ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಇಂದಿನ 5ಜಿ ಯುಗದಲ್ಲಿ ಆಧುನಿಕ ತಂತ್ರಜ್ಞಾನವು ಜ್ಞಾನಾರ್ಜನೆಯ ಪ್ರಬಲ ಸಾಧನವಾಗಿದ್ದು, ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ಸೃಜನಾತ್ಮಕ ಕಾರ್ಯಗಳಿಗೆ ಬಳಸಿಕೊಳ್ಳಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಎಸ್. ಸಂತೋಷ್ ಹೇಳಿದರು.ಕೋಣಂದೂರಿನ ರಾಷ್ಟ್ರೀಯ ಪದವಿಪೂರ್ವ ಕಾಲೇಜಿನ ವತಿಯಿಂದ ವಿನಾಯಕ ಮಾಂಗಲ್ಯ ಮಂದಿರದ ಸಭಾಂಗಣದಲ್ಲಿ ಏರ್ಪಡಿಸಿದ್ದ 2026–27ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹದಿಹರೆಯವು ವ್ಯಕ್ತಿತ್ವ ರೂಪುಗೊಳ್ಳುವ ಮಹತ್ವದ ಘಟ್ಟವಾಗಿದ್ದು, ಈ ಸಂದರ್ಭದಲ್ಲಿ ಪೋಷಕರು ಹಾಗೂ ಗುರುಗಳ ಮಾರ್ಗದರ್ಶನವನ್ನು ಗೌರವದಿಂದ ಅನುಸರಿಸಬೇಕು. ವಿದ್ಯಾರ್ಥಿಗಳು ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಪರಿಣಾಮಕಾರಿಯಾಗಿ ಸಂವಹನ ನಡೆಸುವ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು. ಗ್ರಂಥಾಲಯದೊಂದಿಗೆ ನಿಕಟ ನಂಟು ಬೆಳೆಸಿಕೊಂಡು, ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಂಡರೆ ಜ್ಞಾನ, ವ್ಯಕ್ತಿತ್ವ ಮತ್ತು ಚಿಂತನಾ ಸಾಮರ್ಥ್ಯ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.ಪ್ರತಿದಿನ ಬೆಳಿಗ್ಗೆ ಸಮಯದ ಯೋಜನೆ ರೂಪಿಸಿಕೊಂಡು, ರಾತ್ರಿ ಮಲಗುವ ಮುನ್ನ ದಿನವಿಡೀ ಮಾಡಿದ ಕಾರ್ಯಗಳ ಆತ್ಮಾವಲೋಕನ ನಡೆಸುವ ಅಭ್ಯಾಸ ಮಾಡಿ. ಇದು ಯಶಸ್ವಿ ಬದುಕಿಗೊಂದು ಶಿಸ್ತು. ಈ ಬಾರಿ ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳ ಸಾಧನೆ, ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ಪಿಯುಸಿ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಲಿ. ಮುಂದಿನ ವರ್ಷ ಇನ್ನಷ್ಟು ವಿದ್ಯಾರ್ಥಿಗಳು ಇದೇ ವೇದಿಕೆಯಲ್ಲಿ ಸನ್ಮಾನಕ್ಕೆ ಪಾತ್ರರಾಗಲಿ ಎಂದು ಹಾರೈಸಿದರು.ಕಾರ್ಯಕ್ರಮ ಉದ್ಘಾಟಿಸಿದ ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್. ನಾರಾಯಣ ರಾವ್ ಮಾತನಾಡಿ, ಬದುಕಿನ ಸಾರ್ಥಕತೆ ಇರುವುದು ಸಮಯದ ಸರಿಯಾದ ಬಳಕೆಯಲ್ಲಿ. ಸಮಯವು ಬದುಕಿನ ಅತ್ಯಮೂಲ್ಯ ಸಂಪತ್ತಾಗಿದ್ದು, ಅದನ್ನು ಸದುಪಯೋಗ ಪಡಿಸಿಕೊಳ್ಳುವವರೇ ಜೀವನದಲ್ಲಿ ಯಶಸ್ಸಿನ ಶಿಖರವನ್ನು ತಲುಪಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ಕಾಲೇಜಿನ ಪ್ರಾಂಶುಪಾಲರಾದ ಮಹಾಂತೇಶ ಗೌಡ ಅಧ್ಯಕ್ಷತೆ ವಹಿಸಿದ್ದರು. ಎನ್ಇಎಸ್ ಆಜೀವ ಸದಸ್ಯರಾದ ಸದಾನಂದ.ಪಿ, ರಾಷ್ಟ್ರೀಯ ಪ್ರೌಢಶಾಲೆಯ ಉಪಪ್ರಾಂಶುಪಾಲರಾದ ಕೆ.ಬಿ. ಪ್ರಕಾಶ್, ಶರಾವತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಆರಡಿ ಮಲ್ಲಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ವಿವಿಧ ಕ್ಷೇತ್ರದ ಸಾಧನೆಗೈದ ವಿದ್ಯಾರ್ಥಿಗಳನ್ನು ಅತಿಥಿಗಳು ಅಭಿನಂದಿಸಿದರು.
---------------ಪೋಟೋ: 19ಎಸ್‌ಎಂಜಿಕೆಪಿ01
ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನ ರಾಷ್ಟ್ರೀಯ ಪದವಿಪೂರ್ವ ಕಾಲೇಜಿನ ವತಿಯಿಂದ ವಿನಾಯಕ ಮಾಂಗಲ್ಯ ಮಂದಿರದ ಸಭಾಂಗಣದಲ್ಲಿ ಏರ್ಪಡಿಸಿದ್ದ 2026–27ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.