ಮುಂಗಾರು ಮಳೆಗೆ ನಲುಗಿದ ಉತ್ತರ ಕನ್ನಡ

| Published : Oct 16 2024, 12:40 AM IST

ಸಾರಾಂಶ

ಮುಂಗಾರು ಮಳೆಗೆ ಮನೆ, ಜಾನುವಾರು, ಗೃಹೋಪಯೋಗಿ ವಸ್ತು, ತೋಟಗಾರಿಕೆ, ಕೃಷಿ ಬೆಳೆಗಳು ಹಾನಿಗೊಳಗಾಗಿದೆ. ಒಟ್ಟೂ ೨೭೮ ಮನೆಗಳು ಸಂಪೂರ್ಣ ಹಾನಿಗೊಳಗಾಗಿದ್ದು, ₹೩.೩೩ ಕೋಟಿ ಮೊತ್ತವಾಗಿದೆ.

ಕಾರವಾರ: ಜಿಲ್ಲೆಯಲ್ಲಿ ಕಳೆದ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಸುರಿದ ಭಾರಿ ಮಳೆಯಿಂದಾಗಿ ಸಾಕಷ್ಟು ಹಾನಿಯಾಗಿದ್ದು, ಕೋಟ್ಯಂತರ ರುಪಾಯಿ ನಷ್ಟವಾಗಿದೆ. ಮಾನವ, ಜಾನುವಾರು ಮೃತಪಟ್ಟಿರುವುದಕ್ಕೆ ನೀಡಿರುವ ಪರಿಹಾರ ಮೊತ್ತವೇ ಕೋಟಿಯಾಗಿದೆ.

ಮನೆ, ಜಾನುವಾರು, ಗೃಹೋಪಯೋಗಿ ವಸ್ತು, ತೋಟಗಾರಿಕೆ, ಕೃಷಿ ಬೆಳೆಗಳು ಹಾನಿಗೊಳಗಾಗಿದೆ. ಒಟ್ಟೂ ೨೭೮ ಮನೆಗಳು ಸಂಪೂರ್ಣ ಹಾನಿಗೊಳಗಾಗಿದ್ದು, ₹೩.೩೩ ಕೋಟಿ ಮೊತ್ತವಾಗಿದೆ. ಶೇ. ೫೦ರಿಂದ ೭೫ರಷ್ಟು ೧೦೫ ಮನೆಗಳು ಹಾನಿಯಾಗಿದ್ದು, ₹೪೮ ಲಕ್ಷ, ಶೇ. ೨೦ರಿಂದ ೫೦ರಷ್ಟು ೪೬೨ ಮನೆಗಳು ಹಾನಿಯಾಗಿದ್ದು, ₹೧.೨೮ ಕೋಟಿ, ಶೇ. ೧೫ರಿಂದ ೨೦ರಷ್ಟು ೫೪೩ ಮನೆಗಳು ಹಾನಿಯಾಗಿದ್ದು, ₹೩೨.೪೩ ಲಕ್ಷ, ೭೪ ಮನೆಗಳಿಗೆ ಚಿಕ್ಕಪುಟ್ಟ ಹಾನಿಯಾಗಿದ್ದು, ₹೨.೯೬ ಲಕ್ಷ ಪರಿಹಾರವನ್ನು ನೀಡಲಾಗಿದೆ.

