ಸಾರಾಂಶ
ವಿಶ್ವ ಮಹಿಳಾ ದಿನಾಚರಣೆಯ ಹಿನ್ನೆಲೆಯಲ್ಲಿ ಎರಡು ವಾರಗಳ ಕಾಲ ಹಮ್ಮಿಕೊಂಡ ವಿವಿಧ ಸ್ಫರ್ಧೆಗಳ ಬಹುಮಾನವನ್ನು ನೀಡಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ ಅಡುಗೆ ಮನೆಯಿಂದ ಯುದ್ಧಭೂಮಿವರೆಗೆ ಸಾಮರ್ಥ್ಯ ಪ್ರದರ್ಶಿಸಲು ಮಹಿಳೆ ಶಕ್ತಳು. ಆಕೆ ತನ್ನ ಸಾಮರ್ಥ್ಯವನ್ನು ಸಮರ್ಥ ಹಾಗೂ ಸಮಾಜಮುಖಿಯಾಗಿ ಬಳಸಿಕೊಳ್ಳಬೇಕು ಎಂದು ಬೆಂಗಳೂರು ಅದಮ್ಯ ಚೇತನ ಫೌಂಡೇಷನ್ ಸ್ಥಾಪಕಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಹೇಳಿದರು. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ -೨೦೨೪ ಪ್ರಯುಕ್ತ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಆಳ್ವಾಸ್ ಕಾಲೇಜಿನ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಸಭಾಂಗಣ ದಲ್ಲಿ ಗುರುವಾರ ಹಮ್ಮಿಕೊಂಡ ‘ಆಳ್ವಾಸ್ ಮಹಿಳಾ ವೇದಿಕೆಯ ಉದ್ಘಾಟನೆ ,ಲಾಂಛನ ಅನಾವರಣ ಮತ್ತು ವೈವಿಧ್ಯಮಯ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಬ್ಬ ವ್ಯಕ್ತಿ ದಿನಕ್ಕೆ ಸುಮಾರು ೭೦೦ ಕೆ.ಜಿ. ಆಮ್ಲಜನಕ ಬಳಸಿದರೆ, ಒಂದು ಮರ ೧೦೦ ಕೆಜಿ ಉತ್ಪಾದಿಸುತ್ತದೆ. ಹೀಗಾಗಿ ಒಬ್ಬ ವ್ಯಕ್ತಿ ಬದುಕಲು ಏಳು ಮರಗಳ ಅವಶ್ಯಕತೆ ಇದೆ. ಆದರೆ, ಬೆಂಗಳೂರಿನಲ್ಲಿ ೧೪ ಲಕ್ಷ ಮರಗಳಿದ್ದು, ಕೋಟಿಗೂ ಅಧಿಕ ಜನಸಂಖ್ಯೆ ಇದೆ. ಇದರ ತೀವ್ರತೆ ಅರಿತು ಅದಮ್ಯ ಫೌಂಡೇಶನ್ ಸಸಿ ನೆಡುವ ಕಾರ್ಯ ಕ್ರಮ ಹಾಕಿಕೊಂಡಿದೆ ಎಂದರು.ಲಾಂಛನ ಅನಾವರಣ ಮಾಡಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಪೋಷಕರು ಲಿಂಗ ತಾರತಮ್ಯ ಮಾಡಬಾರದು. ಲಿಂಗ ತಾರತಮ್ಯದ ಮನಸ್ಥಿತಿಯನ್ನು ನಿವಾರಿಸಿದಾಗ ದೇಶದ ಅಭಿವೃದ್ಧಿ ಸಾಧ್ಯ ಎಂದರು.
