ಮಂಗಳೂರು: ಅತ್ಯಂತ ಸುಂದರವಾಗಿ ರೂಪಿಸಿರುವ ವಿಧಾನಸೌಧದ ಮುಖ್ಯ ದ್ವಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾ.25ರಂದು ಉದ್ಘಾಟಿಸಲಿದ್ದಾರೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಫರೀದ್ ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರವೇಶ ದ್ವಾರವನ್ನು ಅರಣ್ಯ ಅಭಿವೃದ್ಧಿ ನಿಗಮ ಮತ್ತು ಲೋಕೋಪಯೋಗಿ ಇಲಾಖೆ ಮೂಲಕ ಅಭಿವೃದ್ಧಿಪಡಿಸಲಾಗಿದೆ. ಕರ್ನಾಟಕ ಶೈಲಿಯ ಅತ್ಯಂತ ಸುಂದರ ಕೆತ್ತನೆಗಳನ್ನು ಹೊಂದಿದ್ದು ಆಕರ್ಷಣೀಯವಾಗಿದೆ. ಇದರೊಂದಿಗೆ ವಿಧಾನಸೌಧಕ್ಕೆ ಭಾಗಶಃ ವಿದ್ಯುತ್ ಪೂರೈಸುವ ಸೌರ ಫಲಕಗಳನ್ನು ಕೂಡ ಮಾ.25ರಂದು ಉದ್ಘಾಟಿಸಲಾಗುವುದು ಎಂದು ಹೇಳಿದರು.
ವಿಧಾನಸೌಧದ ಭವ್ಯ ಮೆಟ್ಟಿಲುಗಳ ಬಳಿ ಮತ್ತು ಹೈಕೋರ್ಟ್ ಪೀಠ ಕಡೆಯಿಂದ ಪ್ರವೇಶ ದ್ವಾರಗಳನ್ನು ಅಭಿವೃದ್ಧಿಪಡಿಸಲು ಲೋಕೋಪಯೋಗಿ ಇಲಾಖೆಯಿಂದ ಟೆಂಡರ್ ಕರೆಯಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದರು.ವಿಧಾನಸೌಧ ಆವರಣದಲ್ಲಿರುವ ಬೀದಿ ನಾಯಿಗಳಿಗೆ ಶ್ವಾನ ಆಶ್ರಯ ತಾಣ ನಿರ್ಮಿಸುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯು.ಟಿ. ಖಾದರ್, ಈ ಕುರಿತಾದ ಯೋಜನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಬಗ್ಗೆ ಸರ್ಕಾರವೇ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ತಿಳಿಸಿದರು.