ಹಾನಿಗೊಳಗಾದ ಗೃಹಬಳಕೆ ವಸ್ತುಗಳಿಗಾಗಿ ₹೭೬.೭೨ ಲಕ್ಷ ಪರಿಹಾರ ವಿತರಣೆಯಾಗಿದೆ. ಮುಂಗಾರಿನ ಅವಧಿಯಲ್ಲಿ ಬೆಳೆಹಾನಿ ಸಾಕಷ್ಟು ಆಗಿದ್ದು, ಕೃಷಿ ೯೮೧.೧೯೮ ಹೆಕ್ಟೇರ್, ತೋಟಗಾರಿಕೆ ೬೮.೬೨ ಹೆಕ್ಟೇರ್ ಹಾನಿಯಾಗಿದೆ. ೨೧ ಜನರು ಮೃತಪಟ್ಟಿದ್ದು, ₹೯೫ ಲಕ್ಷ, ೩೧ ಜಾನುವಾರು ಮೃತಪಟ್ಟಿದ್ದು, ₹೮.೧೬ ಲಕ್ಷ ಪರಿಹಾರ ನೀಡಲಾಗಿದೆ. ತಾಲೂಕಾವಾರು: ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತದಲ್ಲಿ ೧೧ ಜನ, ಭಟ್ಕಳದಲ್ಲಿ ಒಬ್ಬರು, ಹೊನ್ನಾವರ, ಕಾರವಾರ ತಲಾ ೩, ಸಿದ್ದಾಪುರ, ಯಲ್ಲಾಪುರ, ಶಿರಸಿಯಲ್ಲಿ ತಲಾ ಒಬ್ಬರು, ಅಂಕೋಲಾದಲ್ಲಿ ಕರು, ಹಳಿಯಾಳ ಮೂರು ಆಕಳು, ಹೊನ್ನಾವರದಲ್ಲಿ ೨ ಆಕಳು, ಒಂದು ಕರು, ಕಾರವಾರದಲ್ಲಿ ಒಂದು ಆಕಳು, ಮುಂಡಗೋಡಿನಲ್ಲಿ ೫ ಮೇಕೆ, ೧ ಎತ್ತು, ೧ ಆಕಳು, ಒಂದು ಎಮ್ಮೆ, ಸಿದ್ದಾಪುರ ೨ ಕರು, ಶಿರಸಿಯಲ್ಲಿ ಎರಡು ಆಕಳು, ೧ ಎತ್ತು, ಜೋಯಿಡಾದಲ್ಲಿ ನಾಲ್ಕು ಆಕಳು, ಯಲ್ಲಾಪುರದಲ್ಲಿ ೪ ಎಮ್ಮೆ, ೨ ಆಕಳು ಮೃತಪಟ್ಟಿವೆ. ಒಟ್ಟೂ ಸೇರಿ ₹೧.೦೩ ಕೋಟಿ ಪರಿಹಾರ ನೀಡಿದಂತಾಗಿದೆ. ಅಂಕೋಲಾದಲ್ಲಿ ೨೩, ಭಟ್ಕಳದಲ್ಲಿ ೫೭, ಹಳಿಯಾಳ ೯, ಹೊನ್ನಾವರ ೩೩, ಕಾರವಾರ ೨೨, ಕುಮಟಾ ೩೫, ಮುಂಡಗೋಡ ೨೪, ಸಿದ್ದಾಪುರ ೧೪, ಶಿರಸಿ ೨೩, ಜೋಯಿಡಾ ೮, ಯಲ್ಲಾಪುರ ೧೯, ದಾಂಡೇಲಿ ೧೧ ಮನೆಗಳಿಗೆ ಸಂಪೂರ್ಣ ಹಾನಿಯಾಗಿದೆ. ಅಂಕೋಲಾ ೯, ಭಟ್ಕಳ ೮, ಹಳಿಯಾಳ ೯, ಹೊನ್ನಾವರ ೧೬, ಕಾರವಾರ ೧, ಕುಮಟಾ ೨೫, ಮುಂಡಗೋಡ ೬, ಸಿದ್ದಾಪುರ ೫, ಶಿರಸಿ ೨೨, ಜೋಯಿಡಾ ೧, ಯಲ್ಲಾಪುರ ೩ ಮನೆಗಳಿಗೆ ಶೇ. ೫೦ಕ್ಕಿಂತ ಹೆಚ್ಚು ಹಾನಿಯಾಗಿದೆ.

ಕೆಲವೆಡೆ ಭಾರಿ ಮಳೆ, ಮೀನುಗಾರಿಕೆ ಸ್ಥಗಿತ

ಕಾರವಾರ: ಜಿಲ್ಲೆಯ ಕೆಲವೆಡೆ ಮಂಗಳವಾರ ಗುಡುಗು, ಮಿಂಚಿನೊಂದಿಗೆ ಭಾರಿ ಮಳೆ ಸುರಿದಿದೆ. ಹಠಾತ್ ಉಂಟಾದ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಯಿತು.

ಕಾರವಾರ, ಅಂಕೋಲಾ, ಯಲ್ಲಾಪುರ, ಜೋಯಿಡಾ, ಮುಂಡಗೋಡ, ಶಿರಸಿ ಮತ್ತಿತರ ಕಡೆಗಳಲ್ಲಿ ಭಾರಿ ಮಳೆಯಾಗಿದೆ. ಉಳಿದೆಡೆ ಸಾಧಾರಣ ಮಳೆಯಾಗಿದೆ.ಕಾರವಾರದಲ್ಲಿ ಸಂಜೆ 4 ಗಂಟೆ ಸುಮಾರಿಗೆ ಹಠಾತ್ ಮೋಡ ಕವಿದು ಗುಡುಗು, ಮಿಂಚಿನೊಂದಿಗೆ ಒಂದು ಗಂಟೆ ಕಾಲ ಭಾರಿ ಮಳೆ ಬಿದ್ದಿದೆ. ಹಠಾತ್ ಗುಡುಗು, ಮಿಂಚು ಮಳೆ ಆರಂಭವಾಗುತ್ತಿದ್ದಂತೆ ಪೇಟೆ, ಪಟ್ಟಣಗಳಲ್ಲಿದ್ದ ಜನತೆ ಅಂಗಡಿ ಮಳಿಗೆಗಳಲ್ಲಿ ಆಶ್ರಯ ಪಡೆದರು. ವಿದ್ಯುತ್ ಕೈಕೊಟ್ಟಿತು.ವಾಯುಭಾರ ಕುಸಿತದ ಹಿನ್ನೆಲೆ ಮಂಗಳವಾರದಿಂದ ಅ.19ರ ತನಕ ರಾಜ್ಯದ ಕರಾವಳಿಯಲ್ಲಿ 35- 45 ಕಿಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ. ಇದರಿಂದ ಮೀನುಗಾರರು ಬೋಟ್‌ಗಳೊಂದಿಗೆ ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಲಾಗಿದೆ. ಬಹುತೇಕ ಬೋಟ್‌ಗಳು ಮೀನುಗಾರಿಕೆ ಬಂದರಿನತ್ತ ದೌಡಾಯಿಸಿವೆ.