ಚನ್ನರಾಯಪಟ್ಟಣದಲ್ಲಿ ಯುಟಿ ಕೇಬಲ್‌ ಅಳವಡಿಕೆ

| Published : Sep 13 2025, 02:04 AM IST

ಸಾರಾಂಶ

ಅಡಚಣೆ, ಅವಘಡ ರಹಿತ ವಿದ್ಯುತ್ ಪೂರೈಕೆಯೊಂದಿಗೆ ಗುಣಮಟ್ಟ ವಿದ್ಯುತ್ ಸರಬರಾಜಿಗಾಗಿ ಪುರಸಭಾ ವ್ಯಾಪ್ತಿಯಲ್ಲಿನ ಎಲ್ಲಾ ವಾರ್ಡ್‌ಗಳಲ್ಲಿ ೧೦ ಕೋಟಿ ರು. ವೆಚ್ಚದಲ್ಲಿ ಯುಟಿ ಕೇಬಲ್ ಮತ್ತು ಎಚ್ ಟಿ ಕವರ್‌ ಕಂಡಕ್ಟರ್‌ ಅಳವಡಿಸಲಾಗುತ್ತಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು. ಗಾಳಿ, ಮಳೆಯಲ್ಲೂ ನಿರಂತರ ವಿದ್ಯುತ್ ಪೂರೈಕೆ ಹಾಗೂ ನಿರ್ವಹಣೆಯೂ ಸುಲಭವಾಗಲಿದೆ. ಕಾಮಗಾರಿಯೂ ೪ ತಿಂಗಳಲ್ಲಿ ಮುಗಿಯಲಿದ್ದು, ಕಾಮಗಾರಿ ವೇಳೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರ ಸಹಕಾರ ಅಗತ್ಯವೆಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಅಡಚಣೆ, ಅವಘಡ ರಹಿತ ವಿದ್ಯುತ್ ಪೂರೈಕೆಯೊಂದಿಗೆ ಗುಣಮಟ್ಟ ವಿದ್ಯುತ್ ಸರಬರಾಜಿಗಾಗಿ ಪುರಸಭಾ ವ್ಯಾಪ್ತಿಯಲ್ಲಿನ ಎಲ್ಲಾ ವಾರ್ಡ್‌ಗಳಲ್ಲಿ ೧೦ ಕೋಟಿ ರು. ವೆಚ್ಚದಲ್ಲಿ ಯುಟಿ ಕೇಬಲ್ ಮತ್ತು ಎಚ್ ಟಿ ಕವರ್‌ ಕಂಡಕ್ಟರ್‌ ಅಳವಡಿಸಲಾಗುತ್ತಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.

ಅವರು ಪಟ್ಟಣದ ವಾರ್ಡ್ ನಂ.೭ರಲ್ಲಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ಪಟ್ಟಣದ ಪೂರ್ತಿ ಹಾಲಿ ಇರುವ ವಿದ್ಯುತ್ ತಂತಿಗಳನ್ನು ಬದಲಾಯಿಸಿ ಗುಣ ಮಟ್ಟದಿಂದ ಕೂಡಿದ ೬೦ ಕಿ.ಮೀ. ಯುಟಿ ಕೇಬಲ್ ಮತ್ತು ೮೦ ಕಿ.ಮೀ ಎಚ್.ಟಿ. ಕವರ್‌ ಕಂಡಕ್ಟರ್‌ ಅಳವಡಿಸಲಾಗುತ್ತದೆ. ಅದರಿಂದ ಗಾಳಿ, ಮಳೆಯಲ್ಲೂ ನಿರಂತರ ವಿದ್ಯುತ್ ಪೂರೈಕೆ ಹಾಗೂ ನಿರ್ವಹಣೆಯೂ ಸುಲಭವಾಗಲಿದೆ. ಕಾಮಗಾರಿಯೂ ೪ ತಿಂಗಳಲ್ಲಿ ಮುಗಿಯಲಿದ್ದು, ಕಾಮಗಾರಿ ವೇಳೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರ ಸಹಕಾರ ಅಗತ್ಯವೆಂದರು.

ದಿನೇ ದಿನೇ ಪಟ್ಟಣ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್ ಇಲಾಖೆಗೆ ಸಲ್ಲಿಸಿದ ಪ್ರಸ್ತಾವನೆಗೆ ಇಂಧನ ಸಚಿವರು ಅವಕಾಶ ಮಾಡಿ ಕೊಟ್ಟಿದ್ದಾರೆ. ಅವರಿಗೆ ಕ್ಷೇತ್ರದ ಶಾಸಕನಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ಇದರೊಂದಿಗೆ ಪಟ್ಟಣಕ್ಕೆ ಅಂಡರ್‌ಗೌಂಡ್ ಕೇಬಲ್ ಅಳವಡಿಕೆಗೆ ಮನವಿ ಮಾಡಲಾಗಿ ಮುಂದಿನ ವರ್ಷ ಅವಕಾಶ ಮಾಡಿಕೊಡುವುದಾಗಿ ಹೇಳಿ ಪ್ರಸಕ್ತ ವರ್ಷ ಶ್ರವಣಬೆಳಗೊಳಕ್ಕೆ ಅವಕಾಶ ಕಲ್ಪಿಸಿದ್ದು, ೫ ಕೋಟಿ ರು. ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ ಎಂದರು.

ತಾಲೂಕಿನಲ್ಲಿ ನಿರಂತರ ವಿದ್ಯುತ್ ತ್ ಪೂರೈಕೆಯ ಸಲುವಾಗಿ ೨೭/೭ ಯೋಜನೆಯನ್ನು ಪಟ್ಟಣದ ಜೊತೆಗೆ ನುಗ್ಗೇಹಳ್ಳಿಯಲ್ಲಿ ಚಾಲನೆ ನೀಡಲಾಗಿದೆ. ದಂಡಿಗನಹಳ್ಳಿ ಮತ್ತು ಶ್ರವಣಬೆಳಗೊಳ ಹೋಬಳಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಪುರಸಭಾ ಅಧ್ಯಕ್ಷ ಸಿ.ಎನ್. ಮೋಹನ್‌ಕುಮಾರ್, ಉಪಾಧ್ಯಕ್ಷೆ ಕವಿತಾರಾಜು, ಸ್ಥಾಯಿಸಮಿತಿ ಅಧ್ಯಕ್ಷ ಎಸ್.ಎ.ಗಣೇಶ್, ಪುರಸಭಾ ಸದಸ್ಯರಾದ ರಾಮಕೃಷ್ಣ, ಇಲಿಯಾಜ್, ಮುಖಂಡರಾದ ದಿನೇಶ್, ಗಂಗಾಧರ್, ರಾಜಣ್ಣ, ವೆಂಕಟೇಶ್, ರಘು ಶಾಮಿಯಾನ, ನಾಗರಾಜು ಸೇರಿ ಸೆಸ್ಕ್‌ನ ಕಾರ್ಯಪಾಲಕ ಅಭಿಯಂತರೆ ರತ್ನ, ಸಹಾಯಕ ಕಾರ್ಯಪಾಲಕ ಅಭಿಯಂತರ ಕೃಷ್ಣ, ಹರೀಶ್ ಮತ್ತು ಯೋಜನೆಯ ಗುತ್ತಿಗೆ ಪಡೆದ ಬೆಂಗಳೂರಿನ ಎ. ಎನ್.ಕಂಪೆನಿಯ ನಯಾರ್ ಇತರರು ಇದ್ದರು.