ಸಾರಾಂಶ
ಕಾರವಾರ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾನದ ಮಹತ್ವ ಕುರಿತಂತೆ ಚುನಾವಣಾ ಜಾಗೃತಿ ಕುರಿತು ಸಿದ್ಧಪಡಿಸಿರುವ ವಿಡಿಯೋದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಲೆ, ಸಂಸ್ಕೃತಿ ಮತ್ತು ಪ್ರವಾಸಿ ತಾಣಗಳನ್ನು ಬಳಸಿಕೊಂಡಿದ್ದು, ಈ ವಿಡಿಯೋಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಸಾರ್ವಜನಿಕರಿಗಾಗಿ ರಾಜ್ಯಾದ್ಯಂತ ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ರಾಜ್ಯ ಚುನಾವಣಾ ಆಯೋಗದಿಂದ ಮತದಾನ ಜಾಗೃತಿಗೆ ವಿಡಿಯೋ ಕೂಡಾ ಮಾಡಲಾಗಿದೆ. ರಾಜ್ಯದಲ್ಲಿ ಏ. 26 ಮತ್ತು ಮೇ 7ರಂದು ನಡೆಯುವ ಚುನಾವಣೆಯಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯಿಂದ ''''ಚುನಾವಣಾ ಪರ್ವ ದೇಶದ ಗರ್ವ'''' ಎಂಬ ಘೋಷವಾಕ್ಯದೊಂದಿಗೆ ಸಿದ್ಧಪಡಿಸಿರುವ ಈ ಜಾಗೃತಿ ವಿಡಿಯೋದಲ್ಲಿ ಜಿಲ್ಲೆಯ ಸಿದ್ದಿ ಜನಾಂಗದ ಮಹಿಳೆಯರು ತಮ್ಮ ವಿಶಿಷ್ಟ ನೃತ್ಯ ಪ್ರಕಾರವಾದ ಡಮಾಮಿ ನೃತ್ಯದ ಮೂಲಕ ಮತ್ತು ಸಂಗೀತದ ಮೂಲಕ ಮತದಾನದ ಮಹತ್ವ ಕುರಿತಂತೆ ಜಾಗೃತಿ ಮೂಡಿಸಿದ್ದಾರೆ.ವಿಡಿಯೋದಲ್ಲಿ ಸಿದ್ದಿ ಸಮುದಾಯದ ಮಹಿಳೆಯರು ತಮ್ಮ ಸಾಂಪ್ರದಾಯಿಕ ವೇಷಭೂಷಣಗಳು ಮತ್ತು ಡಮಾಮಿ ವಾದ್ಯದ ಮೂಲಕ ಲಯಬದ್ಧವಾಗಿ ಮತದಾನ ಜಾಗೃತಿ ಬಗ್ಗೆ ಹಾಡುವ ಮೂಲಕ ಜಿಲ್ಲೆಯ ವಿಶಿಷ್ಟ ಕಲೆಯನ್ನು ರಾಜ್ಯಾದ್ಯಂತ ಸಾರಿದ್ದಾರೆ.
ಅಲ್ಲದೇ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿ ಜಿಲ್ಲೆಗೆ ಗೌರವ ಇಮ್ಮಡಿಗೊಳಿಸಿರುವ ವೃಕ್ಷಮಾತೆ ಎಂದು ಹೆಸರಾದ ತುಳಸಿ ಗೌಡ ಕೂಡಾ ವಿಡಿಯೋದಲ್ಲಿ ರಾಷ್ಟ್ರಧ್ವಜ ಹಿಡಿದು ಮತದಾನದ ಸಂದೇಶ ನೀಡಿದ್ದಾರೆ. ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾದ ಯಾಣದ ಸುಂದರ ದೃಶ್ಯಗಳನ್ನು ವಿಡಿಯೋದಲ್ಲಿ ಅಳವಡಿಸಿದ್ದು, ಯಾಣದಲ್ಲಿ ಯುವಕರೊಬ್ಬರೂ ಮತದಾನ ಮಾಡುವ ಸಂಕೇತ ತೋರಿಸಿದ್ದಾರೆ.ಮತದಾನ ಜಾಗೃತಿ ಕುರಿತಂತೆ ಸಿದ್ಧಪಡಿಸಿರುವ ವಿಡಿಯೋವನ್ನು ಸಿದ್ದಿ ಸಮುದಾಯದವರು ವಾಸಿಸುವ ಹಳಿಯಾಳ ತಾಲೂಕಿನ ಸಾಂಬ್ರಾಣಿ ಗ್ರಾಮದಲ್ಲಿ ಚಿತ್ರೀಕರಿಸಲಾಗಿದ್ದು, ಜೂಲಿಯಾನ ಫೆರ್ನಾಂಡಿಸ್ ನೇತೃತ್ವದಲ್ಲಿ 20ಕ್ಕೂ ಅಧಿಕ ಮಹಿಳೆಯರು ಡಮಾಮಿ ನೃತ್ಯದಲ್ಲಿ ಭಾಗವಹಿಸಿದ್ದು, ಸಿದ್ದಿ ಜನಾಂಗದ ಆಡು ಭಾಷೆಯಲ್ಲಿ ಚುನಾವಣಾ ಜಾಗೃತಿಯ ಸಂದೇಶ ಸಾರಿದ್ದಾರೆ.ಎರಡು ತಿಂಗಳ ಹಿಂದೆ ನಡೆದ ಈ ವೀಡಿಯೋ ಚಿತ್ರೀಕರಣದಲ್ಲಿ ನಮ್ಮ ಸಮುದಾಯದ 20ಕ್ಕೂ ಅಧಿಕ ಮಂದಿ ಮಹಿಳೆಯರು ಭಾಗವಹಿಸಿದ್ದೆವು. ವಿಡಿಯೋ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಮ್ಮ ಸಮುದಾಯದ ಜಾನಪದ ಕಲೆ, ಸಂಸ್ಕೃತಿಯನ್ನು ರಾಜ್ಯ ಚುನಾವಣಾ ಆಯೋಗ ಬಳಸಿಕೊಂಡಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಈ ಮೂಲಕ ರಾಜ್ಯಾದ್ಯಂತ ನಮ್ಮ ವೈಶಿಷ್ಟ್ಯಪೂರ್ಣ ಸಂಸ್ಕೃತಿಯ ಬಗ್ಗೆ ಜನತೆಗೆ ತಿಳಿಯುವಂತಾಗಿದೆ. ನಮಗೆ ತುಂಬಾ ಸಂತೋಷವಾಗಿದೆ ಎಂದು ಡಮಾಮಿ ನೃತ್ಯ ತಂಡದ ನಾಯಕಿ ಜೂಲಿಯಾನ ಫರ್ನಾಂಡಿಸ್ ಹೇಳುತ್ತಾರೆ.