ಸಾರಾಂಶ
ದೊಡ್ಡಬಳ್ಳಾಪುರ: ಕುಡಿಯುವ ನೀರಿಗಾಗಿ ಲೋಹದ ಬಾಟಲ್‌ಗಳನ್ನು ಹಾಗೂ ಲೋಹದ ಲೋಟಗಳನ್ನು ಬಳಸುವ ಮೂಲಕ ಒಮ್ಮೆ ಉಪಯೋಗಿಸಿ ಬಿಸಾಡುತ್ತಿರುವ ಪ್ಲಾಸ್ಟಿಕ್ ಬಾಟಲಿಗಳಿಂದ ಆಗುತ್ತಿರುವ ಅಪಾಯಕಾರಿ ಪರಿಸರ ಮಾಲಿನ್ಯ ಹಾಗೂ ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ಬರಬಹುದಾದ ಕ್ಯಾನ್ಸರ್ ಕಾಯಿಲೆಯನ್ನು ತಪ್ಪಿಸಬಹುದು ಎಂದು ನಾಗದಳ ಸಂಚಾಲಕ ಸಿ.ನಟರಾಜ ಅಭಿಪ್ರಾಯಪಟ್ಟರು.
ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಪಾಠಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿ ಎ.ವಿ. ರಘು ಪ್ರಾಯೋಜಿಸಿದ ಸ್ಟೀಲ್ ಬಾಟಲ್‌ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿದರು.ವೈದ್ಯೆ ಡಾ.ಇಂದಿರಾ ಮಾತನಾಡಿ, ಮಕ್ಕಳು ಅನಾರೋಗ್ಯಕಾರಿ ಜಂಕ್ ಫುಡ್ಸ್ ಗಳ ಸೇವನೆಯನ್ನು ತ್ಯಜಿಸಿ ಸಾಕಷ್ಟು ಪೌಷ್ಠಿಕ ಆಹಾರ ಸೇವಿಸಬೇಕು, ಸೊಪ್ಪು, ತರಕಾರಿ, ಹಣ್ಣು, ಕಾಳುಗಳು, ಸಿರಿಧಾನ್ಯ ಮುಂತಾದ ಆಹಾರ ಪದಾರ್ಥಗಳು ದಿನನಿತ್ಯದ ಆಹಾರದಲ್ಲಿರುವಂತೆ ನೋಡಿಕೊಂಡರೆ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ ಎಂದರು.
ಯುವ ಸಂಚಲನದ ಅಧ್ಯಕ್ಷ ಚಿದಾನಂದ ಮಾತನಾಡಿ, ನೆಲ ಜಲ ಸಂರಕ್ಷಣೆಯಲ್ಲಿ ಮಕ್ಕಳ ಹಾಗೂ ಯುವಜನರ ಪಾತ್ರವನ್ನು ವಿವರಿಸಿದರು.ನಾಗದಳದ ಸಂಚಾಲಕ ಟಿ.ಎ.ವೆಂಕಟೇಶ್, ಯುವಸಂಚಲನದ ನವೀನ್, ನಗರ ವೃತ್ತದ ಇಸಿಒ ಜಯಶ್ರೀ, ಅರಳುಮಲ್ಲಿಗೆ ಬಾಗಿಲು ಕ್ಲಸ್ಟರ್‌ನ ಸಿ.ಆರ್.ಪಿ. ರಾಜಶೇಖರ್, ನೇಯ್ಗೆಬೀದಿ ಪಾಠಶಾಲೆಯ ಮುಖ್ಯಶಿಕ್ಷಕಿ ಶೋಭ ಬಿ.ಸಿ, ಶಿಕ್ಷಕರಾದ ವಿ.ಎಸ್.ವಿಜಯಕುಮಾರ್, ಪಾರ್ವತಮ್ಮ ಹಾಗೂ ಶಿಕ್ಷಕವೃಂದ ಉಪಸ್ಥಿತರಿದ್ದರು.
23ಕೆಡಿಬಿಪಿ1- ದೊಡ್ಡಬಳ್ಳಾಪುರದ ನೇಯ್ಗೆಯವರ ಬೀದಿ ಸರ್ಕಾರಿ ಮಾದರಿ ಪ್ರಾಥಮಿಕ ಪಾಠಶಾಲೆಯ ಮಕ್ಕಳಿಗೆ ಸ್ಟೀಲ್ ಬಾಟಲ್‌ಗಳನ್ನು ವಿತರಿಸಲಾಯಿತು.