ರಾಜ್ಯದಲ್ಲಿ 30 ವರ್ಷದಿಂದ ಬಾಕಿ ಉಳಿದ 9 ರೈಲ್ವೆ ಯೋಜನೆಗಳು 2 ವರ್ಷದಲ್ಲಿ ಪೂರ್ಣ: ಸೋಮಣ್ಣ

| Published : Jun 18 2024, 01:30 AM IST / Updated: Jun 18 2024, 08:51 AM IST

ರಾಜ್ಯದಲ್ಲಿ 30 ವರ್ಷದಿಂದ ಬಾಕಿ ಉಳಿದ 9 ರೈಲ್ವೆ ಯೋಜನೆಗಳು 2 ವರ್ಷದಲ್ಲಿ ಪೂರ್ಣ: ಸೋಮಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ರೈಲ್ವೆ ರಾಜ್ಯ ಖಾತೆ ನೂತನ ಸಚಿವ ಬಂಪರ್‌ ಘೋಷಣೆ ಮಾಡಿದ್ದು 1,264 ಕಿ.ಮೀ ಕಾಮಗಾರಿ ವೇಗಕ್ಕೆ ನೈಋತ್ಯ ರೈಲ್ವೆ ಅಧಿಕಾರಿಗಳ ಸಭೆ ನಡೆಸಿದ್ದಾರೆ.

  ಬೆಂಗಳೂರು :  ರಾಜ್ಯದಲ್ಲಿ ಕಳೆದ ಮೂರು ದಶಕಗಳಿಂದ ವಿಳಂಬವಾಗಿರುವ ಸುಮಾರು 1264 ಕಿ.ಮೀ. ಒಳಗೊಂಡ ಒಂಬತ್ತು ರೈಲ್ವೇ ಯೋಜನೆ ಕಾಮಗಾರಿಗೆ ಚುರುಕು ನೀಡಿ 2025-2026ರ ಅಂತ್ಯದೊಳಗೆ ಪೂರ್ಣಗೊಳಿಸುವುದಾಗಿ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ರೈಲ್ವೇ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸೋಮವಾರ ಮೊದಲ ಬಾರಿಗೆ ನೈಋತ್ಯ ರೈಲ್ವೇ ಅಧಿಕಾರಿಗಳ ಜತೆಗೆ ರಾಜ್ಯದ ರೈಲ್ವೇ ಸ್ಥಿತಿಗತಿ ಕುರಿತು ಸಭೆ ನಡೆಸಿದ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.ಮುಖ್ಯವಾಗಿ 1995ರಿಂದಲೂ ಬಾಕಿ ಇರುವ ರೈಲ್ವೇ ಯೋಜನೆಗಳ ಕುರಿತು ಅಧಿಕಾರಿಗಳಿಂದ ವಿವರ ಪಡೆದು, ಅಡ್ಡಿಗಳ ನಿವಾರಣೆಗೆ ಕ್ರಮ ವಹಿಸಲು ಚರ್ಚಿಸಲಾಗಿದೆ.

 ಪರವಾನಗಿ ವಿಳಂಬ, ತಾಂತ್ರಿಕ ಸಮಸ್ಯೆ ನಿವಾರಿಸಿಕೊಂಡು ಹಾಗೂ ಸ್ಥಳೀಯ ಆಡಳಿತದ ಜೊತೆಗೆ ಸಮನ್ವಯ ಸಾಧಿಸಿ 2025 ಹಾಗೂ 2026ರ ವರ್ಷಾಂತ್ಯಕ್ಕೆ ಎಲ್ಲ ಒಂಬತ್ತು ಯೋಜನೆ ಪೂರ್ಣಗೊಳಿಸಲು ಸೂಚಿಸಿದ್ದೇವೆ ಎಂದರು. 707 ಕಿಲೋಮೀಟರ್ ದ್ವಿಪಥೀಕರಣ ಯೋಜನೆಗಳಾದ ಹೊಟ್ಗಿ - ಕುಡ್ಗಿ- ಗದಗ ಮಾರ್ಗ, ಯಶವಂತಪುರ - ಚನ್ನಸಂದ್ರ ಮಾರ್ಗ, ಬೈಯ್ಯಪನಹಳ್ಳಿ - ಹೊಸೂರು ಮಾರ್ಗ, ಬೆಂಗಳೂರು - ವೈಟ್‌ಫೀಲ್ಡ್‌ ಹಾಗೂ ಹೊಸಪೇಟೆ - ಹುಬ್ಬಳ್ಳಿ - ಲೋಂಡಾ - ತಿನೈಘಾಟ್ - ವಾಸ್ಕೋ ಡ ಗಾಮಾವರೆಗಿನ ಜೋಡಿಹಳಿ ಮಾರ್ಗದ ಕಾಮಗಾರಿಯನ್ನು ಚುರುಕುಗೊಳಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಬಾಕಿ ಉಳಿದಿರುವ ಕಾಮಗಾರಿಗಳ ಭೂಸ್ವಾಧೀನಕ್ಕೆ ವೇಗ ನೀಡುವಂತೆ ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಮುಂಬರುವ ವರ್ಷಗಳಲ್ಲಿ ಎಲ್ಲ ಬಾಕಿ ಯೋಜನೆಗಳನ್ನು ವ್ಯವಸ್ಥಿತವಾಗಿ ಪೂರ್ಣಗೊಳಿಸಬೇಕು. ಪ್ರಯಾಣಿಕರ ಸುರಕ್ಷತೆ ಹೆಚ್ಚಿಸಲು ಕ್ರಮ ವಹಿಸಬೇಕು. ರೈಲುಗಳ ವೇಗವನ್ನು ಹೆಚ್ಚಿಸಲು ಎಲ್ಲ ಲೆವೆಲ್ ಕ್ರಾಸಿಂಗ್‌ಗಳನ್ನು ತೆಗೆದುಹಾಕಬೇಕಿದೆ. ಈ ಸಂಬಂಧ ಬೆಂಗಳೂರು ಸುತ್ತಮುತ್ತಲಿನ ಲೆವೆಲ್ ಕ್ರಾಸಿಂಗ್ ಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದ್ದಾಗಿ ಸಚಿವ ವಿ. ಸೋಮಣ್ಣ ವಿವರಿಸಿದರು.

