ಶಿವಮಯವಾದ ಉತ್ತರ ಕನ್ನಡ

| Published : Feb 27 2025, 12:32 AM IST

ಸಾರಾಂಶ

ಶಿವನಿಗಾಗಿ ಗೋಕರ್ಣದಲ್ಲಿ ಅಪಾರ ಭಕ್ತರು ರಾತ್ರಿಯಿಡೀ ಸರದಿಯಲ್ಲಿ ಕಾದರು. ಮುರ್ಡೇಶ್ವರನಿಗಾಗಿ ಎಲ್ಲೆಲ್ಲಿಂದಲೋ ಬಂದರು.

ಕಾರವಾರ: ಶಿವನಿಗಾಗಿ ಗೋಕರ್ಣದಲ್ಲಿ ಅಪಾರ ಭಕ್ತರು ರಾತ್ರಿಯಿಡೀ ಸರದಿಯಲ್ಲಿ ಕಾದರು. ಮುರ್ಡೇಶ್ವರನಿಗಾಗಿ ಎಲ್ಲೆಲ್ಲಿಂದಲೋ ಬಂದರು. ಸಾವಿರಾರು ಜನರು ಯಾಣದ ಕಡಿದಾದ ಗುಡ್ಡ ಏರಿದರು. ಅದೆಷ್ಟೋ ಜನರು ಕವಳೇಶ್ವರನಿಗಾಗಿ ಕಾಲ್ನಡಿಗೆಯಲ್ಲಿ 4-5 ಕಿ.ಮೀ.ಕ್ರಮಿಸಿದರು. ದೇವರ ದರ್ಶನ, ಪೂಜೆ ಸಲ್ಲಿಸಿ ಧನ್ಯರಾದರು. ಉತ್ತರ ಕನ್ನಡ ಬುಧವಾರ ಶಿವಮಯವಾಗಿತ್ತು.

ಶಿವರಾತ್ರಿ ಆಚರಣೆಗಾಗಿ ಉತ್ತರ ಕನ್ನಡ ಜಿಲ್ಲೆಯ ಶಿವತಾಣಗಳಿಗೆ ಭಕ್ತರು ತಂಡೋಪತಂಡವಾಗಿ ಆಗಮಿಸಿದರು. ಅದರಲ್ಲೂ ಗೋಕರ್ಣ, ಮುರ್ಡೇಶ್ವರಗಳಲ್ಲಿ ಭಕ್ತರ ಮಹಾಪೂರವೇ ಹರಿದುಬಂತು.

ಗೋಕರ್ಣದಲ್ಲಿ ಸಮುದ್ರ, ಕೋಟಿತೀರ್ಥದಲ್ಲಿ ಸ್ನಾನ ಮಾಡಿ ಆತ್ಮಲಿಂಗಕ್ಕೆ ಅಭಿಷೇಕ, ಪೂಜೆ ಸಲ್ಲಿಸಿದರು. ಮಂಗಳವಾರ ರಾತ್ರಿಯಿಡೀ ಸರದಿಯಲ್ಲಿ ನಿಂತು ಆತ್ಮಲಿಂಗದ ದರ್ಶನ ಪಡೆದರು. ಉತ್ತರ ಕರ್ನಾಟಕ, ರಾಜ್ಯದ ಇತರೆಡೆಗಳಿಂದ, ಮಹಾರಾಷ್ಟ್ರ, ಗುಜರಾತ, ಗೋವಾಗಳಿಂದಲೂ ಭಕ್ತರು ಆಗಮಿಸಿ ಮಹಾಬಲೇಶ್ವರದ ದರ್ಶನ ಪಡೆದರು. ಮಹಾಗಣಪತಿ ದೇವಾಲಯ, ತಾಮ್ರಗೌರಿ, ಮುಖ್ಯ ಕಡಲತೀರ, ರಥ ಬೀದಿ, ಕೋಟಿತೀರ್ಥ ಹೀಗೆ ಎಲ್ಲೆಂದರಲ್ಲಿ ಜನಜಂಗುಳಿ ಕಂಡುಬಂತು.

ಮುರ್ಡೇಶ್ವರ ಕಡಲತೀರ ಹಾಗೂ ದೇವಾಲಯಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು. ಸಮುದ್ರ ಸ್ನಾನ ಮಾಡಿ ದೇವರ ದರ್ಶನ ಪಡೆದು, ಪೂಜೆ ಸಲ್ಲಿಸಿದರು. ನಾಡಿನ ವಿವಿಧೆಡೆಯಿಂದ ಜನತೆ ಆಗಮಿಸಿರುವುದು ಕಂಡುಬಂತು.

ಪಂಚಲಿಂಗಗಳಾದ ಗೋಕರ್ಣ, ಮುರ್ಡೇಶ್ವರ, ಗುಣವಂತೆ ಶಂಭುಲಿಂಗೇಶ್ವರ, ಕಾರವಾರದ ಸಜ್ಜೇಶ್ವರ, ಧಾರೇಶ್ವರ ದೇವಾಲಯಗಳಲ್ಲಿ ಸಾವಿರಾರು ಜನರು ಶ್ರದ್ಧೆ, ಭಕ್ತಿಯಿಂದ ಪೂಜೆ ನೆರವೇರಿಸಿದರು.

ಮುರ್ಡೇಶ್ವರ ಹಾಗೂ ಗೋಕರ್ಣಗಳಲ್ಲಿ ಶಿವರಾತ್ರಿ ಹಿನ್ನೆಲೆಯಲ್ಲಿ ಉತ್ಸವಗಳನ್ನು ಸಂಘಟಿಸಲಾಗಿದ್ದು, ಭಜನೆ, ಶಿವಸ್ತುತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ರಂಜಿಸಿದವು. ಸಹಸ್ರಲಿಂಗ ಹಾಗೂ ಯಾಣಗಳಲ್ಲೂ ಸಾವಿರಾರು ಜನರು ಪೂಜೆ ಸಲ್ಲಿಸಿದರು. ಬನವಾಸಿ ಮಧುಕೇಶ್ವರ, ರಾಮಲಿಂಗೇಶ್ವರ ದೇವಾಲಯ, ಕವಳಾಗುಹೆಗಳಲ್ಲೂ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂಜೆ ಸಲ್ಲಿಸಿದರು. ಕಾರವಾರದ ಬಾಡ ಮಹಾದೇವ ದೇವಾಲಯ, ಕಾಲರುದ್ರೇಶ್ವರ ದೇವಾಲಯಗಳಲ್ಲೂ ಬೆಳಗ್ಗೆಯಿಂದಲೆ ಪೂಜೆ ಆರಂಭವಾಯಿತು.

ಶಿವರಾತ್ರಿ ಹಿನ್ನೆಲೆಯಲ್ಲಿ ಮನೆ ಮನೆಯಲ್ಲೂ ಸಂಭ್ರಮ ಮನೆ ಮಾಡಿತ್ತು. ಜನತೆ ಶ್ರದ್ಧಾ, ಭಕ್ತಿಯಿಂದ ಶಿವರಾತ್ರಿ ಆಚರಿಸಿದರು.