ಸಾರಾಂಶ
ಬ್ಯಾಡಗಿ:ನಿಗದಿಪಡಿಸಿದ್ದಕ್ಕಿಂತ ಹೆಚ್ಚು ನೀರು ಬಳಕೆ ಮಾಡುತ್ತಿದ್ದ ಕದರಮಂಡಲಗಿ, ಅಸುಂಡಿ ಹಾಗೂ ಹೂಲಿಹಳ್ಳಿ ಪಿಡಿಓಗಳಿಗೆ ಶಾಸಕ ಬಸವರಾಜ ಶಿವಣ್ಣನವರ ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಪಟ್ಟಣದ ಪುರಸಭೆ ಸಾಮಾನ್ಯ ಸಭೆಯಲ್ಲಿ ನಡೆಯಿತು.
ತುಂಗಭದ್ರಾ ನದಿಯಿಂದ ಬ್ಯಾಡಗಿ ಪಟ್ಟಣಕ್ಕೆ ಪ್ರತಿದಿನ 78 ಲಕ್ಷ ಲೀ. ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಆದರೆ ಶೇ. 50ರಷ್ಟು ಅಂದರೆ 35 ಲಕ್ಷಕ್ಕೂ ಹೆಚ್ಚು ಲೀ.ನೀರನ್ನು ಮಧ್ಯದಲ್ಲಿ ಬರುವ ಕದರಮಂಡಲಗಿ, ಅಸುಂಡಿ ಹಾಗೂ ಹೂಲಿಹಳ್ಳಿಯಲ್ಲಿ ಬಳಕೆಯಾಗುತ್ತಿದೆ, ಇದರಿಂದ ಬ್ಯಾಡಗಿ ಪಟ್ಟಣದ ಜನರಿಗೆ 3ರಿಂದ 4 ದಿನಕ್ಕೆ ಒಂದು ಬಾರಿಯೂ ಸಹ ಕುಡಿಯುವ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ನೀರು ಬಳಕೆ ಮಾಡಿದ್ದೇಕೆ..? ಎಂದು ಪ್ರಶ್ನಿಸಿದರು.ದೇವಸ್ಥಾನದ ನೆಪದಲ್ಲಿ 18 ಲಕ್ಷ ಲೀ.ನೀರು: ಕದರಮಂಡಲಗಿ ಕಾಂತೇಶ ದೇವಸ್ಥಾನದ ಬಳಕೆ ನೆಪದಲ್ಲಿ 18 ಲಕ್ಷ ಲೀ.ನೀರು ಬಳಕೆ ಮಾಡಲಾಗುತ್ತಿದೆ. ಗ್ರಾಮದೆಲ್ಲೆಡೆ ಚರಂಡಿಗಳಿಗೆ ನೀರು ಹರಿದು ಬಿಡುತ್ತಿದ್ದಾರೆ. ಹಾಗಿದ್ದರೇ ಬ್ಯಾಡಗಿ ಜನರು ನೀರಿಗಾಗಿ ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದ ಅವರು, ಕದರಮಂಡಲಗಿ ಗ್ರಾಮಕ್ಕೆ 6 ಲಕ್ಷ ಲೀ.ನಿಗದಿಪಡಿಸುವಂತೆ ಯುಜಿಡಿ ಅಧಿಕಾರಿಗಳಿಗೆ ಸೂಚಿಸಿದರು.