1264 ಕಿಮೀ ರೈಲ್ವೇ ಯೋಜನೆಗಳ ಪೈಕಿ 289 ಕಿಮೀ ಹೊಸ ಮಾರ್ಗ ಮತ್ತು 502 ಕಿಲೋಮೀಟರ್ ಜೋಡಿಹಳಿ ಕಾಮಗಾರಿ ಯಶಸ್ವಿಯಾಗಿ ನಡೆದಿದೆ ಎಂದು ರೈಲ್ವೇ ಅಧಿಕಾರಿಗಳು ಸಚಿವರಿಗೆ ವಿವರಿಸಿದರು.ನೈಋತ್ಯ ರೈಲ್ವೇ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ, ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಯೋಗೇಶ್ ಮೋಹನ್, ಮುಖ್ಯ ಆಡಳಿತಾಧಿಕಾರಿ (ನಿರ್ಮಾಣ) ರಾಮಗೋಪಾಲ್ ಮತ್ತು ಇತರ ರೈಲ್ವೆ ಅಧಿಕಾರಿಗಳು ಇದ್ದರು.

ಉಪನಗರ ರೈಲ್ವೆಗೆ ತಜ್ಞರ ನೇಮಕ

ಬೆಂಗಳೂರು ಉಪನಗರ ರೈಲು ಯೋಜನೆ ( ಬಿಎಸ್‌ಆರ್‌ಪಿ ) ಕಾಮಗಾರಿ ಚುರುಕಾಗಬೇಕು. ಇದಕ್ಕಾಗಿ ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ ( ಕೆ-ರೈಡ್‌) ಮುಂದಿನ ಹದಿನೈದು ದಿನಗಳಲ್ಲಿ ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ರೈಲ್ವೆ ತಾಂತ್ರಿಕ ತಜ್ಞರ ನೇಮಕಾತಿಗೆ ಕ್ರಮ ವಹಿಸಲಿದ್ದೇವೆ. ಕೆ- ರೈಡ್ ಸೇರಿದಂತೆ ವಿವಿಧ ಭಾಗಿದಾರರ ನಡುವಿನ ಸಹಯೋಗದೊಂದಿಗೆ ಈ ಯೋಜನೆ ಪೂರ್ಣಗೊಳಿಸಲು ಕ್ರಮವಹಿಸಲಾಗುವುದು ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು.ಯಾವ್ಯಾವ ಯೋಜನೆಗೆ ಎರಡು ವರ್ಷ ಟಾರ್ಗೆಟ್‌?

1. ತುಮಕೂರು-ಕಲ್ಯಾಣದುರ್ಗ ಮೂಲಕ ರಾಯದುರ್ಗ

2. ತುಮಕೂರು-ಚಿತ್ರದುರ್ಗ-ದಾವಣಗೆರೆ

3. ಗಿಣಿಗೇರಾ-ರಾಯಚೂರು

4. ಬಾಗಲಕೋಟ-ಕುಡಚಿ

5. ಗದಗ-ವಾಡಿ

6. ಕಡೂರು-ಚಿಕ್ಕಮಗಳೂರು

7. ಶಿವಮೊಗ್ಗ ಶಿಕಾರಿಪುರ-ರಾಣೆಬೆನ್ನೂರು

8. ಬೆಳಗಾವಿ-ಕಿತ್ತೂರು ಮಾರ್ಗವಾಗಿ ಧಾರವಾಡ

9. ಹಾಸನ-ಬೇಲೂರು