22 ರ ತಾರುಣ್ಯದ ಸೊಬಗಿನಲ್ಲಿ ''ನಟನ'' ರಂಗಶಾಲೆ!

| Published : Feb 04 2024, 01:40 AM IST

ಸಾರಾಂಶ

ರಾಜಣ್ಣನವರನ್ನೇ ಮಾದರಿಯಾಗಿ ಸ್ವೀಕರಿಸಿ, ತಮಗೆ ವಿದ್ಯೆ ಕಲಿಸಿದ ಗುರುಗಳನ್ನು ವಿನಮ್ರತೆಯಿಂದ ಸ್ಮರಿಸುವ, ತಾವು ಕಲಿತದ್ದನ್ನು, ಮಾತ್ಸರ್ಯವಿಲ್ಲದೇ, ನಿಸ್ವಾರ್ಥ ಭಾವನೆ ಮತ್ತು ಶಿಸ್ತಿನಿಂದ ತಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಕಲಿಸುವ ಅಪರೂಪದ ನಡವಳಿಕೆಯಿಂದಾಗಿಯೇ ಮಂಡ್ಯ ರಮೇಶ್ ಅವರು ಇಂದಿಗೂ, ಎಂದೆಂದಿಗೂ, 'ಅಜಾತಶತ್ರು' ಗಳೇ!

ಮೈಸೂರು: ಯಶಸ್ವಿ 22 ವರ್ಷಗಳನ್ನು ಪೂರೈಸಿದ, ಮೈಸೂರಿನ ಹೆಮ್ಮೆಯ ''ನಟನ'' ತಂಡಕ್ಕೆ, ವಿಶೇಷವಾಗಿ, ನಟನ ದ ರೂವಾರಿ ಮಂಡ್ಯ ರಮೇಶ್ ರವರಿಗೆ ಹೃತ್ಪೂರ್ವಕ ಅಭಿನಂದನೆಗಳು!

ಎರಡು ದಶಕಗಳಿಗೂ ಮೀರಿದ, ಅಸಾಮಾನ್ಯ ಬೆಳವಣಿಗೆ ಯನ್ನು ಕಂಡ, ನಟನ ರಂಗ ಸಂಸ್ಥೆಯ ಚಟುವಟಿಕೆಗಳನ್ನು, ಮೈಸೂರಿನವನಾಗಿ, ರಾಮಕೃಷ್ಣ ನಗರದ ನಿವಾಸಿಯಾಗಿ, ಹತ್ತಿರದಿಂದ ಗಮನಿಸಿರುವ ನನಗೆ, ಆ ವಿಶಿಷ್ಟ ಬೆಳವಣಿಗೆಯ ಹಿಂದಿನ ಪಡಿಪಾಟಲುಗಳು, ಕಷ್ಟ ನಷ್ಟಗಳು, ವಿಶಿಷ್ಟವಾಗಿ ಸಾಧಿಸಬೇಕೆನ್ನುವ ಛಲ, ಅವಿರತ ಪ್ರಯತ್ನ, ಸತತ ಪರಿಶ್ರಮ ಮತ್ತು ಎಲ್ಲಕ್ಕಿಂತಲೂ ಬಹು ಮುಖ್ಯವಾಗಿ, ರಂಗಭೂಮಿಯನ್ನು ಉಳಿಸಿ, ಮುಂದಿನ ತಲೆಮಾರುಗಳಿಗೆ ಸುರಕ್ಷಿತವಾಗಿ ತಲುಪಿಸುವ ಅಪರಿಮಿತ ಕಾಳಜಿ, ನಿಭಾಯಿಸಿದ ಜವಾಬ್ದಾರಿಗಳು....ಅತಿ ಆಶ್ಚರ್ಯಕರವಾದ ಹಾಗೂ ಅನನ್ಯವಾದ ಸಂತೋಷದ ಅನುಭವವನ್ನು ನೀಡಿದೆ!

