ದನಕರುಗಳಿಗೆ ತಪ್ಪದೇ ಲಸಿಕೆ ಹಾಕಿಸಿ

| Published : Oct 25 2024, 01:01 AM IST

ಸಾರಾಂಶ

ಸಿರಿಗೆರೆ: ಸಾಂಕ್ರಾಮಿಕ ಕಾಲುಬಾಯಿ ರೋಗ ಹರಡದಂತೆ ತಡೆಯಲು, ತಪ್ಪದೇ ರೈತರು ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು ಎಂದು ಜಿ.ಪಂ.ಸಿಇಓ ಎಸ್.ಜೆ.ಸೋಮಶೇಖರ್ ಕರೆ ನೀಡಿದರು.

ಸಿರಿಗೆರೆ: ಸಾಂಕ್ರಾಮಿಕ ಕಾಲುಬಾಯಿ ರೋಗ ಹರಡದಂತೆ ತಡೆಯಲು, ತಪ್ಪದೇ ರೈತರು ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು ಎಂದು ಜಿ.ಪಂ.ಸಿಇಓ ಎಸ್.ಜೆ.ಸೋಮಶೇಖರ್ ಕರೆ ನೀಡಿದರು. ಚಿತ್ರದುರ್ಗ ತಾಲ್ಲೂಕು ವಿಜಾಪುರ ಗ್ರಾಮದಲ್ಲಿ ಗುರುವಾರ, 6ನೇ ಸುತ್ತಿನ ರಾಷ್ಟ್ರೀಯ ಕಾಲುಬಾಯಿ ರೋಗ ನಿಯಂತ್ರಣ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕಾಲುಬಾಯಿ ರೋಗ ಒಂದು ರಾಸಿನಿಂದ ಇನ್ನೊಂದಕ್ಕೆ ರಾಸುವಿಗೆ ಅತಿ ಬೇಗನೆ ಹರಡುತ್ತದೆ. ರೋಗಗ್ರಸ್ತ ರಾಸುವಿನ ನೇರ ಸಂಪರ್ಕವಷ್ಟೇ ಅಲ್ಲದೇ ಗಾಳಿಯ ಮೂಲಕ ತುಂಬಾ ದೂರದವರೆಗೂ ರೋಗ ಹರಡುತ್ತದೆ. ಆದ್ದರಿಂದ ಸಾರ್ವಜನಿಕರು ಅತಿ ಜಾಗರೂಕರಾಗಿರಬೇಕು. ಕಾಲುಬಾಯಿ ರೋಗ ಲಕ್ಷಣ ಕಂಡುಬದ ರಾಸುಗಳನ್ನು ತಕ್ಷಣವೇ ಹಿಂಡಿನಿಂದ ಬೇರ್ಪಡಿಸಬೇಕು. ಜಾತ್ರೆಗಳಿಗೆ ಇವುಗಳನ್ನು ಕೊಂಡಯ್ಯಬಾರದು. ಇದರಿಂದ ಬೇರೆ ಬೇರೆ ಪ್ರದೇಶದ ರಾಸುಗಳಿಗೂ ರೋಗ ಶೀಘ್ರವಾಗಿ ಹರಡುತ್ತದೆ ಎಂದು ಎಚ್ಚರಿಸಿದರು.ಕಾಲುಬಾಯಿ ರೋಗದ ರೋಗಾಣುಗಳು ಕಲುಷಿತಗೊಂಡ ಮೇವು ಹಾಗೂ ನೀರು, ರೋಗಗ್ರಸ್ತ ರಾಸಿನ ಮೂತ್ರ, ಸಗಣಿ, ಹಾಲಿನ ಮುಖಾಂತರವೂ ಹರಡುತ್ತದೆ. ಆದ್ದರಿಂದ ಆರೋಗ್ಯವಂತ ಜಾನುವಾರಗಳಿಗೆ ರೋಗ ಬರದಂತೆ ತಡೆಯಲು ಮುಂಜಾಗೃತಾ ಕ್ರಮವಾಗಿ ಪ್ರತಿ ವರ್ಷ ತಪ್ಪದೇ ಕಾಲು ಹಾಗೂ ಬಾಯಿರೋಗದ ಲಸಿಕೆ ಹಾಕಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿಜಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಸ್ವತಿ ಸ್ವಾಮಿ, ಸದಸ್ಯ ಶಿವಚಂದ್ರನಾಯಕ, ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಇಲಾಖೆ ಉಪನಿರ್ದೇಶಕ ಡಾ.ಕುಮಾರ್, ಸಹಾಯಕ ನಿರ್ದೇಶಕಿ. ಡಾ.ಜಿ.ಇಂದಿರಾಬಾಯಿ, ಸ್ಥಳೀಯ ಪಶುವೈದ್ಯಾಧಿಕಾರಿಗಳಾದ ಡಾ.ಮಲ್ಲಿಕಾರ್ಜುನ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕ ಡಾ.ಸಿ.ತಿಪ್ಪೇಸ್ವಾಮಿ, ವಿಸ್ತರಣಾಧಿಕಾರಿ ಡಾ.ಮುರಗೇಶ್, ಪಶುವೈದ್ಯಕೀಯ ಪರೀಕ್ಷಕರಾದ ಬಸವರಾಜ್ ಮತ್ತು ಸಿಬ್ಬಂದಿ ಹಾಜರಿದ್ದರು.

ಇದೇ ವೇಳೆ ವಿಜಾಪುರ ಮತ್ತು ಓಬವ್ವನಾಗತಿಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಲಸಿಕೆ ಕಾರ್ಯಕ್ರಮದ ಪ್ರಗತಿ ಪರಿಶೀಲಿಸಿ, ಈ ಕಾರ್ಯಕ್ರಮದ ಉಪಯುಕ್ತತೆ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.