ಆರ್ಥಿಕ ವರ್ಷಾಂತ್ಯದೊಳಗೆ ಅನುದಾನ ಸದ್ಬಳಿಸಿ: ಮೊಹಿಸಿನ್

| Published : Jan 19 2025, 02:17 AM IST

ಸಾರಾಂಶ

ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಮರ್ಪಕವಾದ ಹಾಸಿಗೆ ಹೊದಿಕೆ ನೀಡಿ ಸಮಸ್ಯೆ ನಿವಾರಿಸಬೇಕು ಹಾಗೂ ಕೆಎಂಎಫ್‌ನ ಬಾಕಿ ಉಳಿಸಿಕೊಂಡ ಬಿಲ್‌ ಬಗೆಹರಿಸಬೇಕು

ಕನ್ನಡಪ್ರಭ ವಾರ್ತೆ ಬಾಗಲಕೋಟೆ

2024-25ನೇ ಸಾಲಿನ ಆರ್ಥಿಕ ವರ್ಷ ಅಂತ್ಯವಾಗುವುದರೊಳಗೆ ಅನುದಾನ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯಿತಿ ಆಡಳಿತಾಧಿಕಾರಿ ಮೊಹಮ್ಮದ ಮೊಹಿಸಿನ್ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ನೂತನ ಸಭಾಂಗಣದಲ್ಲಿ ಶನಿವಾರ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆರ್ಥಿಕ ವರ್ಷ ಮುಗಿಯುವ ಮಾರ್ಚ್‌ ಅಂತ್ಯದೊಳಗೆ ಎಲ್ಲಾ ಇಲಾಖೆಗಳ ಮುಖ್ಯಸ್ಥರು ತಮಗೆ ನೀಡಿರುವ ವಿವಿಧ ಕಾಮಗಾರಿಗಳಿಗೆ ಬೇಕಾಗುವ ಅನುದಾನ, ಹೊರಗುತ್ತಿಗೆ ನೌಕರರಿಗೆ ಬೇಕಾಗುವ ಸಂಬಳದ ಅನುದಾನ ಸೇರಿದಂತೆ ಎಲ್ಲ ರೀತಿ ಅನುದಾನ ಖರ್ಚು ಮಾಡಬೇಕು. ಅನುದಾನ ಖರ್ಚು ಆಗದಿದ್ದಲ್ಲಿ ಬೇರೆ ಕಡೆ ವರ್ಗ ಆಗುವುದರಿಂದ ಭೌತಿಕ ಪ್ರಗತಿ ಕುಂಠಿತಗೊಳ್ಳುತ್ತದೆ ಎಂದರು.

ಫೆ.22ರಿಂದ 24ರವರೆಗೆ ರನ್ನ ವೈಭವ ಉತ್ಸವ ಹಾಗೂ ಮಾರ್ಚ್‌ 1, 2 ಮತ್ತು 3ರಂದು ಚಾಲುಕ್ಯ ಉತ್ಸವವನ್ನು ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಆಚರಿಸುತ್ತಿರುವುದು ಸಂತೋಷದ ವಿಷಯವಾಗಿದೆ. ಇನ್ನು ಮುಂದೆ ಪ್ರತಿ ವರ್ಷ ಒಂದು ನಿರ್ದಿಷ್ಟ ಪಡಿಸಿದ ದಿನಾಂಕದಂದೇ ಉತ್ಸವಗಳನ್ನು ಆಚರಿಸಿದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದೂರದ ಬೆಂಗಳೂರು, ಮೈಸೂರು ಸೇರಿದಂತೆ ದಕ್ಷೀಣ ಕರ್ನಾಟಕದ ಪ್ರವಾಸಿಗರನ್ನು ನಮ್ಮ ಬಾದಾಮಿ, ಪಟ್ಟದಕಲ್ಲು, ಐಹೊಳೆ ಮುಧೋಳದತ್ತ ಸೆಳೆಯಬಹುದಾಗಿದೆ ಎಂದು ತಿಳಿಸಿದರು.

ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಕ್ಕೆ ಒತ್ತು ನೀಡಬೇಕು. ಸತತ ಮೂರು ವರ್ಷಗಳ ಕಾಲ ಯಾವ ಯಾವ ಶಾಲೆಯಲ್ಲಿ ಒಂದೇ ವಿಷಯದಲ್ಲಿ ವಿದ್ಯಾರ್ಥಿಗಳು ಅನುತ್ತಿರ್ಣರಾಗುತ್ತಾರೆ ಎಂಬುದನ್ನು ತಿಳಿದು ಆ ವಿಷಯದ ಶಿಕ್ಷಕರಿಗೆ ತರಬೇತಿ ನೀಡಿ ಮಕ್ಕಳ ಕಲಿಕಾ ಮಟ್ಟವನ್ನು ಹೆಚ್ಚಿಸಬೇಕು. ಪ್ರಮುಖವಾಗಿ ಜಿಲ್ಲೆಯ ಸರಕಾರಿ ಆಸ್ಪತ್ರೆಗಳಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ಸೆಂಟರ್‌ಗಳ ಕೊರತೆ ಇರುವುದು, ಔಷಧಿಗಳ ಪೂರೈಕೆಯಲ್ಲಿ ವಿಳಂಬದ ವಿಷಯ ಪತ್ರಿಕೆಗಳಲ್ಲಿ ವರದಿಯಾಗುತ್ತಿದ್ದು ಜಿಲ್ಲಾ ಆರೋಗ್ಯ ಅಧಿಕಾರಿ ಇವುಗಳತ್ತ ಗಮನ ನೀಡಬೇಕು. ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಮರ್ಪಕವಾದ ಹಾಸಿಗೆ ಹೊದಿಕೆ ನೀಡಿ ಸಮಸ್ಯೆ ನಿವಾರಿಸಬೇಕು ಹಾಗೂ ಕೆಎಂಎಫ್‌ನ ಬಾಕಿ ಉಳಿಸಿಕೊಂಡ ಬಿಲ್‌ ಬಗೆಹರಿಸಬೇಕು ಎಂದು ಹೇಳಿದರು.

ತೋಟಗಾರಿಕೆ, ಕೃಷಿ, ರೇಷ್ಮೆ ಪಂಚಾಯತ್ ರಾಜ್, ಆಯುಷ್, ಪಶುಪಾಲನೆ ಸೇರಿದಂತೆ ವಿವಿಧ ಇಲಾಖೆಗಳ ಮಾಸಿಕ ಗುರಿಸಾಧನೆಗಳ ಕುರಿತು ಅಧಿಕಾರಿಗಳು ಮತ್ತು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ್‌ ಅವರೊಂದಿಗೆ ಚರ್ಚಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮೇಶ್ವರ ಉಕ್ಕಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.