ಸಾಲ ತೀರಿಸಲು ಹಣವಿಲ್ಲ: ಈ ವೇಳೆ ಮಾತನಾಡಿದ ಯುಜಿಡಿ ಅಧಿಕಾರಿ ನವೀನ, ನೀರಿನ ಕೊರತೆಯಿಂದ ಇಂದಿಗೂ ಬ್ಯಾಡಗಿ ಜನರಿಗೆ ತುಂಗಭದ್ರಾ ನೀರು ಕೊಡಲು ಸಾಧ್ಯವಾಗುತ್ತಿಲ್ಲ, ನೀರಿಗಾಗಿ ನಿತ್ಯವೂ ಸಾರ್ವಜನಿಕರ ಜೊತೆ ವಾಗ್ವಾದಗಳು ನಡೆಯುತ್ತಿವೆ. ಅಷ್ಟಕ್ಕೂ ಎಷ್ಯನ್ ಡೆವಲಪಮೆಂಟ್ ಬ್ಯಾಂಕ್‌ನಿಂದ 116 ಕೋಟಿ ರು.ಸಾಲ ಪಡೆದು ಯೋಜನೆಯ ಅನುಷ್ಟಾನಗೊಳಿಸಿದ್ದು ಪಟ್ಟಣದ ಜನರಿಗೆ ನೀರು ಕೊಡಲು ಸಾಧ್ಯವಾಗುತ್ತಿಲ್ಲ. ಹಣ ಕೊಟ್ಟು ಪಡೆದಂತಹ ನೀರಿಗೆ ಮರಳಿ ದುಡ್ಡು ಎಲ್ಲಿಂದ ಕಟ್ಟುವುದು ಎಂದು ಪ್ರಶ್ನಿಸಿದರು?ಮೂರು ಗ್ರಾಮಗಳಿಗೆ ಒಟ್ಟು 10 ಲಕ್ಷ ಲೀ.ನೀರು: ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಶಿವಣ್ಣನವರ, ಜನಸಂಖ್ಯೆ ಆಧಾರದಲ್ಲಿ ಗ್ರಾಮದ ಪ್ರತಿ ವ್ಯಕ್ತಿಗೆ 45 ಲೀ ನೀರಿನಂತೆ ಹೂಲಿಹಳ್ಳಿ ಗ್ರಾಮಕ್ಕೆ 1.5 ಲಕ್ಷ ಲೀ. ಅಸುಂಡಿಗೆ 3 ಲಕ್ಷ ಲೀ ಹಾಗೂ ಕದರಮಂಡಲಗಿ ಗ್ರಾಮಕ್ಕೆ 6 ಲಕ್ಷ ಲೀ. ನೀರು ಬಳಕೆ ಮಾಡುವಂತೆ ನಿಗದಿಪಡಿಸಿದರು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಬಾಲಚಂದ್ರ ಪಾಟೀಲ, ಉಪಾಧ್ಯಕ್ಷ ಸುಭಾಸ್ ಮಾಳಗಿ ಸೇರಿದಂತೆ ಸರ್ವ ಸದಸ್ಯರು, ಮುಖ್ಯಾಧಿಕಾರಿಗಳು ಹಾಗೂ ಕದರಮಂಡಲಗಿ ಅಸುಂಡಿ ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಓಗಳು ಉಪಸ್ಥಿತರಿದ್ದರು.ಯಾರ್ರೀ ಅವನು ನಾಮಧಾರಿ: ಹೂಲಿಹಳ್ಳಿ ಬಳಿಯಿರುವ ನಾಮಧಾರಿ ಸೀಡ್ಸ್ ಎಂಬ ಖಾಸಗಿ ವ್ಯಕ್ತಿಗೆ ನೀರು ಮಾರಾಟ ಮಾಡಲಾಗುತ್ತಿರುವ ಬಗ್ಗೆ ವದಂತಿಗಳಿವೆ. ಯಾರ್ರೀ ಇವನು ನಾಮಧಾರಿ..? ಎಂದು ಖಾರವಾಗಿ ಪ್ರಶ್ನಿಸಿದ ಅವರು ಕೂಡಲೇ ಆತನಿಗೆ ಕೊಟ್ಟಿರುವ ನೀರು ಸ್ಥಗಿತಗೊಳಿಸಿ..? ವರದಿ ನೀಡುವಂತೆ ತಾಕೀತು ಮಾಡಿದರಲ್ಲದೇ ಕುಡಿಯುವ ನೀರು ಪೂರೈಕೆಗೆ ಅಡ್ಡಿಪಡಿಸಿದವರ ವಿರುದ್ಧ ಕಾನೂನು ಕ್ರಮಕ್ಕೆ ಸೂಚಿಸಿದರು.