ಸಾರಾಂಶ
ದೊಡ್ಡಬಳ್ಳಾಪುರ: ಪ್ರಸಕ್ತ ಹಣಕಾಸು ವರ್ಷದಲ್ಲಿ ವಿವಿಧ ಇಲಾಖೆಗಳಿಗೆ ಮಂಜೂರಾಗಿರುವ ಆರ್ಥಿಕ ಅನುದಾನವನ್ನು ಸಂಪೂರ್ಣವಾಗಿ ನಿಗದಿತ ಯೋಜನೆಗಳ ಜಾರಿಗೆ ಬಳಕೆ ಮಾಡುವ ಮೂಲಕ ಶೇ.100ರಷ್ಟು ಪ್ರಗತಿ ದಾಖಲಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಪಿ.ಸಿ.ಜಾಫರ್ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಶನಿವಾರ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಪ್ರಸಕ್ತ ಸಾಲಿಗೆ ಇಲಾಖೆಗಳಿಗೆ ಬಿಡುಗಡೆಯಾಗಿರುವ ಅನುದಾನಕ್ಕೆ ಸಂಬಂಧಿಸಿದಂತೆ ಆಯಾ ಇಲಾಖೆಗಳು ಕ್ರಿಯಾಯೋಜನೆ, ಟೆಂಡರ್, ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಬಿಡುಗಡೆಯಾದ ಅನುದಾನವನ್ನು ಪೂರ್ಣ ಖರ್ಚು ಮಾಡಿ ಪರಿಪೂರ್ಣ ಪ್ರಗತಿ ಸಾಧಿಸುವಂತೆ ತಿಳಿಸಿದರು.ಮಾರ್ಚ್ ಅಂತ್ಯದವರೆಗೆ ಕಾಯದೆ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಿ ಡಿಸೆಂಬರ್,ಅಥವಾ ಜನವರಿಯೊಳಗೆ ಶೇ.100 ರಷ್ಟು ಆರ್ಥಿಕ ಭೌತಿಕ ಪ್ರಗತಿ ಅಪೇಕ್ಷಣೀಯ. ನರೇಗಾ ಅನುದಾನ ಸದ್ಬಳಕೆಯಾಗಬೇಕು. ಅರಣ್ಯ ಇಲಾಖೆಯಲ್ಲಿ ನರೇಗಾ ಯೋಜನೆಯಡಿ ಗಿಡ ನೆಡುವ ಅರಣ್ಯೀಕರಣ ಕಾರ್ಯಕ್ರಮ ಒಂದು ಉತ್ತಮ ಯೋಜನೆಯಾಗಿದೆ. ಸಾಮಾಜಿಕ ಮತ್ತು ಪ್ರಾದೇಶಿಕ ಅರಣ್ಯ ವಿಭಾಗವು ಹೆಚ್ಚು ಹೆಚ್ಚು ಸಸಿಗಳನ್ನು ನಾಟಿ ಮಾಡಿ ಬೇಡಿಕೆ ಅನುಗುಣವಾಗಿ ರೈತರಿಗೆ, ಸಾರ್ವಜನಿಕರಿಗೆ ಹಂಚಬೇಕು ಎಂದರು.
2024ರ ನರೇಗಾ ಯೋಜನೆಯಡಿ 5720 ಸಸಿಗಳನ್ನು ನೆಟ್ಟು, 26 ಕಿಮೀ ರಸ್ತೆ ಬದಿ ನೆಡುತೋಪು ನಿರ್ಮಾಣ ಮಾಡಲಾಗಿದೆ. 44.16 ಹೆಕ್ಟೇರ್ ಬ್ಲಾಕ್ ಪ್ಲಾಂಟೇಶನ್ ನೆಡುತೋಪು ನಿರ್ಮಾಣ ಮಾಡಲಾಗಿದೆ. 2025ರ ವೇಳೆಗೆ 42840 ಸಸಿ ನೆಡುವುದು, ಸಾರ್ವಜನಿಕರ ವಿತರಣೆಗಾಗಿ 1,28,660 ಸಸಿಗಳನ್ನು ತಾಲೂಕು ನರ್ಸರಿಗಳಲ್ಲಿ ಬೆಳೆಸಲಾಗುತ್ತಿದೆ ಎಂದು ಅರಣ್ಯಾಧಿಕಾರಿ ಮಾಹಿತಿ ನೀಡಿದರು.ವಲಸಿಗರ ಮೇಲೆ ನಿಗಾ ವಹಿಸಿ: ಜಿಲ್ಲೆಗೆ ಬೇರೆ ಪ್ರದೇಶದಿಂದ ಆಗಮಿಸುವ ವಲಸಿಗರ ಬಗ್ಗೆ ನಿಗಾ ವಹಿಸಬೇಕು. ಜಿಲ್ಲೆಯ ಯಾವ ಪ್ರದೇಶಗಳಲ್ಲಿ ವಲಸಿಗರು ವಾಸವಾಗಿದ್ದಾರೆ ಎಂಬ ಮಾಹಿತಿಯನ್ನು ಕಲೆ ಹಾಕಿ ಯಾವ ಉದ್ದೇಶಕ್ಕಾಗಿ ಬಂದಿದ್ದಾರೆ, ಆರ್ಥಿಕ ಸ್ಥಿತಿಗತಿ, ಆರೋಗ್ಯ, ಶಿಕ್ಷಣ ಇವುಗಳ ಬಗ್ಗೆ ಮಾಹಿತಿ ಕಲೆಹಾಕಲು ಆರೋಗ್ಯ, ಕಾರ್ಮಿಕ, ಪೋಲಿಸ್ ಇಲಾಖೆಗೆ ಸೂಚಿಸಿದರು.
ಉತ್ತಮ ಫಲಿತಾಂಶ ಬರಲು ಯೋಜನೆ ರೂಪಿಸಿ: ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಈ ವರ್ಷ ಉತ್ತಮ ಫಲಿತಾಂಶ ಬರಲು ಯೋಜನೆ ರೂಪಿಸಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸರ್ಕಾರಿ ಶಾಲೆಗಳನ್ನು ದತ್ತು ನೀಡಿ. ಶಾಲಾ ಕಾಲೇಜು ಶಿಕ್ಷಕರಿಗೆ, ಮುಖ್ಯೋಪಾಧ್ಯಾಯರಿಗೆ, ಪ್ರಾಂಶುಪಾಲರಿಗೆ ಸೂಕ್ತ ತರಬೇತಿ, ಮಾರ್ಗಸೂಚಿಗಳನ್ನು ನೀಡಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್, ಜಿ.ಪಂಸಿಇಒ ಡಾ.ಕೆ.ಎನ್.ಅನುರಾಧ, ಅಪರ ಪೋಲಿಸ್ ವರಿಷ್ಠಾಧಿಕಾರಿ ನಾಗರಾಜ್, ಪ್ರಾದೇಶಿಕ ಅರಣ್ಯ ವಿಭಾಗದ ಉಪವಿಭಾಗಾಧಿಕಾರಿ ಸರೀನಾ ಸಿಕ್ಕಲಿಗಾರ್, ಉಪವಿಭಾಗಾಧಿಕಾರಿ ಎನ್.ದುರ್ಗಶ್ರೀ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಟಿ.ಕೆ.ರಮೇಶ್ ಇದ್ದರು.