ಸಾರಾಂಶ
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ. 73.52ರಷ್ಟು ಮತದಾನವಾಗಿದೆ. 2019ರಲ್ಲಿ ನಡೆದ ಚುನಾವಣೆಯಲ್ಲಿ 74.07ರಷ್ಟು ಮತದಾನವಾಗಿತ್ತು. ಜಿಲ್ಲೆಯ 5 ಕಡೆಗಳಲ್ಲಿ ಮತಯಂತ್ರ ಕೈಕೊಟ್ಟಿತ್ತು. ನಂತರ ಸರಿಪಡಿಸಲಾಯಿತು. ಮುಂಡಗೋಡ ಬಸಾಪುರ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿದರು. ಅಂಕೋಲಾದ ಹಿಚ್ಕಡ ಕೂರ್ವೆ ದ್ವೀಪದ ಮತಗಟ್ಟೆಯಲ್ಲಿ ಜನತೆ ದೋಣಿಯಲ್ಲಿ ತೆರಳಿ ಮತದಾನ ಮಾಡಿದರು.
ಕಾರವಾರ ನಗರದ ಮತಗಟ್ಟೆ 107ರಲ್ಲಿ ಇವಿಎಂ ಕೈಕೊಟ್ಟಿದ್ದರಿಂದ ಸುಮಾರು ಒಂದೂವರೆ ಗಂಟೆ ತಡವಾಗಿ ಮತದಾನ ಆರಂಭವಾಯಿತು. ನೂರಾರು ಮತದಾರರು ಕಾಯುವಂತಾಯಿತು. ಈ ಅವಾಂತರದ ಬಗ್ಗೆ ವರದಿ ಮಾಡಲು ತೆರಳಿದ ಮಾಧ್ಯಮ ಪ್ರತಿನಿಧಿಗಳ ಕರ್ತವ್ಯಕ್ಕೂ ಅಧಿಕಾರಿಗಳು ಅಡ್ಡಿ ಪಡಿಸಿದರು.ತಾಲೂಕಿನ ಶಿರವಾಡ ಮತಗಟ್ಟೆಯಿಂದ ಮತಯಂತ್ರ ಕೆಲಸ ಮಾಡದೆ ಇದ್ದುದರಿಂದ ಮತದಾರರು ಸುಮಾರು ಒಂದೂವರೆ ಗಂಟೆ ಸರದಿಯಲ್ಲಿ ನಿಂತು ಕಾಯಬೇಕಾಯಿತು. ಆನಂತರ ಮತಯಂತ್ರ ಸರಿಪಡಿಸಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು.
ಶಿರಸಿಯ ಆವೆಮೇರಿಯಾ ಶಾಲೆಯ ಮತಗಟ್ಟೆ ಸಂಖ್ಯೆ 74ರಲ್ಲಿ 38 ಮತಗಳ ಚಲಾವಣೆ ನಂತರ ಮತಯಂತ್ರ ಕೈಕೊಟ್ಟಿತು. ಒಂದು ಗಂಟೆ ನಂತರ ಮತಯಂತ್ರ ಸರಿಪಡಿಸಿ ಮತದಾನ ಮುಂದುವರಿಯಿತು. ಯಲ್ಲಾಪುರ ಹಾಗೂ ಕಿತ್ತೂರಿನ ತಲಾ ಒಂದು ಮತಗಟ್ಟಯಲ್ಲಿ ಇವಿಎಂನಲ್ಲಿ ದೋಷಕಾಣಿಸಿ ಕೆಲ ಸಮಯ ಮತದಾನ ಸ್ಥಗಿತಗೊಂಡಿತ್ತು.ಮತದಾನಕ್ಕೆ ಬಹಿಷ್ಕಾರ:
