ಸಾರಾಂಶ
ಭಗವತಿ ಕಾಲೋನಿಯ ಶ್ರೀ ಮಾರಿಯಮ್ಮ ದೇವಾಲಯದಲ್ಲಿ ಕಾವೇರಿ ತೀರ್ಥೋದ್ಭವದ ಮರುದಿನ ಉತ್ಸವವು ಶ್ರದ್ಧಾ ಭಕ್ತಿಯಿಂದ ನೆರವೇರಿತು. ಅಧಿಕ ಸಂಖ್ಯೆಯ ಭಕ್ತರು ಪಾಲ್ಗೊಂಡರು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಪ್ರತಿ ವರ್ಷ ಕಾವೇರಿ ಜಾತ್ರೆ ಜಿಲ್ಲೆಯ ಭಕ್ತರಿಗೆ ಸಂಭ್ರಮೋಲ್ಲಾಸಗಳನ್ನು ತರುವ ದಿನ. ಆ ದಿನ ತಲಕಾವೇರಿಗೆ ತೆರಳಲಾರದ ಭಕ್ತರು ಗ್ರಾಮದ ದೇವಾಲಯಗಳಿಗೆ ತೆರಳಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ. ಸಮೀಪದ ಹೊದ್ದೂರು ಗ್ರಾಮದ ಭಗವತಿ ಕಾಲೋನಿಯ ಶ್ರೀ ಮಾರಿಯಮ್ಮ ದೇವಾಲಯದಲ್ಲಿ ಕಾವೇರಿ ತೀರ್ಥೋದ್ಭವದ ಮರುದಿನ ಉತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು.ಅಧಿಕ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ಕಾವೇರಿ ಜಾತ್ರೆಯ ಮರುದಿನ ಬಲಮುರಿಯಲ್ಲಿ ಇತಿಹಾಸ ಪ್ರಸಿದ್ಧ ವಾರ್ಷಿಕ ಜಾತ್ರೆ ನಡೆಯುತ್ತದೆ. ಸಮೀಪದ ಹೊದ್ದೂರಿನ ಮಾರಿಯಮ್ಮ ದೇವಾಲಯದಲ್ಲೂ ಭಕ್ತರು ಪಾಲ್ಗೊಂಡು ಉತ್ಸವವನ್ನು ವಿಭಿನ್ನವಾಗಿ ಆಚರಿಸುತ್ತಾರೆ. ಇಲ್ಲಿ ಭಕ್ತರಿಗೆ ದೇವರ ದರ್ಶನ ಬಂದು ನರ್ತಿಸುತ್ತಾರೆ. ಅನಂತರ ಆಗಮಿಸಿದ ಭಕ್ತಾದಿಗಳ ಸಂಕಷ್ಟಗಳನ್ನು ಕೇಳಿ ಸೂಕ್ತ ಪರಿಹಾರ ನೀಡಿ ಆಶೀರ್ವದಿಸುತ್ತಾರೆ. ಇಲ್ಲಿ ಬಂದ ಭಕ್ತಾದಿಗಳ ಯಾವುದೇ ಸಮಸ್ಯೆ ಇದ್ದರು ಪರಿಹರಿಸುವ
ಶಕ್ತಿ ಇಲ್ಲಿ ಇದೆ ಎಂದು ಭಕ್ತಾದಿಗಳ ನಂಬಿಕೆಯಾಗಿದೆ.ಉತ್ಸವದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ದೇವಾಲಯದಲ್ಲಿ ನೆರವೇರಿ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಈ ಸಂದರ್ಭ ದೇವಾಲಯದ ತಕ್ಕ ಮುಖ್ಯಸ್ಥರು ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಶ್ರದ್ಧಾ ಭಕ್ತಿಯಿಂದ ಭಾಗವಹಿಸಿದ್ದರು.
ದೇವಾಲಯದ ಅಧ್ಯಕ್ಷ ಬಾಬು ಮಾತನಾಡಿ ಭಾಗಮಂಡಲ ಮತ್ತು ತಲಕಾವೇರಿ ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರಗಳು. ಅಲ್ಲಿ ತೀರ್ಥೋದ್ಭವದ ಬಳಿಕ ಹಲವು ದೇವಾಲಯಗಳಲ್ಲಿ ಉತ್ಸವಗಳು ಜರುಗುತ್ತವೆ. ಮಾರಿಯಮ್ಮ ದೇವಾಲಯದಲ್ಲಿ ವರ್ಷಂ ಪ್ರತಿ ಉತ್ಸವ ಆಚರಿಸುತ್ತೇವೆ. ಈ ದಿನ ಭಕ್ತರಿಗೆ ದೇವರ ದರ್ಶನ ಬರುತ್ತದೆ ವಿವಿಧ ಪೂಜಾ ಕಾರ್ಯಗಳನ್ನು ನೆರವೇರಿಸಲಾಗುತ್ತದೆ ಎಂದರು.