ಸಾರಾಂಶ
ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಹಾಗೂ ವಿವೇಕಾ ಶಾಲಾ ಕೊಠಡಿ ಉದ್ಘಾಟನಾ ಸಮಾರಂಭ
ಕನ್ನಡಪ್ರಭ ವಾರ್ತೆ ತುಮಕೂರುಶಿಕ್ಷಣದ ಜೊತೆಗೆ ಮಕ್ಕಳಿಗೆ ಕೌಶಲ್ಯವನ್ನು ಕಲಿಸಿದರೆ ಮಾತ್ರ, ಶೇ.60 ರಷ್ಟಿರುವ ಯುವ ಮಾನವ ಸಂಪನ್ಮೂಲವನ್ನು ಸಂರ್ಪಕವಾಗಿ ಬಳಸಿಕೊಳ್ಳಲು ಸಾಧ್ಯ ಎಂದು ಶಾಸಕ ಜಿ.ಬಿ. ಜೋತಿಗಣೇಶ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಉತ್ತರ ಬಡಾವಣೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ 2023-24ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಹಾಗೂ ವಿವೇಕಾ ಶಾಲಾ ಕೊಠಡಿ ಉದ್ಘಾಟಿಸಿ ಮಾತನಾಡಿದ ಅವರು, ಬೇರೆ ದೇಶಗಳಿಗೆ ಹೊಲಿಕೆ ಮಾಡಿದರೆ ಭಾರತದಲ್ಲಿ 12ರಿಂದ 40ವರ್ಷ ವಯಸ್ಸಿನ ಯುವ ಮಾನವ ಸಂಪನ್ಮೂಲ ಹೆಚ್ಚಾಗಿದೆ. ಇದು ದೇಶದ ಅಭಿವೃದ್ಧಿಯಲ್ಲಿ ಸಮರ್ಥವಾಗಿ ಬಳಕೆಯಾಗಬೇಕೆಂದರೆ, ಶಿಕ್ಷಣದ ಜೊತೆ ಜೊತೆಗೆ, ಅವರಿಗೆ ಇಂದಿನ ಅವಶ್ಯಕತೆಗೆ ಅನುಗುಣವಾಗಿ ಕೌಶಲ್ಯವನ್ನು ಕಲಿಸಿದಾಗ ಮಾತ್ರ ಸಾಧ್ಯ ಎಂದರು.ಉತ್ತರ ಬಡಾವಣೆ ಶಾಲೆ ನಗರದ ಪ್ರತಿಷ್ಠಿತ ಸರ್ಕಾರಿ ಶಾಲೆಗಳಲ್ಲಿ ಒಂದಾಗಿದೆ. ಸುಮಾರು 260ಕ್ಕು ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ. ಇಲ್ಲಿನ ಎಸ್.ಡಿ.ಎಂ.ಸಿ ಅಧ್ಯಕ್ಷರು ಮತ್ತು ಸದಸ್ಯರು, ಶಾಲೆಯ ಶಿಕ್ಷಕರು ಮತ್ತು ಮಕ್ಕಳ ಪೋಷಕ ರೊಂದಿಗೆ ನಿಕಟವಾದ ಸಂಪರ್ಕವನ್ನು ಇಟ್ಟುಕೊಂಡು ಪ್ರತಿ ಹಂತದಲ್ಲಿಯೂ ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಶಾಲಾಭಿವೃದ್ಧಿ ಸಮಿತಿಯ ಬೇಡಿಕೆಯಂತೆ ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲೆಯಲ್ಲಿ ಎಲ್‌ಕೆಜಿ ತೆರೆಯಲು ಇಲಾಖೆ ಅವಕಾಶ ನೀಡಬೇಕು ಎಂದು ಸ್ಥಳದಲ್ಲಿದ್ದ ಬಿಇಒ ಅವರಿಗೆ ತಿಳಿಸಿದರು.
ತುಮಕೂರು ನಗರಕ್ಕೆ ಸಮೀಪದ ವಸಂತನರಸಾಪುರದಲ್ಲಿ ದೇಶದ ಎರಡನೇ ಅತಿ ದೊಡ್ಡ ಕೈಗಾರಿಕಾ ಪ್ರದೇಶ ನಿರ್ಮಾಣವಾಗುತ್ತಿದೆ. ಇಲ್ಲಿ ಕಲಿಯುವ ಮಕ್ಕಳು ಕೈಗಾರಿಕೆಗಳಲ್ಲಿ ಒಳ್ಳೆಯ ಹುದ್ದೆಯನ್ನು ಪಡೆಯುವಂತಹ ವಾತಾವರಣ ಸೃಷ್ಟಿಯಾಗಬೇಕು. ಕಳೆದ ಐದು ವರ್ಷಗಳ ಕಾಲ ಈ ಶಾಲೆಗೆ ಮೊದಲ ಅದ್ಯತೆ ನೀಡಿದ್ದು, ಮುಂದಿನ ಐದು ವರ್ಷಗಳ ಕಾಲವೂ ಶೈಕ್ಷಣಿಕ ವಿಚಾರಗಳಿಗೆ ನಮ್ಮ ಅನುದಾನದಲ್ಲಿ ಮೊದಲ ಅದ್ಯತೆ ಇದೆ. ಹಾಗಾಗಿ ಶಿಕ್ಷಕರು, ಪೋಷಕರು ಮಕ್ಕಳ ಏಳಿಗೆಗೆ ಶ್ರಮಿಸುವಂತೆ ಶಾಸಕ ಜಿ.ಬಿ. ಜೋತಿಗಣೇಶ್ ನುಡಿದರು.