ಮಾರಾಟದ ಸರಕಿನಂತೆ ಸ್ತ್ರೀ ಬಳಕೆ: ಮಮತಾ ಅರಸೀಕೆರೆ

| Published : Feb 13 2024, 12:48 AM IST

ಸಾರಾಂಶ

ಪ್ರಸ್ತುತ ದಿನಗಳಲ್ಲಿ ಮಾಧ್ಯಮಗಳು ಸ್ತ್ರೀಯನ್ನು ಮಾರಾಟದ ಸರಕಿನಂತೆ ಬಳಸಿಕೊಳ್ಳುತ್ತಿವೆ.

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ಪ್ರಸ್ತುತ ದಿನಗಳಲ್ಲಿ ಮಾಧ್ಯಮಗಳು ಸ್ತ್ರೀಯನ್ನು ಮಾರಾಟದ ಸರಕಿನಂತೆ ಬಳಸಿಕೊಳ್ಳುತ್ತಿವೆ ಎಂದು ಸಾಹಿತಿ ಮಮತಾ ಅರಸೀಕೆರೆ ಹೇಳಿದರು.

ನಗರದ ಎಪಿಎಂಸಿ ಸಮುದಾಯ ಭವನದಲ್ಲಿ ಸೋಮವಾರ ಹಾವೇರಿ ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಯೋಜಿಸಲಾಗಿದ್ದ ನಾರಿಶಕ್ತಿ ಧೀಶಕ್ತಿ ಗೋಷ್ಠಿಯಲ್ಲಿ ದೃಶ್ಯ ಮಾಧ್ಯಮಗಳಲ್ಲಿ ಸ್ತ್ರೀ ಅಪಮೌಲ್ಯೀಕರಣ ವಿಷಯ ಕುರಿತು ಅವರು ಮಾತನಾಡಿದರು. ಬಂಡವಾಳಶಾಹಿಗಳು ತಮ್ಮ ಮಾರುಕಟ್ಟೆ ವಿಸ್ತರಿಸಿಕೊಳ್ಳಲು ಸಿನಿಮಾ, ರಿಯಾಲಿಟಿ ಶೋ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಮಹಿಳೆಯರನ್ನು ಬಳಸಿಕೊಳ್ಳುತ್ತಿರುವುದುನ್ನು ನಾವು ಗಮನಿಸಬಹುದು. ಈ ಬಗ್ಗೆ ಮಹಿಳೆಯರು ತಮ್ಮ ವಿವೇಕ ಮತ್ತು ವಿವೇಚನೆ ಬಳಸಿಕೊಳ್ಳುವುದು ಇಂದಿನ ಅವಶ್ಯ ಎಂದರು.

ಪ್ರಾಚೀನ ಕನ್ನಡ ಕಾವ್ಯದ ಸ್ತ್ರೀ ಪಾತ್ರಗಳು ಆಧುನಿಕ ಬದುಕಿನೊಂದಿಗೆ ಮುಖಾಮುಖಿ ಕುರಿತು ಮಾತನಾಡಿದ ಡಾ. ಪುಷ್ಪಾ ಶಲವಡಿಮಠ, ರಾಮಾಯಣ ಮತ್ತು ಮಹಾಭಾರತ ಕಾಲದಿಂದಲೂ ಮಹಿಳೆ ಸವಾಲುಗಳನ್ನು ಮೀರಿ ತನ್ನ ಅಸ್ಮಿತೆ ಉಳಿಸಿಕೊಂಡು ಬಂದಿದ್ದಾಳೆ ಎಂದರು.

ಸ್ಥಳೀಯ ಪಿಕೆಕೆ ಸಂಸ್ಥೆಯ ಅಧ್ಯಕ್ಷೆ ಪೂರ್ಣಿಮಾ ಕೋಳಿವಾಡ ಮಾತನಾಡಿ, ಇಂದಿನ ದಿನಗಳಲ್ಲಿ ಸ್ತ್ರೀ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಅನವಶ್ಯಕ ಕಾರಣಗಳ ನೆಪದಿಂದ ಶಿಕ್ಷಣ ಪಡೆಯಲು ನಿರ್ಲಕ್ಷ್ಯ ಮಾಡಬಾರದು. ಶಿಕ್ಷಣದಿಂದ ಮಾತ್ರ ಸ್ತ್ರೀ ಸಂಪೂರ್ಣ ವಿಕಾಸ ಹೊಂದಲು ಸಾಧ್ಯ ಎಂದರು.

ಡಾ. ಅಭಿನಂದನ್ ಸಾವುಕಾರ ಮತ್ತು ಸಾಯಿಲತಾ ಮಡಿವಾಳರ ಮಾತನಾಡಿದರು. ಜಿ. ಸುಮಾ ಅಧ್ಯಕ್ಷತೆ ವಹಿಸಿದ್ದರು. ಅಕ್ಕಮಹಾದೇವಿ ಹುಗ್ಗಿ, ಅಮೃತಮ್ಮ ಶೀಲವಂತರ, ಭಾರತಿ ಯಾವಗಲ್ಲ, ಲತಾ ನಿಟ್ಟೂರ, ದಾಕ್ಷಾಯಣಮ್ಮ ಗಾಣಗೇರ, ರತ್ನಮ್ಮ ಜೋಗಿಹಳ್ಳಿ ಉಪಸ್ಥಿತರಿದ್ದರು.

