ಲಸಿಕೆ ಹಾಕಿ ಜಾನುವಾರು ಆರೋಗ್ಯ ಕಾಪಾಡಿ: ಡಿಸಿ ನಿತೇಶ ಪಾಟೀಲ

| Published : Mar 30 2024, 12:47 AM IST

ಲಸಿಕೆ ಹಾಕಿ ಜಾನುವಾರು ಆರೋಗ್ಯ ಕಾಪಾಡಿ: ಡಿಸಿ ನಿತೇಶ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ 5ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮದ ಕುರಿತು ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ 5ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮ ಜಿಲ್ಲೆಯಲ್ಲಿ ಏ.1 ರಿಂದ 30 ವರೆಗೆ ಹಮ್ಮಿಕೊಳ್ಳಲಾಗಿದ್ದು, ಬ್ಯಾನರ್, ಪೋಸ್ಟರ್ ಮತ್ತು ಕರಪತ್ರಗಳ ಮೂಲಕ ವ್ಯಾಪಕ ಪ್ರಚಾರ ಕೈಗೊಂಡು ಲಸಿಕಾ ಕಾರ್ಯಕ್ರಮ ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ 5ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮ ಕುರಿತು ಮಾತನಾಡಿದರು. ಜಾನುವಾರು ಮಾಲೀಕರ ಮನೆ ಬಾಗಿಲಿಗೆ ತೆರಳಿ ಹಸು, ಎತ್ತು, ಎಮ್ಮೆ ಮತ್ತು ಕರುಗಳಿಗೆ ಉಚಿತವಾಗಿ ಕಾಲು ಬಾಯಿಬೇನೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಅದರಂತೆ ಅಧಿಕಾರಿಗಳು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ರಾಜೀವ ಕೂಲೇರ ಮಾತನಾಡಿ, 20ನೇ ಜಾನುವಾರು ಗಣತಿಯ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 1393711 ಜಾನುವಾರುಗಳಿವೆ. ಆದರೆ ವಾಸ್ತವದಲ್ಲಿ ಜಾನುವಾರು ಸಂಖ್ಯೆ ಕಡಿಮೆ ಇರುತ್ತವೆ ಎಂದು ತಿಳಿಸಿದರು.

ಜಿಲ್ಲೆಗೆ ಕೇಂದ್ರ ಕಚೇರಿಯಿಂದ 11,20,000 ಡೋಸ್ ಗಳಷ್ಟು ಕಾಲುಬಾಯಿ ಬೇನೆ ಲಸಿಕೆ ಸರಬರಾಜು ಆಗಿದೆ. 4ನೇ ಸುತ್ತಿನ ಕಾಲು ಬಾಯಿ ಬೇನೆ ಲಸಿಕಾ ಅಭಿಯಾನ ಅಂತ್ಯಕ್ಕೆ ಜಿಲ್ಲೆಯಲ್ಲಿ ಒಟ್ಟು 1,65,000 ಡೋಜ್ ಲಸಿಕೆ ಬಾಕಿ ಉಳಿದಿರುವ ಪ್ರಯುಕ್ತ ಜಿಲ್ಲೆಯಲ್ಲಿ ಒಟ್ಟು 12,85,000 ಡೋಸ್ ಲಸಿಕೆಯು ಲಭ್ಯವಿದೆ. ಈ ಲಸಿಕೆಯನ್ನು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಲಭ್ಯವಿರುವ ವಾಕ್-ಇನ್ ಕೂಲರ್ ಶೀಥಲೀಕರಣ ವವಸ್ಥೆ ಹೊಂದಿರುವ ತಾಲೂಕುಗಳಿಗೆ ಸರಬರಾಜು ಮಾಡಿ ಶೇಖರಣೆ ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಲಸಿಕೆದಾರರು ವಿವಿಧ ವಾರ್ಡ್‌, ಗ್ರಾಮಗಳಲ್ಲಿರುವ ಜಾನುವಾರು ಮಾಲೀಕರ ಮನೆ ಬಾಗಿಲಿಗೆ ಹೋಗಿ ಅರ್ಹ ಜಾನುವಾರುಗಳಿಗೆ ಲಸಿಕೆ ಹಾಕಲು 847 ವ್ಯಾಕ್ಸಿನ್‌ ಕ್ಯಾರಿಯರ್ಸ್ ಗಳು ಲಭ್ಯವಿದ್ದು, ಇದರಿಂದ ಲಸಿಕೆಯ ಗುಣಮಟ್ಟ ಹಾಳಾದಂತೆ ಕಾಪಾಡಿಕೊಳ್ಳಲಾಗುತ್ತದೆ ಎಂದು ವಿವರಿಸಿದರು.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಪ್ರತಿಕ್ರಿಯಿಸಿ, 5ನೇ ಸುತ್ತಿನ ಲಸಿಕಾ ಕಾರ್ಯಕ್ರಮವನ್ನು ಮಾರ್ಗಸೂಚಿಗಳನ್ವಯ ಜಿಲ್ಲೆಯ ಎಲ್ಲ ಗ್ರಾಮ, ವಾರ್ಡಗಳಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿ, ಕಾಲು ಬಾಯಿ ಬೇನೆ ರೋಗದಿಂದ ಜಾನುವಾರು ರಕ್ಷಿಸಿ, ಗೋ ಸಂಪತ್ತಿನ ಆರೋಗ್ಯ ಕಾಪಾಡಬೇಕು ಎಂದು ಸೂಚಿಸಿದರು.

ಇದಕ್ಕೂ ಮೊದಲು ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭಿಮಾಶಂಕರ ಗುಳೇದ, ಜಿಪಂ ಸಿಇಒ ರಾಹುಲ್ ಶಿಂಧೆ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ 5ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮ ಅಭಿಯಾನದ ಪೋಸ್ಟರ್ ಬಿಡುಗಡೆ ಮಾಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಪಾಲಿಕೆ ಆಯುಕ್ತ ಪಿ.ಎನ್‌. ಲೋಕೇಶ, ಜಿಪಂ ಮುಖ್ಯ ಯೋಜನಾ ನಿರ್ದೇಶಕ ಗಂಗಾಧರ ದಿವಿಟರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.