ಸಾರಾಂಶ
ದೀಪಾವಳಿ ಹಬ್ಬವನ್ನು ಪರಿಸರಸ್ನೇಹಿಯಾಗಿ, ಮಾಲಿನ್ಯರಹಿತವಾಗಿ ಆಚರಿಸಬೇಕು. ಹಸಿರು ಪಟಾಕಿಯನ್ನು ಹೊರತುಪಡಿಸಿ, ಇತರೆ ಪಟಾಕಿಯ ಬಳಕೆ ಮತ್ತು ಮಾರಾಟ ನಿಷೇಧಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದರು.
ಚಿತ್ರದುರ್ಗ: ದೀಪಾವಳಿ ಹಬ್ಬವನ್ನು ಪರಿಸರಸ್ನೇಹಿಯಾಗಿ, ಮಾಲಿನ್ಯರಹಿತವಾಗಿ ಆಚರಿಸಬೇಕು. ಹಸಿರು ಪಟಾಕಿಯನ್ನು ಹೊರತುಪಡಿಸಿ, ಇತರೆ ಪಟಾಕಿಯ ಬಳಕೆ ಮತ್ತು ಮಾರಾಟ ನಿಷೇಧಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ತಯಾರಾದ ಹಸಿರು ಪಟಾಕಿಗಳನ್ನು ಬಯಲು ಪ್ರದೇಶದಲ್ಲಿ ಮಾರಾಟ ಮಾಡುವ ಬಗ್ಗೆ ಮತ್ತು ಅಗ್ನಿ ಅನಾಹುತಗಳನ್ನು ತಪ್ಪಿಸಲು ಅನುಸರಿಸಬೇಕಾದ ಸುರಕ್ಷತೆ ಪರಿಶೀಲಿಸಲು ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೀಪಾವಳಿ ಹಬ್ಬ ಆಚರಿಸುವ ಸಂಬಂಧ ಸರ್ವೋಚ್ಚ ನ್ಯಾಯಾಲಯವು ನೀಡಿರುವ ನಿರ್ದೇಶನ ಹಾಗೂ ರಾಜ್ಯ ಸರ್ಕಾರವು ಪಟಾಕಿ ಬಳಕೆ ಕುರಿತಂತೆ ನೀಡಿರುವ ಆದೇಶ, ಮಾರ್ಗಸೂಚಿಗಳನ್ನು ತಪ್ಪದೇ ಅನುಸರಿಸಬೇಕು. ಜಿಲ್ಲಾಡಳಿತ ವಿಧಿಸುವ ಷರತ್ತಿಗೆ ಒಳಪಟ್ಟು, ಯಾವುದೇ ರೀತಿಯಲ್ಲಿ ಕಾನೂನು ಉಲ್ಲಂಘನೆಯಾಗದಂತೆ ಪಟಾಕಿ ಮಾರಾಟ ಮಾಡಬೇಕು ಎಂದು ಹೇಳಿದರು.
ಹಸಿರು ಪಟಾಕಿ ಬಳಕೆ ಮತ್ತು ಮಾರಾಟ ಕುರಿತಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ರೀತಿಯಲ್ಲಿ ಜಾಗೃತಿ ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ದೀಪಾವಳಿ ಹಬ್ಬದ ಸಮಯದಲ್ಲಿ ಮಾರಾಟ ಮಾಡಲಾಗುವ, ತಯಾರಾದ ಹಸಿರು ಪಟಾಕಿಯನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕರ ಆಸ್ತಿ ಸುರಕ್ಷತೆಗಾಗಿ ಪ್ರತಿ ವರ್ಷದಂತೆ ಈ ವರ್ಷವೂ ಸಹ, ಜಿಲ್ಲೆಯಲ್ಲಿ ಈಗಾಗಲೇ ಅಧಿಕೃತ ಪರವಾನಗಿ ಹೊಂದಿರುವವರು ಮತ್ತು 2024ನೇ ಸಾಲಿಗೆ ಪರವಾನಗಿ ನವೀಕರಿಸಿಕೊಂಡಿರುವವರು ನಗರ, ಪಟ್ಟಣಗಳಲ್ಲಿ ಬಯಲು ಪ್ರದೇಶದಲ್ಲಿ ಅ.29 ರಿಂದ ನ.3 ರವರೆಗೆ ಬಯಲು ಪ್ರದೇಶಗಳಲ್ಲಿ ಹಂಗಾಮಿ ಶೆಡ್‌ಗಳನ್ನು ಹಾಕಿಕೊಂಡು ಪಟಾಕಿ ಮಾರಾಟ ಮಾಡಬಹುದಾಗಿದೆ.
ಚಿತ್ರದುರ್ಗ ಹಳೇ ಮಾಧ್ಯಮಿಕ ಶಾಲಾ ಮೈದಾನ, ಹಿರಿಯೂರು ನೆಹರು ಮೈದಾನ, ಚಳ್ಳಕೆರೆ ನಗರದ ಬಿಸಿ ನೀರು ಮುದ್ದಪ್ಪ ಪ್ರೌಢಶಾಲೆ ಆವರಣ, ಹೊಳಲ್ಕೆರೆ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಕನ್ನಡ ಮತ್ತು ಉರ್ದು ಪಾಠಶಾಲೆ ಆವರಣ, ಹೊಸದುರ್ಗ ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಆವರಣ, ವೀರಭದ್ರಸ್ವಾಮಿ ದೇವಸ್ಥಾನ ಹಾಗೂ ಪೊಲೀಸ್ ಕ್ವಾಟ್ರಸ್ ಎದುರು , ಮೊಳಕಾಲ್ಮೂರು ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದ ಬಯಲು ಪ್ರದೇಶದಲ್ಲಿ ಹಂಗಾಮಿ ಶೆಡ್‌ಗಳನ್ನು ಹಾಕಿಕೊಂಡು ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬಹುದಾಗಿದೆ ಎಂದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ಇದ್ದರು.