ಕನ್ನಡಪ್ರಭವಾರ್ತೆ ನಾಪೋಕ್ಲು
ರೈತರು ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಿ ಸಾವಯವ ಗೊಬ್ಬರಕ್ಕೆ ಹೆಚ್ಚಿನ ಆದ್ಯತೆ ನೀಡುವುದರ ಮೂಲಕ ಹೆಚ್ಚಿನ ಇಳುವರಿ ಪಡೆಯಬೇಕು ಎಂದು ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಪ್ರಭಾಕರ್ ಕೆ.ವಿ ಹೇಳಿದರು.ಇಲ್ಲಿನ ಮಹಿಳಾ ಸಮಾಜದ ಸಭಾಂಗಣದಲ್ಲಿ ಬುಧವಾರ ಕೃಷಿ ಇಲಾಖೆ ವತಿಯಿಂದ ಬೀಜೋಪಚಾರ ಆಂದೋಲನ ಮತ್ತು ಸುರಕ್ಷಿತ ಕೀಟನಾಶಕ ಬಳಕೆ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಸಾಯನಿಕ ಗೊಬ್ಬರಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ. ರೈತರು ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆ ಮಾಡಿ ಸಾವಯವ ಗೊಬ್ಬರಕ್ಕೆ ಹೆಚ್ಚಿನ ಒತ್ತು ನೀಡಬೇಕು ಎರೆಹುಳ ಗೊಬ್ಬರವನ್ನು ಗದ್ದೆಗೆ ನೀಡಬೇಕಾಗಿದೆ ಅವಲಂಬಿತ ಕೃಷಿಯನ್ನು ನಿಲ್ಲಿಸಿ ಸ್ವಾವಲಂಬಿ ಕೃಷಿಗೆ ಒತ್ತು ನೀಡಬೇಕಾಗಿದೆ ಎಂದರು.ಭಾರತೀಯ ಸಾಂಬಾರ ಕೃಷಿ ವಿಜ್ಞಾನ ಸಂಶೋಧನಾ ಕೇಂದ್ರ ಅಪ್ಪಂಗಲದ ತೋಟಗಾರಿಕೆ ಜೀವಶಾಸ್ತ್ರ ವಿಜ್ಞಾನಿ ಡಾ. ಹೊನ್ನಪ್ಪ ಹಾಗೂ ಕೃಷಿ ವಿಸ್ತರಣ ವಿಜ್ಞಾನಿಗಳಾದ ಡಾ. ಗಾಯತ್ರಿ ತೋಟಗಾರಿಕಾ ಬೆಳೆಗಳಿಗೆ ತಗಲುವ ಕೀಟ ಬಾಧೆ ಹಾಗೂ ಔಷಧೋಪಚಾರ, ಗೊಬ್ಬರದ ಬಳಕೆ ಬಗ್ಗೆ ಸಮಗ್ರ ಮಾಹಿತಿ ನೀಡಿದರು . ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಲ್ಲೇಟಿರ ಅರುಣ್ ಬೇಬ ವಹಿಸಿದ್ದರು. ಕೃಷಿಕ ಮುಕ್ಕಾಟಿರ ಹರೀಶ್ ಉಪಸ್ಥಿತರಿದ್ದರು. ಗಿಡಕ್ಕೆ ನೀರುಣಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.