ಉತ್ತರಾದಿ ಮಠದಲ್ಲಿ ಸಂಭ್ರಮದ ರಾಮೋತ್ಸವ - ವಿಜೃಂಭಣೆಯ ಪಲ್ಲಕ್ಕಿ ಸೇವೆ- ದೀಪೋತ್ಸವ

| Published : Jan 24 2024, 02:03 AM IST

ಉತ್ತರಾದಿ ಮಠದಲ್ಲಿ ಸಂಭ್ರಮದ ರಾಮೋತ್ಸವ - ವಿಜೃಂಭಣೆಯ ಪಲ್ಲಕ್ಕಿ ಸೇವೆ- ದೀಪೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಅಗ್ರಹಾರದ ಪ್ರಮುಖ ರಸ್ತೆಗಳಲ್ಲಿ ರಾಮದೇವರ ಪಲ್ಲಕ್ಕಿ ಸಾಗಿತು. ಮಂಗಳವಾದ್ಯಗಳು ಮೊಳಗಿದವು. ಪಟಾಕಿ, ಬಾಣ, ಬಿರುಸುಗಳ ಪ್ರದರ್ಶನ ಗಮನ ಸೆಳೆಯಿತು. ಹಲವು ಮಕ್ಕಳು ಬಾಲ ರಾಮ, ಕೃಷ್ಣ, ಸೀತೆ, ಆಂಜನೇಯ ವೇಶಭೂಷಣ ಧರಿಸಿ ಗಮನ ಸೆಳೆದರು. ಮಾತೆಯರು ದೇವರ ನಾಮ ಪಠಿಸಿ ರಾಮನಿಗೆ ಆರತಿ ಬೆಳಗಿದರು. ಪುರುಷರು ವೇದ ಮಂತ್ರ ಘೋಷ ಮಾಡಿದರು. ಹಲವಾರು ಪಂಡಿತರು, ವಿದ್ವಾಂಸರು ಹಾಜರಿದ್ದು, ಪಲ್ಲಕ್ಕಿ ಸೇವೆ ಮಾಡಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉತ್ತರಾದಿ ಮಠದ ಶ್ರೀ ಧನ್ವಂತರಿ ದೇವರ ಸನ್ನಿಧಿಯಲ್ಲಿ ರಾಮೋತ್ಸವ ಮತ್ತು ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ನೆರವೇರಿತು. 500ಕ್ಕೂ ಹೆಚ್ಚು ಭಕ್ತರು ಇದಕ್ಕೆ ಸಾಕ್ಷಿಯಾದರು.

ಅಗ್ರಹಾರದ ಪ್ರಮುಖ ರಸ್ತೆಗಳಲ್ಲಿ ರಾಮದೇವರ ಪಲ್ಲಕ್ಕಿ ಸಾಗಿತು. ಮಂಗಳವಾದ್ಯಗಳು ಮೊಳಗಿದವು. ಪಟಾಕಿ, ಬಾಣ, ಬಿರುಸುಗಳ ಪ್ರದರ್ಶನ ಗಮನ ಸೆಳೆಯಿತು. ಹಲವು ಮಕ್ಕಳು ಬಾಲ ರಾಮ, ಕೃಷ್ಣ, ಸೀತೆ, ಆಂಜನೇಯ ವೇಶಭೂಷಣ ಧರಿಸಿ ಗಮನ ಸೆಳೆದರು. ಮಾತೆಯರು ದೇವರ ನಾಮ ಪಠಿಸಿ ರಾಮನಿಗೆ ಆರತಿ ಬೆಳಗಿದರು. ಪುರುಷರು ವೇದ ಮಂತ್ರ ಘೋಷ ಮಾಡಿದರು. ಹಲವಾರು ಪಂಡಿತರು, ವಿದ್ವಾಂಸರು ಹಾಜರಿದ್ದು, ಪಲ್ಲಕ್ಕಿ ಸೇವೆ ಮಾಡಿದರು.

ಅಯೋಧ್ಯೆಯಲ್ಲಿ ಶ್ರೀ ಬಾಲ ರಾಮನ ಮೂರ್ತಿ ಪ್ರತಿಷ್ಠಾಪನೆ ಆದ ಹಿನ್ನೆಲೆ ಪ್ರಧಾನಿ ನರೇಂದ್ರಮೋದಿ ಅವರ ಆಶ್ರಯದಂತೆ ಶ್ರೀ ಮಠದಲ್ಲಿ ವಿಶೇಷ ಪೂಜೆ, ದೀಪೋತ್ಸವ ಸಂಪನ್ನಗೊಂಡಿತು. ಇದೇ ಸಂದರ್ಭ ಶ್ರೀ ಧನ್ವಂತರಿ ದೇವರಿಗೆ, ಶ್ರೀ ಸತ್ಯ ಸಂಕಲ್ಪರು ಮತ್ತು ಶ್ರೀ ಸತ್ಯ ಸಂತುಷ್ಟ ತೀರ್ಥರ ಮೂಲ ವೃಂದಾವನಗಳಿಗೆ ವಿಶೇಷ ಪೂಜೆ ನೆರವೇರಿತು. ಸ್ವಸ್ತಿ ವಾಚನ, ಅಷ್ಟಾವಧಾನ ಸೇವೆ, ಗಾಯನ ಸೇವೆ ನೆರವೇರಿತು.

ಭಕ್ತರ ಸಂಗಮ: ಉತ್ತರಾದಿ ಮಠಾಧೀಶ ಶ್ರೀಸತ್ಯಾತ್ಮತೀರ್ಥರ ಅನುಗ್ರಹ ಮತ್ತು ಆದೇಶದಿಂದ ನೆರವೇರಿದ ರಾಮೋತ್ಸವ ನೂರಾರು ಭಕ್ತರನ್ನು ಒಂದೆಡೆ ಸಂಗಮಗೊಳಿಸಿದೆ. ಮೈಸೂರಿನಲ್ಲಿ ಅಯೋಧ್ಯೆ ಮನೆ ಮಾಡಿದೆ. ಇದಕ್ಕೆ ಧನ್ವಂತರಿ ದೇವರ ಸನ್ನಿಧಿಯೇ ಪವಿತ್ರ ವೇದಿಕೆಯಾಗಿದೆ ಎಂದು ವ್ಯವಸ್ಥಾಪಕ, ಪಂಡಿತ ಅನಿರುದ್ಧಾಚಾರ್ಯ ಪಾಂಡುರಂಗಿ ಹೇಳಿದರು.

ಭಕ್ತರಿಗೆ ಅವಲಕ್ಕಿ, ರಸಾಯನ ಮತ್ತು ಪಾನಕ ಪ್ರಸಾದವನ್ನು ವಿತರಿಸಲಾಯಿತು.