ಸುಧಾ ಹೊಟ್ಟಿಗೌಡ್ರ ಸ್ವಾಗತಿಸಿದರು. ದೀಪಾ ಅಡ್ಮನಿ ಮತ್ತು ಸವಿತಾ ಹಾದಿಮನಿ ನಿರೂಪಿಸಿದರು. ಶೋಭಾ ಎನ್.ಬಿ. ವಂದಿಸಿದರು.

ಕನ್ನಡ ಉಳಿಸಿ ಎನ್ನುವ ಕೂಗು ಕೇಳಿ ಬರುತ್ತಿರುವುದು ವಿಪರ್ಯಾಸ:ಓದಿದ್ದನ್ನು ಬರೆಯುವ ಮತ್ತು ಬರೆದದ್ದನ್ನು ಓದುವ ಶಾಸ್ತ್ರೀಯ ಹಿನ್ನೆಲೆಯಿರುವ ಕನ್ನಡ ಭಾಷೆಗೆ ಸ್ವಂತ ನೆಲದಲ್ಲೇ ಉಳಿಸಿ ಬೆಳೆಸಿ ಎನ್ನುವ ಕೂಗು ಕೇಳಿ ಬರುತ್ತಿರುವುದು ವಿಪರ್ಯಾಸ ಎಂದು ಅನುಷಾ ಹಿರೇಮಠ ಖೇದ ವ್ಯಕ್ತಪಡಿಸಿದರು.

ನಗರದ ಎಪಿಎಂಸಿ ಸಮುದಾಯ ಭವನದಲ್ಲಿ ಸೋಮವಾರ ಹಾವೇರಿ ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಚಿಣ್ಣರ ಚಿಲಿಪಿಲಿ ಗೋಷ್ಠಿ 5ರ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಂಟು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ನಾಡಿನ ಭಾಷೆ ಕನ್ನಡ. ಈ ಭಾಷೆಯ ಉಚ್ಚಾರ ಮತ್ತು ಲಿಪಿ ಒಂದೇ ಇದೆ. ವೈವಿಧ್ಯಮಯ ಸೊಗಡಿನ ಕನ್ನಡ ನೆಲ, ಜಲ ರಕ್ಷಣೆಗೆ ನಾವೇ ಶ್ರಮಿಸಬೇಕಿದೆ ಎಂದರು.ಕಳೆದ ನವೆಂಬರ್ ತಿಂಗಳು ಮುಖ್ಯಮಂತ್ರಿ ಅವರ ಮುಖಾಮುಖಿ ಚರ್ಚೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಕನ್ನಡ ಮಕ್ಕಳ ಕೂಟ ರಚಿಸಬೇಕೆಂದು ಒತ್ತಾಯಿಸಿದ್ದೆ. ಈಗ ಹಾವೇರಿ ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅದಕ್ಕೆ ಅವಕಾಶ ಕಲ್ಪಿಸಿರುವುದು ಹೆಮ್ಮೆ ಮೂಡಿಸಿದೆ ಎಂದರು.

ಡಿ. ಸೌಜನ್ಯ, ಮಮತಾ ಸತ್ಯಪ್ಪನವರ, ಚಂದ್ರಿಕಾ ಕಂಬಳಿ, ಸಾಕಮ್ಮ ಸಿ.ಕೆ., ಪ್ರಿಯಾಂಕ ಕುಂದಗೋಳ, ಲಕ್ಷ್ಮೀ ಗಾಜಿ, ಸುಮಾ ರಾಮಣ್ಣನವರ, ಅನಿತಾ ಕೋಣಿಯವರ, ವಿದ್ಯಾ ಎಳವಳ್ಳಿ, ಚೈತ್ರಾ ಪೂಜಾರ, ಯಶೋಧಾ ಬಡಪ್ಪಳವರ, ನೀತಾ ಕಿಚಡಿ, ಸಿಂಧೂ ಶ್ಯಾನಭೋಗರ, ಭುವನೇಶ್ವರಿ ಬಾರಕೇರ, ಅಕ್ಷತಾ ದೊಡ್ಡಮನಿ, ಸೃಷ್ಟಿ ಕಾಯಕದ, ರಕ್ಷಾ ಜಿ.ಎಲ್., ತೇಜಸ್ವಿನಿ ಹಳೇಗೌಡ್ರ, ಅಕ್ಷತಾ ದೊಡ್ಡಕಾರಗಿ, ಕವನಾ ಕೋಣನತಂಬಿಗಿ, ಮಧುಮತಿ ಸಂಶಿ ಕವನ ವಾಚಿಸಿದರು.ಸಹನಾ ಮತ್ತು ಶ್ರೇಯಾ ನಿರೂಪಿಸಿದರು. ಭುವನಾ ಬಿಲ್ಲಾಳ ಮತ್ತು ಭಕ್ತಿ ಮರಿಯಮ್ಮನವರ ವಂದಿಸಿದರು.