ಎಸ್‌ಸಿಪಿ, ಟಿಎಸ್‌ಪಿ ಅನುದಾನ ಸಮರ್ಪಕವಾಗಿ ಬಳಸಿಕೊಳ್ಳಿ: ಸಿಇಒ

| Published : Dec 16 2023, 02:01 AM IST

ಎಸ್‌ಸಿಪಿ, ಟಿಎಸ್‌ಪಿ ಅನುದಾನ ಸಮರ್ಪಕವಾಗಿ ಬಳಸಿಕೊಳ್ಳಿ: ಸಿಇಒ
Share this Article
  • FB
  • TW
  • Linkdin
  • Email

ಸಾರಾಂಶ

ರಾಯಚೂರಿನ ಸ್ಥಳೀಯ ಜಿಪಂ ಕಚೇರಿ ಆವರಣದಲ್ಲಿನ ಜಲನಿರ್ಮಲ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಮತ್ತು ಗಿರಿಜನ ಉಪಯೋಜನೆಯ ಕಾರ್ಯಕ್ರಮಗಳ ಅನುಷ್ಠಾನದ ಕುರಿತ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ರಾಯಚೂರು

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಉಪಯೋಜನೆ ಕಾರ್ಯಕ್ರಮಗಳಡಿಯಲ್ಲಿ ಬಿಡುಗಡೆಯಾದ ಅನುದಾನವನ್ನು ಆಯಾ ಇಲಾಖೆಯ ಅಧಿಕಾರಿಗಳು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ಅನುದಾನವು ಕೈತಪ್ಪಿ ಹೋಗದಂತೆ ವಿವಿಧ ಯೋಜನೆಗಳು ಫಲಾನುಭವಿಗಳಿಗೆ ತಲುಪಿಸುವಲ್ಲಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ ಅಧಿಕಾರಿಗಳಿಗೆ ಸೂಚಿಸಿದರು.

ಸ್ಥಳೀಯ ಜಿಪಂ ಕಚೇರಿ ಆವರಣದಲ್ಲಿನ ಜಲನಿರ್ಮಲ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ಮತ್ತು ಗಿರಿಜನ ಉಪಯೋಜನೆಯ ಕಾರ್ಯಕ್ರಮಗಳ ಅನುಷ್ಠಾನದ ಕುರಿತ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಎಸ್‌ಸಿಪಿ-ಟಿಎಸ್‌ಪಿ ಉಪಯೋಜನೆಯಡಿ ರಾಜ್ಯದಿಂದ ನೀಡಲಾದ ನಮೂನೆಯಂತೆ ಮಾಹಿತಿಗಳ ವರದಿಯನ್ನು ಸಿದ್ಧಪಡಿಸಿ, ಅಧಿಕೃತ ಜಾಲತಾಣದಲ್ಲಿ ಅಪಲೋಡ್ ಮಾಡಬೇಕು. ಜಿಲ್ಲೆಯಲ್ಲಿ ಎಸ್‌ಸಿಪಿ, ಟಿಎಸ್‌ಪಿ ಉಪಯೋಜನೆಯಡಿ ಕೈಗೊಂಡ ಕಾಮಗಾರಿಗಳ ಕುರಿತು ತಾಲೂಕು ಮಟ್ಟದಲ್ಲಿ ಸಭೆ ಕೈಗೊಳ್ಳಬೇಕು. ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಇಲಾಖೆಗಳಿಗೆ ಬರುವ ಅನುದಾನವನ್ನು ಬಾಕಿ ಉಳಿಸಿಕೊಳ್ಳದೆ ಪೂರ್ಣಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಬೇಕು. ಹಲವು ಇಲಾಖೆಗಳು ಬಿಡುಗಡೆಯಾದ ಅನುದಾನವನ್ನು ಖರ್ಚು ಮಾಡಿಕೊಳ್ಳದೇ ತಮಗೆ ನೀಡಲಾದ ಗುರಿಯಲ್ಲಿ ಕಡಿಮೆ ಪ್ರಮಾಣದ ಸಾಧನೆ ಮಾಡಿದ್ದು, ಕೂಡಲೇ ಸಭೆಗಳನ್ನು ನಡೆಸಿ ಆಯಾ ತಾಲೂಕು ವ್ಯಾಪ್ತಿಯಲ್ಲಿ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಹೆಚ್ಚಿನ ಪ್ರಗತಿ ಸಾಧಿಸುವಂತೆ ತಿಳಿಸಿದರು.

ಜಿಲ್ಲೆಯ 32 ಇಲಾಖೆಗಳಲ್ಲಿ ಈಗಾಗಲೇ ಎಸ್.ಸಿ.ಪಿ ಯೋಜನೆಯಡಿ 20,100.78 ಲಕ್ಷ ಅನುದಾನ ಹಂಚಿಕೆಯಾಗಿದೆ. ಅದರಲ್ಲಿ ಒಟ್ಟು 13,895.06 ಲಕ್ಷ ಅನುದಾನ ಬಿಡುಗಡೆಯಾಗಿದೆ. ಬಿಡುಗಡೆಯಾದ ಅನುದಾನದಲ್ಲಿ ಇಲಾಖೆಗಳು 12,775.28 ಲಕ್ಷ ಅನುದಾನ ಖರ್ಚು ಮಾಡಿವೆ. ಟಿಎಸ್‌ಪಿ ಯೋಜನೆಯಡಿ 8950.54 ಲಕ್ಷ ಅನುದಾನ ಹಂಚಿಕೆಯಾಗಿದ್ದು, ಅದರಲ್ಲಿ 6450.90 ಲಕ್ಷ ಅನುದಾನ ಬಿಡುಗಡೆಯಾಗಿದೆ. ಬಿಡುಗಡೆಯಾದ ಟಿಎಸ್ಪಿ ಅನುದಾನದಲ್ಲಿ 5518.72 ಲಕ್ಷ ಅನುದಾನ ಖರ್ಚು ಮಾಡಲಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಎಸ್‌ಸಿಪಿ ಉಪಯೋಜನೆಯಡಿ ಜಿಲ್ಲೆಗೆ 91.94% ರಷ್ಟು ಅನುದಾನ ಖರ್ಚು ಮಾಡಲಾಗಿದೆ. ಟಿಎಸ್‌ಪಿ ಉಪಯೋಜನೆಯಡಿ 85.55% ರಷ್ಟು ಅನುದಾನ ಬಿಡುಗಡೆಯಾದ ಅನುದಾನದಲ್ಲಿ ಖರ್ಚು ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಜೇಂದ್ರ ಜಲ್ದಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಚೇತನಕುಮಾರ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಆರ್.ದೇವಿಕಾ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಮಾಣಿಕ.ವಿ.ರಘೋಜಿ, ಮಿನುಗಾರಿಕೆ ಇಲಾಖೆಯ ಉಪನಿರ್ದೇಶಕರು ಎನ್.ಬಸನಗೌಡ, ಜಿಲ್ಲಾ ಆಯುಷ್ ಇಲಾಖೆಯ ಅಧಿಕಾರಿ ಡಾ.ಶಂಕರಗೌಡ ಪಾಟೀಲ್, ಲಿಂಗಸಗೂರು ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಘವೇಂದ್ರ ರಾವ್.ಕೆ, ಕಾರ್ಮಿಕಾಧಿಕಾರಿ ಆರತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವೀರೇಶ ನಾಯಕ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.