ಕಳೆದ ಮೂರು ತಿಂಗಳಿಂದ ಒಂದು ಹನಿ ಮಳೆ ಇಲ್ಲದೆ ಬೆಳೆ ಜತೆಗೆ ರೈತರ ಮೊಗ ಸಹ ಒಣಗಿದ್ದವು. ಈ ವರ್ಷ ಸಹ ಹಿಂಗಾರು ಸಹ ಕೈಕೊಡುತ್ತದೆ ಎಂಬ ಆತಂಕದಲ್ಲಿದ್ದ ರೈತ ವರ್ಗಕ್ಕೆ ಕಳೆದ ಎರಡು ದಿನಗಳಿಂದ ಸುರಿದ ಉತ್ತರಿ ಮಳೆ ಚೈತನ್ಯ ತುಂಬಿದೆ.
ಅಮರೇಶ್ವರಸ್ವಾಮಿ ಕಂದಗಲ್ಲಮಠ
ಕುಕನೂರು: ಕಳೆದ ಮೂರು ತಿಂಗಳಿಂದ ಒಂದು ಹನಿ ಮಳೆ ಇಲ್ಲದೆ ಬೆಳೆ ಜತೆಗೆ ರೈತರ ಮೊಗ ಸಹ ಒಣಗಿದ್ದವು. ಈ ವರ್ಷ ಸಹ ಹಿಂಗಾರು ಸಹ ಕೈಕೊಡುತ್ತದೆ ಎಂಬ ಆತಂಕದಲ್ಲಿದ್ದ ರೈತ ವರ್ಗಕ್ಕೆ ಕಳೆದ ಎರಡು ದಿನಗಳಿಂದ ಸುರಿದ ಉತ್ತರಿ ಮಳೆ ಚೈತನ್ಯ ತುಂಬಿದೆ.ಮುಂಗಾರು ಹಂಗಾಮಿನಲ್ಲಿ ರೈತರು ಕೈಸುಟ್ಟುಕೊಂಡರು. ಭೀಕರ ಬರಗಾಲ ಅನುಭವಿಸುತ್ತಿದ್ದಾರೆ. ಹಿಂಗಾರು ಹಂಗಾಮಿನಲ್ಲೂ ಮಳೆ ಕೈ ಕೊಡುವ ನಿರೀಕ್ಷೆ ರೈತರಿಗಿತ್ತು. ಹಿಂಗಾರು ಬೆಳೆಗೆ ಯರೇಭೂಮಿ ಹಸಿ ಆಗಬೇಕು. ಉತ್ತರಿ, ಹಸ್ತ ಮಳೆಯಾದರೆ ಹಿಂಗಾರು ಬಿತ್ತನೆ ಸಾಧ್ಯ. ಇಲ್ಲದಿದ್ದರೆ ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಲು ಆಗದು. ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ಮತ್ತೆ ಆಶಾಭಾವ ಚಿಗುರುವಂತೆ ಮಾಡಿದೆ.
ಇನ್ನೂ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದರೆ ಹಿಂಗಾರು ಹಂಗಾಮಿನ ಕೃಷಿ ಚಟುವಟಿಕೆ ಮತ್ತಷ್ಟು ಗರಿಗೆದರಲಿವೆ. ಉತ್ತಮ ಮಳೆಯಾದರೆ ಕಡಲೆ, ಜೋಳ, ಗೋದಿ, ಕುಸುಬೆ, ಸಜ್ಜೆ, ಹುರುಳಿ ಬೆಳೆಗಳನ್ನು ರೈತರು ಬಿತ್ತನೆ ಮಾಡಲಿದ್ದಾರೆ.ಮೂರು ತಿಂಗಳಿನಿಂದ ಬಾರದ ಮಳೆ: ಕಳೆದ ಮೂರು ತಿಂಗಳಿನಿಂದ ಮುಂಗಾರು ಹಂಗಾಮಿನಲ್ಲಿ ಒಂದು ಹನಿ ಮಳೆ ಬಿದ್ದಿಲ್ಲ. ಇದರಿಂದ ಕೆಲವು ರೈತರು ಬೆಳೆಗಳನ್ನು ಹರಗಿದರು. ಇನ್ನೂ ಕೆಲವರು ಕುರಿ ಮೇಯಿಸಿದರು. ಮಾಡಿದ ಖರ್ಚು ಸಹ ಬಾರದೆ ಕೈ ಸುಟ್ಟುಕೊಂಡರು. ಮತ್ತೆ ಈ ಬರದ ಛಾಯೆ ಮುಂದುವರಿಯುತ್ತದೆ. ಮಳೆ ಕೊರತೆ ಆಗುತ್ತದೆ ಎಂಬ ದುಃಖದಲ್ಲಿ ರೈತರಿದ್ದರು. ರೈತ ವರ್ಗಕ್ಕೆ ಉತ್ತರಿ ಮಳೆ ಭರವಸೆ ಮೂಡಿಸಿದ್ದು, ಮುಂದೆ ಇನ್ನಷ್ಟು ಮಳೆಯಾಗಬೇಕಿದೆ. ಯರೇಭಾಗದ ಗ್ರಾಮದಲ್ಲಿ ಬೆಳೆದಿದ್ದ ಈರುಳ್ಳಿ, ಮೆಣಸಿನಕಾಯಿ ಬೆಳೆಗಳು ಮಳೆ ಅಭಾವದಿಂದ ಒಣಗುತ್ತಿದ್ದವು, ಸದ್ಯ ಮಳೆಯಿಂದ ಅನುಕೂಲ ಆಯಿತು.
ಮಳೆ ಆಗಬೇಕಿದೆ: ಮುಂಗಾರು ಹಂಗಾಮಿನಲ್ಲಿ ಮಳೆ ಅಭಾವ ಇಲ್ಲದೆ ತೀವ್ರ ಬರಗಾಲ ಉಂಟಾಗಿದೆ. ಹಿಂಗಾರು ಹಂಗಾಮು ಆರಂಭವಾದರೂ ಮಳೆ ಆಗಿರಲಿಲ್ಲ. ಈ ಉತ್ತರಿ ಮಳೆ ಆಗಿದ್ದು, ರೈತರಲ್ಲಿ ಕೊಂಚ ನೆಮ್ಮದಿ ತಂದಿದೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಮಳೆ ಆಗಬೇಕಿದೆ ಎಂದು ಯರೇಹಂಚಿನಾಳ ಗ್ರಾಮದ ರೈತ ಅಂದಪ್ಪ ಕೋಳೂರು ಹೇಳಿದರು.