ವೈಟ್ ಕಾಲರ್ (ಬೌದ್ಧಿಕ) ಉದ್ಯೋಗ ಸಿಗುವುದು ಕಷ್ಟವಾಗಿದ್ದು, ಬ್ಲೂ ಕಾಲರ್ (ದೈಹಿಕ) ಉದ್ಯೋಗ ಇಷ್ಟವಿಲ್ಲ. ಹೀಗಾಗಿ ಯೆಲ್ಲೋ ಕಾಲರ್ (ಉದ್ಯಮಶೀಲತೆ) ಮನಸ್ಥಿತಿ ಬೆಳೆಸಿಕೊಳ್ಳಬೇಕಾಗಿದೆ ಮುಂದಿನ ಜನ್ಮವಿದ್ದರೆ ನಾನು ಹೆಣ್ಣಾಗಿ ಹುಟ್ಟಲು ಬಯಸುತ್ತೇನೆ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತೆ, ನಿವೃತ್ತ ಪ್ರಾಧ್ಯಾಪಕಿ ಪ್ರೊ. ಹಿಲ್ಡಾ ರಾಯಪ್ಪನ್, ಮಹಿಳೆಯರು ಸಾಮಾಜಿಕವಾಗಿ ಸಂಪೂರ್ಣವಾಗಿ ತೊಡಗಿಸಿಕೊಂಡಾಗ ಪರಿಪೂರ್ಣ ಸಮಾಜ ನಿರ್ಮಾಣ ಸಾಧ್ಯ ಎಂದರು. ಮಂಗಳೂರಿನ ಸಿಸಿಬಿ ಪೊಲೀಸ್ ಸಹಾಯಕ ಆಯುಕ್ತೆ ಗೀತಾ ಡಿ. ಕುಲಕರ್ಣಿ ಮಾತನಾಡಿದರು. ಆಳ್ವಾಸ್ ಮಹಿಳಾ ವೇದಿಕೆ ಸಕ್ಷಮ ಹಾಗೂ ಲೋಗೋ ಅನಾವರಣ ನಡೆಯಿತು. ಬೆಂಗಳೂರಿನ ಟೆಕ್ ಅವಂತ್ ಗಾರ್ಡ್ ಬೋಧನಾ ವಿಜ್ಞಾನ ಮತ್ತು ಶೈಕ್ಷಣಿಕ ಆವಿಷ್ಕಾರದ ಮಖ್ಯಸ್ಥೆ ರೂಪಾ ಅರುಣ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಮಂಡಳಿಯ ಡಾ. ಗ್ರೀಷ್ಮಾ ವಿವೇಕ್ ಆಳ್ವ ಇದ್ದರು. ಎನ್‌ಸೈಕ್ಲೋಪಿಡಿಯಾ ಆಫ್ ಫಾರೆಸ್ಟ್ ಖ್ಯಾತಿಯ ತುಳಸಿ ಗೌಡ, ಸಾಮಾಜಿಕ ಕಾರ್ಯಕರ್ತೆ ಹಿಲ್ಡಾ ರಾಯಪ್ಪನ್, ಪ್ರಾಣಿ ಸಂರಕ್ಷಕಿ ರಜನಿ ಶೆಟ್ಟಿ, ಆಳ್ವಾಸ್ ಕಾಲೇಜಿನ ಹಿರಿಯ ವಿದ್ಯಾರ್ಥಿನಿಯರಾದ ಸಿವಿಲ್ ನ್ಯಾಯಾಧೀಶೆ ಗೀತಾ ಡಿ, ಇಸ್ರೋ ವಿಜ್ಞಾನಿ ಡಾ.ನಂದಿನಿ, ಚಲನಚಿತ್ರ ನಟಿ- ಗಾಯಕಿ ಆಶಾ ಭಟ್ ಅವರನ್ನು ಸನ್ಮಾನಿಸಲಾಯಿತು. ಪ್ರಾಧ್ಯಾಪಕಿ ಡಾ ಸುಧಾರಾಣಿ ಕಾರ್ಯಕ್ರಮ ನಿರೂಪಿಸಿದರು. ನಂತರ ಸಂವಾದ ಕಾರ್ಯಕ್ರಮ ನಡೆಯಿತು.ವಿಶ್ವ ಮಹಿಳಾ ದಿನಾಚರಣೆಯ ಹಿನ್ನೆಲೆಯಲ್ಲಿ ಎರಡು ವಾರಗಳ ಕಾಲ ಹಮ್ಮಿಕೊಂಡ ವಿವಿಧ ಸ್ಫರ್ಧೆಗಳ ಬಹುಮಾನವನ್ನು ನೀಡಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ರಂಗಭೂಮಿ ಕಲಾವಿದೆ, ಚಿತ್ರನಟಿ ರೂಪಶ್ರೀ ವರ್ಕಾಡಿ ಮಾತನಾಡಿ, ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮೀಸಲಿರದೆ ಇಂದು ಆರ್ಥಿಕ, ರಾಜಕೀಯ, ರಕ್ಷಣೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಡಳಿತ ಮಂಡಳಿಯ ಡಾ. ಗ್ರೀಷ್ಮ ವಿವೇಕ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ದಿವ್ಯಾ ಡೆಂಬಳ ಕಾರ್ಯಕ್ರಮ ನಿರೂಪಿಸಿದರು.