ಇಳುವರಿ ಹೆಚ್ಚಲು ನ್ಯಾನೊ ಯೂರಿಯಾ ಬಳಸಿ: ನಟರಾಜ್‌

| Published : Jul 26 2025, 12:30 AM IST

ಸಾರಾಂಶ

ನ್ಯಾನೊ ಯೂರಿಯಾ ಬಳಸಿದಲ್ಲಿ ಶೇ.5 ರಿಂದ ಶೇ.10ರಷ್ಟು ಇಳುವರಿ ಹೆಚ್ಚಬಲ್ಲದು ಎಂದು ಕೃಷಿ ಇಲಾಖೆ ಅಧಿಕಾರಿ ಎಸ್.ನಟರಾಜ್ ಹೇಳಿದ್ದಾರೆ.

- ರಸಗೊಬ್ಬರ ಮಳಿಗೆಗಳಿಗೆ ಭೇಟಿ: ದಾಸ್ತಾನು ಪರಿಶೀಲನೆ

- - -

ಹರಿಹರ: ನ್ಯಾನೊ ಯೂರಿಯಾ ಬಳಸಿದಲ್ಲಿ ಶೇ.5 ರಿಂದ ಶೇ.10ರಷ್ಟು ಇಳುವರಿ ಹೆಚ್ಚಬಲ್ಲದು ಎಂದು ಕೃಷಿ ಇಲಾಖೆ ಅಧಿಕಾರಿ ಎಸ್.ನಟರಾಜ್ ಹೇಳಿದರು.

ಇಲಾಖೆ ಅಧಿಕಾರಿ ಎನ್.ಕೆ. ವಿಕಾಸ್ ಅವರೊಂದಿಗೆ ಶುಕ್ರವಾರ ತಾಲೂಕಿನ ವಿವಿಧ ಕೃಷಿ ಹಾಗೂ ರಸಗೊಬ್ಬರ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ, ರಸಗೊಬ್ಬರಗಳ ದಾಸ್ತಾನು ಪರಿಶೀಲಿಸಿದ ಅವರು, ಪಟ್ಟಣದಲ್ಲಿ ಯಾವುದೇ ರಸಗೊಬ್ಬರ ಹಾಗೂ ಯೂರಿಯಾ ಕೊರತೆ ಇಲ್ಲದಿರುವುದನ್ನು ಖಾತ್ರಿಪಡಿಸಿಕೊಂಡು ಅವರು ಮಾತನಾಡಿದರು.

ರೈತರು ಶೇ.10ರಷ್ಟು ವೆಚ್ಚವನ್ನು ಕಡಿಮೆ ಮಾಡಿ ಆದಾಯ ಹೆಚ್ಚಿಸಬಹುದು. ರೈತರಿಗೆ ನ್ಯಾನೊ ಯೂರಿಯಾ ಬಳಕೆ ಕುರಿತು ಪ್ರಾತ್ಯಕ್ಷಿಕೆ ಮೂಲಕ ನ್ಯಾನೊ ಯೂರಿಯಾ ಜಾಗೃತಿ ಮೂಡಿಸಲಾಗುತ್ತಿದೆ. ಹರಳು ಯೂರಿಯಾ ರಸಗೊಬ್ಬರ ಪರ್ಯಾಯವಾಗಿ ನ್ಯಾನೊ ಯೂರಿಯಾ ಬಳಕೆ ಹೆಚ್ಚಾಗಿ ಮಾಡಬೇಕು ಎಂದು ಸಲಹೆ ನೀಡಿದರು.

ನ್ಯಾನೊ ಯೂರಿಯಾವನ್ನು ಕೀಟನಾಶಕ ಮತ್ತು ರೋಗನಾಶಕ ಜೊತೆಗೆ ಮಿಶ್ರಣ ಮಾಡಿ ಬಳಸಿದಲ್ಲಿ ಸಿಂಪರಣೆಗೆ ತಗುಲುವ ವೆಚ್ಚ ಕಡಿಮೆ ಮಾಡಬಹುದು. ಸಸ್ಯ ಸಾರಜನಕ ಪೋಷಕಾಂಶ ಪೂರೈಸುವಲ್ಲಿ ನ್ಯಾನೊ ಯೂರಿಯಾ ಸರಿಯಾದ ಪ್ರಮಾಣ ಮತ್ತು ಸರಿಯಾದ ಸಮಯದಲ್ಲಿ ಸಾರಜನಕ ಪೂರೈಸುತ್ತದೆ ಎಂದರು.

ಕೃಷಿ ಅಧಿಕಾರಿ ಎನ್.ಕೆ. ವಿಕಾಸ್ ಮಾತನಾಡಿ, ರೈತರು ನ್ಯಾನೊ ಯೂರಿಯಾವನ್ನು ಪ್ರತಿ ಲೀಟರ್ ನೀರಿಗೆ 2ರಿಂದ 4 ಮಿ.ಲೀ. ಮಿಶ್ರಣ ಮಾಡಿ, ಬಿತ್ತಿದ 30 ದಿವಸಗಳ ನಂತರ ಮತ್ತು 45-50 ದಿವಸದ ನಂತರ ಸಿಂಪರಣೆ ಮಾಡಬೇಕು. ತಾಲೂಕಿನಾದ್ಯಂತ ಭತ್ತದ ಬೇಸಾಯದಲ್ಲಿ ಈಗಾಗಲೇ ರೈತರು ಸಸಿಮುಡಿ ತಯಾರಿಕೆ ಮಾಡಿಕೊಂಡಿದ್ದಾರೆ. ನಾಟಿ ಪ್ರಕಿಯೆ ಚುರುಕುಗೊಂಡಿದೆ. ಭತ್ತ ಕೃಷಿಯಲ್ಲಿ ಮೊದಲ ಹಂತದಲ್ಲಿ ಕಳೆ ಹೆಚ್ಚಾಗಿ ಬರುವುದರಿಂದ ಇದರ ನಿರ್ವಹಣೆ ಅಗತ್ಯ ಎಂದರು.

ನಾಟಿ ಪದ್ಧತಿಯಲ್ಲಿ ಕಳೆನಾಶಕ ಬೆನ್ಸಲ್ಛೂರಾನ ಮಿಥೈಲ್ ಮತ್ತು ಪ್ರೆಟಿಲಾಕ್ಲೋರ್ (6.6 ಜಿ) ಅನ್ನು ಎಕರೆಗೆ 4 ಕಿ.ಗ್ರಾಂ.ನಂತೆ 30 ಕಿ.ಗ್ರಾಂ. ಮರಳಿನೊಡನೆ ಮಿಶ್ರಣ ಮಾಡಿ, ನಾಟಿ ಮಾಡಿದ 3 ದಿನದೊಳಗೆ ಚೆಲ್ಲುಬೇಕು. ನಾಟಿ ಮಾಡಿದ 20 ದಿನಗಳ ನಂತರ 1 ಬಾರಿ ಕೋನೋವೀಡರ್ ಬಳಸಿ ಭತ್ತದಲ್ಲಿ ಉತ್ತಮ ಕಳೆ ನಿರ್ವಹಣೆ ಮಾಡಬಹುದು. ಎಂದು ತಿಳಿಸಿದರು.

- - -

-25ಎಚ್‍ಆರ್‍ಆರ್ 01, 01ಎ.ಜೆಪಿಜಿ: