ಸಾರಾಂಶ
ಕನ್ನಡಪ್ರಭ ವಾರ್ತೆ, ತರೀಕೆರೆ
ಆರೋಗ್ಯಕ್ಕೆ ಹಾನಿಯಾಗದ, ಪರಿಸರ ಮತ್ತು ಪ್ರಾಣಿ ಪಕ್ಷಿ ಸಂಕುಲಕ್ಕೆ ಹಾನಿಯಾಗದಂತೆ, ಸರ್ಕಾರ ಅನುಮತಿಸಿರುವ ಪರಿಸರ ಸ್ನೇಹಿ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು ಎಂದು ಪುರಸಭಾ ಅಧ್ಯಕ್ಷ ಪರಮೇಶ್ ಹೇಳಿದರು.ಪುರಸಭಾ ಕಾರ್ಯಾಲಯದಿಂದ ಸ್ವಚ್ಛ ದೀಪಾವಳಿ, ಶುಭ ದೀಪಾವಳಿ ಅಭಿಯಾನ ಮೆರವಣಿಗೆ ನಂತರ ಪಟ್ಟಣದ ಸರ್ಜಾ ಹನುಮಪ್ಪನಾಯಕ ಖಾಸಗಿ ಬಸ್ ನಿಲ್ದಾಣದ ಬಳಿ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದರು. ಸರ್ಕಾರದ ಮಾರ್ಗದರ್ಶನ ಪಾಲಿಸೋಣ ಅಹಿತಕರ ಘಟನೆಗಳು ಆಗದಂತೆ ಮುಂಜಾಗ್ರತೆ ವಹಿಸೋಣ ಎಂದು ಹೇಳಿದರು.
ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಕುಮಾರಪ್ಪ ಮಾತನಾಡಿ ಸ್ವಚ್ಛ ದೀಪಾವಳಿ ಆಚರಿಸಲು ಸರ್ಕಾರ ಕರೆ ನೀಡಿದೆ, ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ದೀಪ ಬೆಳಗಿಸಿ ದೀಪಾವಳಿ ಆಚರಿಸೋಣ ಎಂದು ಕರೆಕೊಟ್ಟರು.ಪುರಸಭಾ ಸದಸ್ಯ ದಾದಾಪೀರ್ ಮಾತನಾಡಿ. ಪಟಾಕಿಯಿಂದ ಅನುಕೂಲಕ್ಕಿಂತ ಅನಾನೂಕೂಲ ಹೆಚ್ಚಾಗಿದೆ. ಪಟಾಕಿ ತಯಾರಿಕೆಗೆ ಬಣ್ಣ ಬಣ್ಣದ ರಾಸಾಯಿನಿಕಗಳನ್ನು ಬಳಸಲಾಗುತ್ತಿದೆ. ಇದರಿಂದ ಮನುಷ್ಯನ ಆರೋಗ್ಯಕ್ಕೆ ಹಾನಿಕರ. ಆದ್ದರಿಂದ ಸರ್ಕಾರಗಳು ಪಟಾಕಿಗಳನ್ನು ನಿಷೇಧ ಮಾಡಿ ಹಬ್ಬಕ್ಕೆ ಯಾವುದೇ ಚ್ಯುತಿ ಬಾರದ ರೀತಿ ಹಬ್ಬ ಆಚರಿಸುವಂತೆ ಅರಿವು ಮೂಡಿಸುವ ಕಾರ್ಯಕ್ರಮ ಮಾಡಲಾ ಗುತ್ತಿದೆ. ಪಟಾಕಿ ತಯಾರಿಕಾ ಕಾರ್ಖಾನೆಗಳಲ್ಲಿ ಬಾಲ ಕಾರ್ಮಿಕರೇ ಹೆಚ್ಚು ದುಡಿಯುತ್ತಿದ್ದಾರೆ, ಆದ್ದರಿಂದ ಪಟಾಕಿ ತಯಾರಿಕೆಯನ್ನೇ ನಿಷೇಧಿಸಬೇಕು ಎಂದು ಹೇಳಿದರು.
ಪುರಸಭೆ ಸದಸ್ಯ ಟಿ.ಎಂ. ಬೋಜರಾಜ್ ಮಾತನಾಡಿ ದೀಪಾವಳಿ ಪ್ರತಿಯೊಬ್ಬರ ಮನಸ್ಸಿನೊಂದಿಗೆ ಮನಸ್ಸು ಕಟ್ಟುವ ಕೆಲಸ ಮಾಡಬೇಕು. ರೈತರು ಬೆಳೆದ ಬೆಳೆಗಳು ಸುಗ್ಗಿಯ ಸಂತೋಷ ಸಂಭ್ರಮದಿಂದ ಹಬ್ಬ ಆಚರಿಸಬೇಕು, ಜ್ಞಾನದ ಹಣತೆ ಹಚ್ಚಿ ಹಬ್ಬ ಆಚರಿಸೋಣ, ದೀಪದಿಂದ ದೀಪಗಳನ್ನು ಬೆಳಗಿಸೋಣ ಮನಸ್ಸಿನಿಂದ ಮನಸ್ಸುಗಳನ್ನು ಬೆಳಗಿಸೋಣ ಎಂದು ಹೇಳಿದರು.ಪುರಸಭೆ ಸದಸ್ಯ ಟಿ.ಜಿ.ಅಶೋಕ್ ಕುಮಾರ್ ಮಾತನಾಡಿ ಎಲ್ಲರೂ ಒಟ್ಟಾಗಿ ಒಗ್ಗಟ್ಟಿನಿಂದ ದೀಪಾವಳಿ ಯನ್ನು ಸಂತೋಷ ಸಂಭ್ರಮದಿಂದ ಆಚರಿಸೋಣ ಮುಂದಿನ ದಿನಗಳಲ್ಲಿ ಪಟಾಕಿ ಮಾರಾಟಕ್ಕೆ ಅನುಮತಿ ಕೊಡಲೇಬಾರದು ಎಂದು ನಿರ್ಣಯ ತೆಗೆದುಕೊಳ್ಳೋಣ ಎಂದು ಹೇಳಿದರು.
ಪುರಸಭಾ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಮಾತನಾಡಿ ಹಬ್ಬಗಳು ನಮ್ಮ ಸಂಸ್ಕೃತಿಯ ಪ್ರತೀಕ. ನಮ್ಮ ಪ್ರಕೃತಿ ಮತ್ತು ಸಂಸ್ಕೃತಿಗೆ ಧಕ್ಕೆಯಾಗದಂತೆ ಹಬ್ಬ ಆಚರಿಸುವುದು ನಮ್ಮ ಕರ್ತವ್ಯ. ನಮ್ಮ ಜವಾಬ್ದಾರಿ ಅರಿತು ನಿಷೇಧಿತ ಪಟಾಕಿ ಮತ್ತು ಪ್ಲಾಸ್ಕಿಕನ್ನು ಬಳಸದೆ ಪರಿಸರ ಸ್ನೇಹಿ ದೀಪಾವಳಿ ಆಚರಿಸೋಣ ಎಂದು ಹೇಳಿದರು.ಪುರಸಭೆ ಕಚೇರಿ ವ್ಯವಸ್ಥಾಪಕ ವಿಜಯಕುಮಾರ್, ಕಂದಾಯಾಧಿಕಾರಿ ಮಂಜುನಾಥ, ಜೆ.ಇ. ಬಿಂಧು, ಪರಿಸರ ಅಭಿಯಂತರರಾದ ತಾಹಿರಾ ತಸ್ಮಿನ್, ಹಿರಿಯ ಆರೋಗ್ಯಾಧಿಕಾರಿ ಮಹೇಶ್, ಆರ್ ಐ ನಿರ್ಮಲ ಅಂಗಡಿ, ಪ್ರಸನ್ನ ಕುಮಾರ್, ಪ್ರಕಾಶ, ಮಂಜುನಾಥ, ಪೌರ ಕಾರ್ಮಿಕರು ಮತ್ತು ಕಚೇರಿ ಸಿಬ್ಬಂದಿ, ಶ್ರೀಶಕ್ತಿ ಸಂಘಗಳ ಸದಸ್ಯರು ಹಾಗೂ ನಾಗರಿಕರು ಅಭಿಯಾನದಲ್ಲಿ ಭಾಗವಹಿಸಿದ್ದರು. 11ಕೆಟಿಆರ್.ಕೆ.1ಃ ತರೀಕೆರೆಯಲ್ಲಿ ಪುರಸಭೆ ಕಾರ್ಯಾಲಯದಿಂದ ಸ್ವಚ್ಛ ದೀಪಾವಳಿ ಶುಭ ದೀಪಾವಳಿ ಅಭಿಯಾನ ಏರ್ಪಡಿಸಲಾಗಿತ್ತು. ಪುರಸಭೆ ಅಧ್ಯಕ್ಷ ಪರಮೇಶ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕುಮಾರಪ್ಪ, ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಮತ್ತಿತರರು ಇದ್ದರು.