ಮುಂಡಗೋಡ ಬಸಾಪುರ ಗ್ರಾಮಸ್ಥರು ಪ್ರತ್ಯೇಕ ಮತಗಟ್ಟೆ ಹಾಗೂ ಗ್ರಾಮಕ್ಕೆ ವಿವಿಧ ಸೌಲಭ್ಯಕ್ಕಾಗಿ ಆಗ್ರಹಿಸಿ ಮತದಾನ ಬಹಿಷ್ಕರಿಸಿದ್ದರು. ತಹಸೀಲ್ದಾರ್ ಮನವೊಲಿಕೆಯ ನಂತರವೂ ಮಧ್ಯಾಹ್ನ 2 ಗಂಟೆಯ ತನಕ ಬಸಾಪುರದ ಯಾರೊಬ್ಬರೂ ಮತದಾನದಲ್ಲಿ ಭಾಗವಹಿಸಲಿಲ್ಲ. ತಮ್ಮ ಬೇಡಿಕೆ ಈಡೇರಿಕೆಗಾಗಿ ಪಟ್ಟುಹಿಡಿದು ಕುಳಿತರು.ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಶಿರಸಿಯ ಕುಳವೆ ಮತಗಟ್ಟೆಯಲ್ಲಿ ಮಧ್ಯಾಹ್ನ 11 ಗಂಟೆಗೆ ಮತದಾನ ಮಾಡಿದರೆ, ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಖಾನಾಪುರದಲ್ಲಿ ಬೆಳಗ್ಗೆ 9 ಗಂಟೆಗೆ ಮತದಾನ ಮಾಡಿದರು. ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಹಳಿಯಾಳದಲ್ಲಿ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಕಾರವಾರದ ಚೆಂಡಿಯಾ ಮತಗಟ್ಟೆಯಲ್ಲಿ ಮತದಾನ ಮಾಡಿದರು.
ಸಂಸದ ಅನಂತಕುಮಾರ ಹೆಗಡೆ ಶಿರಸಿಯಲ್ಲಿ, ಉಸ್ತುವಾರಿ ಸಚಿವ ಮಂಕಾಳ ವೈದ್ಯ ಭಟ್ಕಳದಲ್ಲಿ, ಕುಮಟಾ ಶಾಸಕರ ದಿನಕರ ಶೆಟ್ಟಿ ಕುಮಟಾದಲ್ಲಿ, ಶಿರಸಿ ಶಾಸಕ ಭೀಮಣ್ಣ ನಾಯ್ಕ ಶಿರಸಿಯಲ್ಲಿ, ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅರಬೈಲಿನಲ್ಲಿ ಮತದಾನ ಮಾಡಿದರು.ವೃದ್ಧರು, ವಿಶೇಷ ಚೇತನರು, ಅನಾರೋಗ್ಯದಿಂದ ಇರುವವರೂ ಮತದಾನ ಮಾಡಿದ್ದು ವಿಶೇಷವಾಗಿತ್ತು. ಮತದಾನ ಪ್ರಮಾಣ...
ಬೆಳಗ್ಗೆ 9 ಗಂಟೆಗೆ ಶೇ. 11.42ರಷ್ಟು ಮತದಾನ ಆಗಿತ್ತು. ಬೆಳಗ್ಗೆ 11 ಗಂಟೆಗೆ ಶೇ. 28.19ರಷ್ಟು ಮತದಾನವಾದರೆ, ಮಧ್ಯಾಹ್ನ 1 ಗಂಟೆ ವೇಳೆಗೆ ಶೇ. 43.31ರಷ್ಟು ಆಯಿತು. ಮಧ್ಯಾಹ್ನ 3 ಗಂಟೆ ವೇಳೆಗೆ ಮತದಾನದ ಪ್ರಮಾಣ ಶೇ. 57.05ಕ್ಕೇರಿತು. ಸಂಜೆ 5 ಗಂಟೆ ವೇಳೆಗೆ ಮತದಾನದ ಪ್ರಮಾಣ ಶೇ. 70.61ಕ್ಕೇರಿತು.