ಒಬ್ಬ ''ಹಳ್ಳಿ ಹೈದ'''' ನಿಂದ ಸಾಧ್ಯವಾದ, ಈ ರೋಚಕವಾದ ಬೆಳವಣಿಗೆಯನ್ನೇ ಕಥೆಯಾಗಿಸಿ, ಒಂದು ಅದ್ಭುತ ಸಿನಿಮಾವನ್ನೋ..ಅಥವಾ, ಇಂದಿನ ಮಟ್ಟಿಗೆ, ಒಂದು ಮೆಗಾ ಧಾರಾವಾಹಿ ಯನ್ನೋ ತಯಾರಿಸಲು ಮುಂದಾಗುವವರಿಗೆ, ''''''ಯಶಸ್ಸು''ಕಟ್ಟಿಟ್ಟ ಬುತ್ತಿ! ನಿಷ್ಕಲ್ಮಶ ಮನಸ್ಸಿನ, ನಿಸ್ವಾರ್ಥ ಭಾವನೆಯ, ''''ಅಪ್ಪಟ ಗ್ರಾಮೀಣ'''' ಪ್ರತಿಭೆ ಗಳಿಗೆ, ಅದೂ ಕನ್ನಡದ ಮಣ್ಣಿನ ಮಕ್ಕಳಿಗೆ, ಜೀವನದಲ್ಲಿ ಮಹತ್ತರವಾದುದನ್ನು ಸಾಧಿಸಬೇಕೆನ್ನುವ ಹಸಿವು, ಹಿಡಿದ ಕೆಲಸವನ್ನು ಗುರಿ ಮುಟ್ಟುವ ತವಕ, ಆ ಗುರಿಯನ್ನು ಈಡೇರಿಸುವ ಆತ್ಮ ವಿಶ್ವಾಸ...ಬಹುಶಃ, ದೇವರು ಕೊಟ್ಟ ವರ! ಇದಕ್ಕೆ ಪುರಾವೆಯಾಗಿ, ನಮ್ಮ ಕನ್ನಡ ಚಿತ್ರರಂಗದ ಅನಭಿಷಿಕ್ತ ದೊರೆ, ''ರಾಜಣ್ಣ'' ನವರಿಗಿಂತ ಬೇರೆ ಅತ್ಯುತ್ತಮ ಉದಾಹರಣೆ ಬೇಕೇ?

ಅಂತಹ ರಾಜಣ್ಣನವರನ್ನೇ ಮಾದರಿಯಾಗಿ ಸ್ವೀಕರಿಸಿ, ತಮಗೆ ವಿದ್ಯೆ ಕಲಿಸಿದ ಗುರುಗಳನ್ನು ವಿನಮ್ರತೆಯಿಂದ ಸ್ಮರಿಸುವ, ತಾವು ಕಲಿತದ್ದನ್ನು, ಮಾತ್ಸರ್ಯವಿಲ್ಲದೇ, ನಿಸ್ವಾರ್ಥ ಭಾವನೆ ಮತ್ತು ಶಿಸ್ತಿನಿಂದ ತಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಕಲಿಸುವ ಅಪರೂಪದ ನಡವಳಿಕೆಯಿಂದಾಗಿಯೇ ಮಂಡ್ಯ ರಮೇಶ್ ಅವರು ಇಂದಿಗೂ, ಎಂದೆಂದಿಗೂ, ''ಅಜಾತಶತ್ರು'' ಗಳೇ!!

ಅದೆಷ್ಟು ಸ್ನೇಹಿತರು, ಅದೆಷ್ಟು ಒಡನಾಡಿಗಳು, ಕಲಿತು ಖ್ಯಾತರಾದ ಅದೆಷ್ಟು ವಿದ್ಯಾರ್ಥಿಗಳು... ವಯಸ್ಸು ತುಂಬುತ್ತಿರುವಂತೆಯೇ, ಇಮ್ಮಡಿಗೊಳ್ಳುತ್ತಿರುವ ಅಮಿತೋತ್ಸಾಹ! ಬಿಡುವಿಲ್ಲದ, ಸದಾ ಚಟುವಟಿಕೆಯಿಂದ ಕೂಡಿದ ರಮೇಶ್ ಅವರ ಬದುಕೇ ಬಲು ಸ್ವಾರಸ್ಯಕರ! ಒಂದು ಮುಖ್ಯವಾದ ವಿಷಯದ ಬಗ್ಗೆ ಇಲ್ಲಿ ತಿಳಿಸಲೇಬೇಕು. ನಟನಾ ತರಬೇತಿಯಲ್ಲಿ, ಕನ್ನಡದ ಭಾಷೆಯ ಶುದ್ಧವಾದ ಉಚ್ಛಾರಣೆಯ ಬಗ್ಗೆ ತಿಳಿಸಿಕೊಡುವ ಮಂಡ್ಯ ರಮೇಶ್ ರಂತಹ ಗುರುಗಳು, ಇಂದಿನ ಕಾಲದಲ್ಲಿ, ಬಹುಶಃ, ಅಪರೂಪದಲ್ಲಿ ಅಪರೂಪವೇ!

