ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಅಂಚೆ ಇಲಾಖೆ ಮೂಲಕ ವಿದೇಶಗಳಿಗೆ ವಿವಿಧ ಉತ್ಪನ್ನ ರಫ್ತು ಮಾಡಲು ಕೇಂದ್ರ ಸರ್ಕಾರ ಅನುಮತಿ ಕಲ್ಪಿಸಿದೆ. ವಿದೇಶಿ ರಫ್ತಿಗೆ ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರನ್ನು ಉತ್ತೇಜಿಸಲು ಪ್ರಾರಂಭಿಸಿರುವ ‘ಡಾಕ್ ನಿರ್ಯಾತ್ ಕೇಂದ್ರ’ಗಳು ಮಂಗಳೂರಿನಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಮಂಗಳೂರು ಅಂಚೆ ವಿಭಾಗದ ಹಿರಿಯ ಅಧೀಕ್ಷಕ ಸುಧಾಕರ ಮಲ್ಯ ತಿಳಿಸಿದರು.ದ.ಕ. ಕಾರ್ಯನಿರತ ಪತ್ರಕರ್ತರ ಸಂಘ ಬುಧವಾರ ಇಲ್ಲಿನ ಪ್ರೆಸ್‌ಕ್ಲಬ್‌ನಲ್ಲಿ ಏರ್ಪಡಿಸಿದ ಪತ್ರಿಕಾ ಸಂವಾದದಲ್ಲಿ ಅವರು ಮಾತನಾಡಿದರು.
ಒಂದು ವರ್ಷದ ಹಿಂದೆ ಪ್ರಾರಂಭವಾಗಿರುವ ಈ ಯೋಜನೆ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಿದ್ದು, ಜನತೆ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಬೇಕು. ಸಾಮಾನ್ಯ ಸ್ಪೀಡ್ ಪೋಸ್ಟ್‌ನಂತೆ 5 ರಿಂದ 7 ದಿನಗಳಲ್ಲಿ ರಫ್ತು ಮಾಡಿರುವ ಉತ್ಪನ್ನಗಳು ನಿಗದಿತ ಸ್ಥಳಕ್ಕೆ ತಲುಪುತ್ತವೆ. ಈಗಾಗಲೇ ಈ ಯೋಜನೆಯಡಿ 12 ಪಾರ್ಸೆಲ್‌ಗಳು ಸುರಕ್ಷಿತವಾಗಿ ವಿದೇಶಕ್ಕೆ ತೆರಳಿವೆ ಎಂದರು.ರಫ್ತು ಮಾಡಲು ಪರವಾನಗಿ, ಪ್ರಮಾಣಪತ್ರ, ವಸ್ತು ವಿವರ, ರಫ್ತುದಾರರ ವಿವರಗಳನ್ನು ಡಾಕ್ ನಿರ್ಯಾತ್ ಕೇಂದ್ರದ ಪೋರ್ಟಲ್‌ನಲ್ಲಿ ಭರ್ತಿ ಮಾಡಿ ನೋಂದಣಿ ಮಾಡಿಕೊಳ್ಳಬಹುದು. ಈಗಾಗಲೇ ನಾಲ್ವರು ಗ್ರಾಹಕರು ಗಿಡಮೂಲಿಕೆ, ಗೇರುಬೀಜ, ಯಂತ್ರ ಭಾಗ ಸೇರಿದಂತೆ 12 ಪಾರ್ಸೆಲ್‌ಗಳನ್ನು ವಿದೇಶಗಳಿಗೆ ಕಳುಹಿಸಿದ್ದಾರೆ. ಮುಖ್ಯ ಅಂಚೆ ಕಚೇರಿ ಸೇರಿದಂತೆ ಸುರತ್ಕಲ್, ಹಂಪನಕಟ್ಟೆ ಅಂಚೆ ಕಚೇರಿಯಲ್ಲಿ ಈ ಸೌಲಭ್ಯ ಒದಗಿಸಲಾಗಿದೆ ಎಂದರು.
ಸಿಎಎ(ಪೌರತ್ವ ತಿದ್ದುಪಡಿ ಕಾಯ್ದೆ-2019) ಅಡಿಯಲ್ಲಿ ಭಾರತದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದವರ ದಾಖಲೆ ಪರಿಶೀಲನೆ ಹೊಣೆಯನ್ನು ಅಂಚೆ ಇಲಾಖೆಗೆ ವಹಿಸಲಾಗಿತ್ತು. ಮಂಗಳೂರು ವಿಭಾಗದಲ್ಲಿ ಎರಡು ಅರ್ಜಿಗಳು ಇದ್ದವು. ದಾಖಲೆ ಪರಿಶೀಲಿಸಿ, ಅವುಗಳನ್ನು ರಾಜ್ಯ ಮಟ್ಟಕ್ಕೆ ಕಳುಹಿಸಲಾಗಿದೆ ಎಂದರು.ರಾಷ್ಟ್ರೀಯ ಪತ್ರ ಬರಹ ಸ್ಪರ್ಧೆ:ಅಂಚೆ ಇಲಾಖೆಯು ‘ಬರಹಗಾರಿಕೆಯಲ್ಲಿ ಖುಷಿ, ಡಿಜಿಟಲ್ ಯುಗದಲ್ಲಿ ಪತ್ರದ ಮಹತ್ವ’ ಕುರಿತು ರಾಷ್ಟ್ರ ಮಟ್ಟದ ಪತ್ರ ಬರಹದ ಸ್ಪರ್ಧೆ ಹಮ್ಮಿಕೊಂಡಿದೆ. 18 ರ ವಯೋಮಾನದ ಒಳಗಿನವರು, ಮತ್ತು 18 ರ ವಯೋಮಾನದ ಮೇಲಿನವರು ಎಂದು ಎರಡು ವಿಭಾಗ ಮಾಡಲಾಗಿದೆ. ಆಸಕ್ತರು, 1,000 ಪದಗಳ ಒಳಗೆ ಪತ್ರ ಬರೆದು, ಮಂಗಳೂರು ವಿಭಾಗದ ಹಿರಿಯ ಅಧೀಕ್ಷಕರ ಕಚೇರಿಗೆ ಡಿಸೆಂಬರ್ 14ರ ಒಳಗೆ ತಲುಪುವಂತೆ ಕಳುಹಿಸಬಹುದು ಎಂದು ತಿಳಿಸಿದರು.
ದ.ಕ. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ಅಧಿಕಾರಿಗಳಾದ ದಿನೇಶ್, ವಿಲ್ಸನ್ ಡಿಸೋಜಾ, ಯತಿನ್ ಕುಮಾರ್, ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಸ್ಥಾಪಕ ಅಧ್ಯಕ್ಷ ಆನಂದ ಶೆಟ್ಟಿ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್., ಪತ್ರಕರ್ತರ ಸಂಘದ ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್. ಇದ್ದರು.