ಸಾರಾಂಶ
ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರೀಯ ಲಸಿಕಾ ದಿನದ ನಿಮಿತ್ತ ಐವರು ಮಕ್ಕಳಿಗೆ ಸಾಂಕೇತಿಕವಾಗಿ ಪೊಲಿಯೋ ಹನಿ ಹಾಕುವ ಮೂಲಕ ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪೊಲಿಯೋ ಲಸಿಕೆ ಅಭಿಯಾನ ನಡೆಸಲಾಗುತ್ತಿದೆ. ವಿಜಯನಗರ ಜಿಲ್ಲೆಯ ಕಮಲಾಪುರದಲ್ಲಿ ಉಳಿದುಕೊಂಡಿದ್ದೆ. ಹಾಗಾಗಿ ಪೊಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಚಾಲನೆ ನೀಡಿರುವೆ. ಪ್ರತಿವರ್ಷ ಮಕ್ಕಳಿಗೆ ಪೊಲಿಯೋ ಲಸಿಕೆ ಹಾಕುತ್ತೇವೆ. ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪೊಲಿಯೋ ಲಸಿಕೆ ಹಾಕಿಸಿ ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು.ಕ್ರೀಡಾ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ, ಶಾಸಕ ಎಚ್.ಆರ್. ಗವಿಯಪ್ಪ, ಕೆಎಂಎಫ್ ಅಧ್ಯಕ್ಷ ಎಸ್. ಭೀಮಾನಾಯ್ಕ, ಹೆಚ್ಚುವರಿ ಜಿಲ್ಲಾಧಿಕಾರಿ ಅನುರಾಧಾ, ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಡಾ. ಶ್ರೀನಿವಾಸ್, ಡಾ. ನಾಗರಾಜ್, ಡಾ. ಶಂಕರ ನಾಯ್ಕ, ಡಾ. ಜಂಬಯ್ಯ ನಾಯಕ ಮತ್ತಿತರರಿದ್ದರು. ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ವೇದಿಕೆ ಹಾಕಿದ್ದಕ್ಕೆ ಸಿಎಂ ಪ್ರಶ್ನೆ: ಲಸಿಕಾ ಕಾರ್ಯಕ್ರಮದ ವೇಳೆ ವೇದಿಕೆ ಸಭಾ ಕಾರ್ಯಕ್ರಮ ಮಾಡಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕ ಎಚ್.ಆರ್. ಗವಿಯಪ್ಪ ಅವರಿಗೆ ವೇದಿಕೆ ಕಾರ್ಯಕ್ರಮ ಮಾಡಲು ನಿಮಗೆ ಹೇಳಿದ್ದು ಯಾರು ಎಂದು ಪ್ರಶ್ನಿಸಿದರು.ವೇದಿಕೆಯ ಕೆಳಗಡೆಯೇ ಪೊಲಿಯೋ ಹನಿ ಹಾಕುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ಈ ವೇಳೆ ವೇದಿಕೆ ಮೇಲೆಯೇ ಮಕ್ಕಳಿಗೆ ಪೊಲಿಯೋ ಲಸಿಕೆ ಹಾಕಿ ಸ್ಥಳೀಯ ಶಾಸಕ ಎಚ್.ಆರ್. ಗವಿಯಪ್ಪ ಅವರು ಮನವಿ ಮಾಡಿದರು. ಬಳಿಕ ವೇದಿಕೆ ಮೇಲೇರಿ ಐವರು ಮಕ್ಕಳಿಗೆ ಸಾಂಕೇತಿಕವಾಗಿ ಪೊಲಿಯೋ ಹನಿ ಹಾಕುವ ಮೂಲಕ ಚಾಲನೆ ನೀಡಿದರು.
ಕಮಲಾಪುರ ಆಸ್ಪತ್ರೆಗೆ ಇಬ್ಬರು ಸಿಎಂ ಭೇಟಿ!:ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದ ಸರ್ಕಾರಿ ಆಸ್ಪತ್ರೆಯನ್ನು 1996ರಲ್ಲಿ ಆಗಿನ ಮುಖ್ಯಮಂತ್ರಿ ಎಚ್.ಡಿ. ದೇವೇಗೌಡ ಉದ್ಘಾಟಿಸಿದ್ದರು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಆಸ್ಪತ್ರೆಯಲ್ಲಿ ಪೊಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಮೂಲಕ ಈ ಸರ್ಕಾರಿ ಆಸ್ಪತ್ರೆಗೆ ಇಬ್ಬರು ಮುಖ್ಯಮಂತ್ರಿಗಳು ಭೇಟಿ ನೀಡಿದಂತಾಗಿದೆ.