ನಾಟಕ ನೋಡಲು ಆಗಮಿಸುವ ಪ್ರತಿಯೋರ್ವ ಕಲಾಭಿಮಾನಿಗಳನ್ನೂ ನಗುಮೊಗದಿಂದ, ಆತ್ಮೀಯವಾಗಿ ಬರಮಾಡಿಕೊಳ್ಳುವ ಅವರ ಪರಿಯೇ ಬಲು ಆನಂದದ ಸಂಗತಿ! 22 ವರ್ಷಗಳ ಕಾಲ ''''''''''''''''ನಟನ'''''''''''''''' ದಲ್ಲಿ ಸವೆಸಿರುವ ದಾರಿಯನ್ನು ಒಮ್ಮೆ ಅವಲೋಕಿಸಿದಾಗ.. ಒಬ್ಬ ಸಾಧಾರಣ ವ್ಯಕ್ತಿ, ಸಮಾಜಕ್ಕೆ ಅಸಾಧಾರಣವಾದ ಕೊಡುಗೆಯ ಮೂಲಕ, ತನ್ನ ಬದುಕನ್ನು ಹೇಗೆ ಸಾರ್ಥಕ ಪಡಿಸಿಕೊಳ್ಳಬಹುದು ಎಂಬುದಕ್ಕೆ ರಮೇಶ್ ಅವರು ಅತ್ಯುತ್ತಮ ನಿದರ್ಶನ!

ಅಸಂಖ್ಯಾತ ನಾಟಕಗಳ ಪ್ರದರ್ಶನ, ಅಪೂರ್ವವಾದ ನವ ನವೀನ ಪ್ರಯೋಗಗಳು, ಬೇಸಿಗೆ ಶಿಬಿರಗಳು, ಇತರ ತಂಡಗಳಿಗೂ ''''ನಟನ'' ದಲ್ಲಿ ನಾಟಕ ಪ್ರದರ್ಶನಕ್ಕೆ ಅವಕಾಶ ನೀಡಿ ಪ್ರೋತ್ಸಾಹಿಸುವ ಸಹೃದಯತೆ, ಎಲೆ ಮರೆ ಕಾಯಿಗಳಂತಿದ್ದ ಅದೆಷ್ಟೋ ಪ್ರತಿಭೆಗಳನ್ನು ಗುರುತಿಸಿ, ಕಲಾ ಪ್ರಪಂಚದಲ್ಲಿ ವಿಶಿಷ್ಟ ಕಲಾವಿದರನ್ನಾಗಿ ಮಾರ್ಪಡಿಸಿದ ಜಾದುಗಾರಿಕೆ, ಭಾರತದಾದ್ಯಂತ, ಹೆಸರಾಂತ ವೇದಿಕೆಗಳಲ್ಲಿ ಯಶಸ್ವಿ ಪ್ರದರ್ಶನ ಗಳು...ಒಂದೇ ಎರಡೇ ''ನಟನ'' ಅಭೂತಪೂರ್ವ ಯಶಸ್ಸಿನ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ!

ಒಟ್ಟಿನಲ್ಲಿ, ಸುಸಜ್ಜಿತವಾದ, ಶಾಶ್ವತವಾದ ಉತ್ತಮ ರಂಗ ಮುಂದಿರವಾಗಿ ಸ್ಥಾಪನೆಗೊಂಡು, ಯಶಸ್ವಿಯಾಗಿ ಮುನ್ನಡೆಯುತ್ತ, ಮೈಸೂರಿನ ಕಲಾಸಕ್ತರನ್ನು ರಂಜಿಸುತ್ತಿರುವ ''''''''''''''''ನಟನ'''''''''''''''' ದ ಪಯಣ ನಿರಂತರವಾಗಿ ಸಾಗಲೆಂದು, ಸಮಸ್ತ ಕನ್ನಡಿಗರ ಪರವಾಗಿ, ಮನದಾಳದ ಹಾರೈಕೆಗಳು.

- ವಿ.ಗುರುದತ್ತ, ಮೈಸೂರು.