ಡಿಡಿಪಿಐ ರಂಗಧಾಮಯ್ಯ ಮಾತನಾಡಿ, ಶಿರಾ ಗೇಟ್‌ನ ಈ ಶಾಲೆ ಖಾಸಗಿ ಶಾಲೆಗಳಿಗೆ ಪೈಪೊಟಿ ನೀಡುವಂತೆ ಬೆಳೆದು ನಿಂತಿದೆ. ಸರ್ಕಾರಿ ಶಾಲೆಗಳು ಅಂಕಗಳಿಗೆ ಬದಲಾಗಿ ಮಕ್ಕಳು ಬದುಕಿನಲ್ಲಿ ಉಂಟಾಗುವ ಸವಾಲುಗಳನ್ನು ಎದುರಿಸಲು ಅಗತ್ಯ ಶಿಕ್ಷಣ ನೀಡಲಾಗುತ್ತಿದೆ. ಕೇವಲ ಗಿಳಿಪಾಠಕ್ಕೆ ಮಕ್ಕಳನ್ನು ಸಿಮೀತಗೊಳಿಸದೆ, ಮಕ್ಕಳ ಸರ್ವಾಗೀಣ ಅಭಿವೃದ್ಧಿ ಸರ್ಕಾರಿ ಶಾಲೆಗಳ ಗುರಿಯಾಗಿದೆ. ಇಲಾಖೆ, ಪೋಷಕರು ಮತ್ತು ಶಿಕ್ಷಕರು ಸೇರಿ ಮಕ್ಕಳ ಭವಿಷ್ಯವನ್ನು ರೂಪಿಸಬೇಕಾಗಿದೆ. ಇಲ್ಲಿನ ಎಸ್.ಡಿ.ಎಂ.ಸಿ ಕೋರಿಕೆಯಂತೆ ಮುಂದಿನ ಶೈಕ್ಷಣಿಕ ವರ್ಷದಿಂದ ಸದರಿ ಶಾಲೆಯಲ್ಲಿ ಎಲ್.ಕೆ.ಜಿ. ಅರಂಭಿಸಲು ಅನುಮೋದನೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಬಿಇಓ ಡಾ. ಸೂರ್ಯಕಲಾ ಮಾತನಾಡಿ, ಶಿಕ್ಷಣವೆಂದರೆ ಶಿಸ್ತು, ಸಂಸ್ಕಾರ, ಸಂಸ್ಕೃತಿಯನ್ನು ಕಲಿಸುವುದು. ಹಾಗಾಗಿ ಸರ್ಕಾರಿ ಶಾಲೆಗಳಲ್ಲಿ ಪಠ್ಯದ ಜೊತೆಗೆ, ಪಠ್ಯೇತರ ಚಟುವಟಿಕೆಗಳಲ್ಲಿಯೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹಿಸಲಾಗುತ್ತಿದೆ. ಶಿರಾಗೇಟ್‌ನ ಈ ಶಾಲೆಯ ಮಕ್ಕಳು ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಂಚೂಣಿಯಲ್ಲಿದ್ದು, ಒಳ್ಳೆಯ ಪ್ರಜೆಗಳಾಗಿ ರೂಪಗೊಳ್ಳುತ್ತಿದ್ದಾರೆ. ಮಕ್ಕಳು ಭೌತಿಕವಾಗಿ ಮತ್ತು ಭೌದ್ಧಿಕವಾಗಿ ಅಭಿವೃದ್ಧಿ ಹೊಂದುತ್ತಾ, ದೈಹಿಕ ಮತ್ತು ಮಾನಸಿಕ ಸ್ವಾಥ್ಯವನ್ನು ಕಾಪಾಡಿಕೊಂಡಿದ್ದಾರೆ. ಮುಂದಿನ ವರ್ಷದಿಂದ ಎಲ್.ಕೆ.ಜಿ. ಆರಂಭವಾಗುತ್ತಿದ್ದು, ಶಿಕ್ಷಕರು ತಯಾರಾಗುವಂತೆ ಸಲಹೆ ನೀಡಿದರು.ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆ ಶಿರಾಗೇಟ್‌ನ ಪದವಿಧರ ಮುಖ್ಯಶಿಕಕ ಟಿ.ಎನ್.ಶಿ ವಸ್ವಾಮಿ, ನಗರಪಾಲಿಕೆ ಎರಡನೇ ವಾರ್ಡಿನ ಸದಸ್ಯ ಮಂಜುನಾಥ್, ಎಸ್.ಡಿ.ಎಂ.ಸಿ.ಅಧ್ಯಕ್ಷ ಪ್ರಸನ್ನಕುಮಾರ್ ಟಿ.ಜಿ. ಮಾತನಾಡಿದರು. ವೇದಿಕೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತುಮಕೂರು ತಾಲೂಕು ಅಧ್ಯಕ್ಷ ತಿಮ್ಮೇಗೌಡ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಟಿ. ಓಬಯ್ಯ, ಪ್ರಭಾರ ಮುಖ್ಯಶಿಕ್ಷಕ ನವೀನಕುಮಾರ್, ಡಯಟ್ ಪ್ರಾಂಶುಪಾಲರಾದ ತಿಮ್ಮರಾಜು, ಸೇರಿದಂತೆ ಶಾಲೆಯ ಎಸ್.ಡಿ.ಎಂ.ಸಿ ಸದಸ್ಯರು, ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಫೋಟೊನಗರದ ಉತ್ತರ ಬಡಾವಣೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವೇಕಾ ಶಾಲಾ ಕೊಠಡಿಯನ್ನು ಶಾಸಕ ಜ್ಯೋತಿಗಣೇಶ್ ಉದ್ಘಾಟಿಸಿದರು.