಯೂರಿಯಾ ಬಳಕೆಯನ್ನು ಹೆಚ್ಚಾಗಿ ಮಾಡಬೇಕೆಂದು ಮತ್ತು ಇದರ ಉಪಯೋಗದಿಂದ ಹೆಚ್ಚು ಲಾಭ ಹೊಂದಿ ಎಂದು ಸಹಾಯಕ ಕೃಷಿ ನಿರ್ದೇಶಕ ಎಸ್.ನಟರಾಜ್ ತಿಳಿಸಿದರು.

ತಾಲೂಕಿನ ಕೆಂಚನಹಳ್ಳಿ ಗ್ರಾಮದ ಶಿವಪ್ಪ ಅವರ ಜಮೀನಿನಲ್ಲಿ ನ್ಯಾನೋ ಯೂರಿಯಾವನ್ನು ಡ್ರೋನ್ ಮುಖಾಂತರ ಸಿಂಪರಣೆ ಮಾಡುವ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ರೈತರಿಗೆ ನ್ಯಾನೋ ಯೂರಿಯಾ ಬಳಕೆ ಕುರಿತು ಜಾಗೃತಿ ಮೂಡಿಸಿದರು.

ಹರಳು ಯೂರಿಯಾ ರಸಗೊಬ್ಬರ ಬದಲು ನ್ಯಾನೋ ಯೂರಿಯಾ ಬಳಕೆಯಿಂದ ಶೇ.5ರಿಂದ 10ರಷ್ಟು ಇಳುವರಿ ಹೆಚ್ಚಿಸಬಹುದಾಗಿದೆ. ಶೇ.10ರಷ್ಟು ಯೂರಿಯಾ ರಸಗೊಬ್ಬರದ ಪ್ರಮಾಣವನ್ನು ಕಡಿತಗೊಳಿಸಿ ಶೇ.10 ರಷ್ಟು ವೆಚ್ಚವನ್ನು ಕಡಿಮೆಮಾಡಿ ಆದಾಯ ಹೆಚ್ಚಿಸಬಹುದಾಗಿದೆ ಎಂದರು.

ನ್ಯಾನೋ ಯೂರಿಯಾವನ್ನು ಕೀಟನಾಶಕ ಹಾಗೂ ರೋಗನಾಶಕದ ಜೊತೆಗೆ ಮಿಶ್ರಣ ಮಾಡಿ ಬಳಸುವುದರಿಂದ ಸಿಂಪರಣೆ ತಗುಲುವ ವೆಚ್ಚವನ್ನು ಕಡಿಮೆ ಮಾಡಬಹುದು. ಸಸ್ಯ ಸಾರಜನಕ ಪೋಷಕಾಂಶ ಪೂರೈಸುವಲ್ಲಿ ಇದು ಸರಿಯಾದ ಪ್ರಮಾಣದಲ್ಲಿ ಮತ್ತು ಸರಿಯಾದ ಸಮಯದಲ್ಲಿ ಸಾರಜನಕವನ್ನು ಪೂರೈಸುತ್ತದೆ ಎಂದರು.

ರೈತರು ನ್ಯಾನೋ ಯೂರಿಯಾವನ್ನು ಪ್ರತಿ ಲೀಟರ್ ನೀರಿಗೆ 2 ರಿಂದ 4 ಮಿ.ಲೀ. ಮಿಶ್ರಣ ಮಾಡಿ ಬಿತ್ತಿದ 30 ದಿವಸಗಳ ನಂತರ ಮತ್ತು 45-50 ದಿವಸದ ನಂತರ ಅಥವಾ ಹೂ ಬಿಡುವ ಒಂದು ವಾರದ ಮುಂಚೆ ಸಿಂಪಡಣೆ ಮಾಡಬೇಕು ಎಂದು ಹೇಳಿದರು.

ಡ್ರೋನ್ ಮುಖಾಂತರ ಸಿಂಪರಣೆಯಿಂದ ಕೂಲಿಕಾರರ ಅಭಾವ, ಹಣ ಹಾಗೂ ಸಮಯವನ್ನು ಸಮರ್ಪಕವಾಗಿ ನಿಭಾಯಿಸಬಹುದು. ಎಂದು ರೈತರು ಅಭಿಪ್ರಾಯ ವ್ಯಕ್ತಪಡಿಸಿದರು.

ಕೋರಮಂಡಲ್ ಫರ್ಟಿಲೈಜರ್ಸ್ ಕಂಪನಿ ಅಧಿಕಾರಿಗಳು, ಆತ್ಮಯೋಜನೆಯ ಯೋಗೇಶಗೌಡ್ರು, ತಾಂತ್ರಿಕ ಅಧಿಕಾರಿ ಆನಂದರಾಜ್, ಕೆಂಚನಹಳ್ಳಿ ರೈತರು ಹಾಜರಿದ್ದರು.